ADVERTISEMENT

ನಾಳೆ ಬಂಟ್ವಾಳಕ್ಕೆ ಸಿಎಂ ಸಹಿತ ಗಣ್ಯರ ದಂಡು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 8:35 IST
Last Updated 21 ಅಕ್ಟೋಬರ್ 2017, 8:35 IST

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ₹252.50 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಸಚಿವರು ಇದೇ 22ರಂದು ಬಿ.ಸಿ.ರೋಡ್‌ಗೆ ಬರಲಿದ್ದು, ಸಕಲ ಸಿದ್ಧತೆ ನಡೆದಿದೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.

ಬಂಟ್ವಾಳದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಸಿ.ರೋಡ್‌ನ ತಲಪಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೊ ಬಳಿ ವಿಶಾಲವಾದ ವೇದಿಕೆ ಮತ್ತು ಸಭಾಂಗಣ ಸಿದ್ಧಗೊಳಿಸಲಾಗಿದ್ದು, ಅಲ್ಲಲ್ಲಿ ಸ್ವಾಗತ ಕಮಾನು ಸಹಿತ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬೂಡ ಅಧ್ಯಕ್ಷ ಸದಾಶಿವ ಬಂಗೇರ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಾಹುಲ್ ಹಮೀದ್, ಚಂದ್ರಪ್ರಕಾಶ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ , ಪುರಸಭಾ ಸದಸ್ಯರಾದ ಜಗದೀಶ ಕುಂದರ್, ಪ್ರವೀಣ ಜಕ್ರಿಬೆಟ್ಟು, ಪ್ರವೀಣ ಕಿಣಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್, ಪ್ರಮುಖರಾದ ಉದಯ ಕುಮಾರ್ ಹೆಗ್ಡೆ, ಮಾಧವ ಎಸ್.ಮಾವೆ, ಜನಾರ್ದನ ಚೆಂಡ್ತಿಮಾರ್, ಎಪ್ರಿಯಂ ಸಿಕ್ವೇರ, ಮಧುಸೂಧನ ಶೆಣೈ, ಸಿದ್ದಿಕ್, ಶ್ರೀಧರ ಶೆಟ್ಟಿ, ತಹಶೀಲ್ದಾರ್ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿಮತ್ತಿತರರು ಇದ್ದರು.

ADVERTISEMENT

ಶಂಕುಸ್ಥಾಪನೆ: ನರಿಕೊಂಬು ಮತ್ತು ಸರಪಾಡಿ ಹಾಗೂ ಮಾಣಿ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇತ್ರಾವತಿ ನದಿಯಿಂದ ನೀರು ಮೇಲೆತ್ತಿ ಶುದ್ಧೀಕರಿಸುವ ಮೂಲಕ ಇಲ್ಲಿನ ಒಟ್ಟು 17 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 187 ಜನವಸತಿ ಪ್ರದೇಶಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಸಲು ₹63ಕೋಟಿ ವೆಚ್ಚದ 'ಬಹುಗ್ರಾಮ ಕುಡಿಯುವ ನೀರಿನ ಯೋಜನೆ' ಕಾಮಗಾರಿಗೆ ಅಂದು ಶಂಕು ಸ್ಥಾಪನೆ ನಡೆಯಲಿದೆ. ಇದಕ್ಕೆ ಪೂರಕ ಎಂಬಂತೆ ಅರಳ ಗ್ರಾಮದ ಮಲಾರಪಟ್ನ ಬಳಿ ಫಲ್ಗುಣಿ ಹೊಳೆಗೆ ₹ 4.85ಕೋಟಿ ವೆಚ್ಚದಲ್ಲಿ ಹೊಸ ಕಿಂಡಿ ಅಣೆಕಟ್ಟೆ ಕಾಮಗಾರಿಗೆ ಶಂಕು ಸ್ಥಾಪನೆ ನಡೆಯಲಿದೆ.

ತಾಲ್ಲೂಕಿನ ಅಜಿಲಮೊಗರು ಜುಮ್ಮಾ ಮಸೀದಿ ಮತ್ತು ಕಡೇಶ್ವಾಲ್ಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಸಂಪರ್ಕಿಸುವಂತೆ ನೇತ್ರಾವತಿ ನದಿಗೆ ಅಡ್ಡವಾಗಿ ₹31ಕೋಟಿ ವೆಚ್ಚದಲ್ಲಿ 'ಸೌಹಾರ್ದ ಸೇತುವೆ' ಹಾಗೂ ಬಂಟ್ವಾಳ ಪೇಟೆ ಬಳಿ ಪಂಜೆ ಮಂಗೇಶರಾಯರ ಹುಟ್ಟೂರು ಎಂಬ ಸವಿ ನೆನಪಿಗೆ ಇಲ್ಲಿನ ಒಟ್ಟು 51 ಸೆಂಟ್ಸ್ ಜಾಗದಲ್ಲಿ ₹5ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 'ಸ್ಮಾರಕ ಭವನ'ಕ್ಕೆ ಕೂಡಾ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.