ADVERTISEMENT

ಬಿಜೆಪಿ ಹೈಕಮಾಂಡ್‌ ಚೆಕ್‌ನಲ್ಲೇ ಹಣ ಪಡೆದಿತ್ತು

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 11:15 IST
Last Updated 13 ಫೆಬ್ರುವರಿ 2017, 11:15 IST
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು.   

ಮಂಗಳೂರು: ‘ಕಾಂಗ್ರೆಸ್‌ ಹೈಕಮಾಂಡ್‌ ಕಪ್ಪ ಕಾಣಿಕೆ ಪಡೆದಿದ್ದರೆ ಅದನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗೆ ಇಲ್ಲ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಆ ಪಕ್ಷದ ಹೈಕಮಾಂಡ್‌ ನಾಯಕರಿಗೆ ಚೆಕ್‌ ಮೂಲಕವೇ ಕಪ್ಪ ನೀಡಿರುವುದಕ್ಕೆ ದಾಖಲೆಗಳಿವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಇಲ್ಲಿನ ಸರ್ಕೀಟ್‌ ಹೌಸ್‌ನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ‘ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಯ ಹೈಕಮಾಂಡ್‌ಗಳು ಕರ್ನಾಟಕವನ್ನು ಲೂಟಿಯ ತಾಣವನ್ನಾಗಿ ಮಾಡಿ ಕೊಂಡಿವೆ. ಕಾಂಗ್ರೆಸ್‌ನವರು ನಗದು ರೂಪದಲ್ಲಿ ಕಪ್ಪ ಪಡೆದಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪ ಮಾಡುತ್ತಿದ್ದಾರೆ. ಆದರೆ, ಇವರದ್ದೇ ಪಕ್ಷದ ಹೈಕಮಾಂಡ್‌ ನಾಯಕರು ಚೆಕ್‌ ಮೂಲಕವೇ ಕಪ್ಪ ಪಡೆದಿಲ್ಲವೇ’ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯರೊಬ್ಬರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಪತ್ತೆಯಾದ ದಾಖಲೆಗಳಿಗೆ ಸಂಬಂಧಿ ಸಿದಂತೆ ಆರು ತಿಂಗಳಿನಿಂದ ವದಂತಿ ಹರಿದಾಡುತ್ತಿದೆ. ಅದನ್ನೇ ಹೊಸತು ಎಂಬಂತೆ ಯಡಿಯೂರಪ್ಪ ಹೇಳುತ್ತಿ ದ್ದಾರೆ. ಇನ್ನೂ ಹೊಸ ಬಾಂಬ್‌ ಹಾಕು ವುದಾಗಿ ಹೇಳಿದ್ದಾರೆ. ಆ ಬಾಂಬ್‌ ಅಸಲಿಯೋ? ನಕಲಿಯೋ? ಎಂಬುದನ್ನು ಕಾದು ನೋಡಬೇಕಿದೆ. ಭ್ರಷ್ಟಾಚಾರದ ವಿಷಯದಲ್ಲಿ ರಾಜ್ಯ ಸರ್ಕಾರ ಬಿಜೆಪಿ ನಾಯಕರಿಂದಲೂ ಟೀಕೆ ಎದುರಿಸಬೇಕಾದ ಸ್ಥಿತಿ ತಲುಪಿರು ವುದು ದುರ್ದೈವದ ಸಂಗತಿ ಎಂದರು.

ಮೈತ್ರಿ ಇಲ್ಲ: ‘ವಿಧಾನಸಭೆಗೆ ಇನ್ನು ಎಂಟು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಜೆಡಿಎಸ್‌ ಬಹುಮತ ಪಡೆಯುವುದು ನಿಶ್ಚಿತ. ಮಾಧ್ಯಮಗಳು ಸೇರಿದಂತೆ ಯಾರೊಬ್ಬರೂ ನಮ್ಮನ್ನು ಹಗುರವಾಗಿ ಪರಿಗಣಿಸುವ ಅಗತ್ಯವಿಲ್ಲ. ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಯಾರ ಜೊತೆಗೂ ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ. ಮತ್ತೆ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರುತ್ತೇವೆ’ ಎಂದು ಹೇಳಿದರು.

ಬರ ಪರಿಹಾರಕ್ಕಾಗಿ ನೆರವು ನೀಡುವ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ. ₹ 6 ಸಾವಿರ ಕೋಟಿ ನೆರವು ಕೋರಿ ಆರು ತಿಂಗಳ ಹಿಂದೆ  ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ₹ 1,700 ಕೋಟಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಈಗ ₹ 482 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಲ್ಲಿ ಹಣವೇ ಇಲ್ಲ ಎಂಬ ಮಾಹಿತ ದೊರಕಿದೆ. ನೋಟುಗಳ ರದ್ಧತಿ ಬಳಿಕ ಕಪ್ಪು ಹಣ ದೇಶದ ಖಜಾನೆಗೆ ವಾಪಸು ಬಂದಿಲ್ಲವೇ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಬೇಕು ಎಂದರು.

ಸಮಿತಿ ರಚನೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ಹಿರಿಯ ಮುಖಂಡ ಅಮರನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರಮುಖರ ಸಮಿತಿಯನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳ ಕುರಿತು ಈ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದರು.
ಪಕ್ಷದ ರಾಜ್ಯ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ವಿಟ್ಲ ಮಹಮ್ಮದ್ ಕುಂಞಿ ಹಾಜರಿದ್ದರು.

ವಿರೋಧಿಸುವ ಸ್ಥಿತಿಯಲ್ಲಿಲ್ಲ

ADVERTISEMENT

‘ಎತ್ತಿನಹೊಳೆ ಯೋಜನೆಯಿಂದ ಬಯಲುಸೀಮೆ ಜನರಿಗೆ ಅನುಕೂಲ ಆಗುವುದಿಲ್ಲ. ಆದರೆ, ಈಗ ಬಹಿರಂಗವಾಗಿ ಯೋಜನೆಯನ್ನು ವಿರೋಧಿಸುವ ಸ್ಥಿತಿಯಲ್ಲಿ ನಾನು ಇಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

‘ವಿರೋಧಿಸಿದರೆ ಆ ಭಾಗದ ಜನರು ತಪ್ಪು ತಿಳಿಯುತ್ತಾರೆ. ಈ ಯೋಜನೆಯಿಂದ ಅನುಕೂಲ ಆಗುವುದಿಲ್ಲ ಎಂದು ನಾನು ಹಿಂದಿನಿಂದಲೂ ಹೇಳಿದ್ದೇನೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪರ್ಯಾಯ ಕ್ರಮ ಕೈಗೊಳ್ಳಲಿದೆ. ಯೋಜನೆ ಹೆಸರಿನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲಿದೆ. ಡಿ.ವಿ.ಸದಾನಂದ ಗೌಡ ನೇತೃತ್ವದ ಬಿಜೆಪಿ ಸರ್ಕಾರ ಯೋಜನೆ ರೂಪಿಸಿದಾಗ ಸಂಸದ ನಳಿನ್‌ಕುಮಾರ್‌ ಕಟೀಲ್‌ ಏಕೆ ಬಾಯಿ ಮುಚ್ಚಿಕೊಂಡಿದ್ದರು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.