ADVERTISEMENT

ಮಹಿಳೆ, ಮಕ್ಕಳ ರಕ್ಷಣೆಗೆ ಮಾದರಿ ಯೋಜನೆ

ಕುಂದಾಪುರ: ಸಂವಾದ ಕಾರ್ಯಕ್ರಮದಲ್ಲಿ ಶಿಲ್ಪಾ ನಾಗ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 9:50 IST
Last Updated 9 ಮಾರ್ಚ್ 2017, 9:50 IST
ಹೆಸ್ಕುತ್ತೂರು (ಬೈಂದೂರು): ಕುಂದಾ ಪುರದ ಕನ್ಸರ್ನ್ಡ್‌ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಖಾತರಿ ಮತ್ತು ರಕ್ಷಣೆಗೆ ಮಾದರಿ ಯೋಜನೆ ರೂಪಿಸಿ ಅನುಷ್ಠಾನಿ ಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇಲಾಖೆಗಳ ಅಧಿಕಾರಿಗಳೊಡನೆ ಸಮಾ ಲೋಚಿಸುವುದು ಅಗತ್ಯ ಎಂದು ಕುಂದಾಪುರದ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್ ಹೇಳಿದರು. 
 
ಮಹಿಳಾ ದಿನಾಚರಣೆ ನಿಮಿತ್ತ ಕೊರ್ಗಿ ಗ್ರಾಮ ಪಂಚಾಯಿತಿ ಮತ್ತು ಸಿಡಬ್ಲ್ಯೂಸಿ ಸಹಯೋಗದಲ್ಲಿ ಹೆಸ್ಕು ತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧ ವಾರ  ನಡೆದ ಮಕ್ಕಳ ಮತ್ತು ಮಹಿಳೆ ಯರ ಹಕ್ಕು ಮತ್ತು ರಕ್ಷಣೆ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. 
 
ಕಾರ್ಯಕ್ರಮದಲ್ಲಿ ನೀರಿನ ಅಪಾ ಯಕಾರಿ ವಲಯಗಳು, ಅಕ್ರಮ ಮದ್ಯ ಮಾರಾಟದಿಂದ ಉದ್ಭವಿಸುವ ಸಮಸ್ಯೆಗಳು ಮತ್ತು ರಕ್ಷಣೆಯ ಹೆಸರಿನಲ್ಲಿ ನಡೆಯುವ ಶೋಷಣೆ ಕುರಿತು ಮಕ್ಕಳು, ಬಾಲ ಕಾರ್ಮಿಕರು, ಮಹಿಳೆಯರು, ಜನಪ್ರತಿನಿಧಿಗಳು, ಸಂಘಟನೆಯ ಕಾರ್ಯಕರ್ತರು ವಾಸ್ತವಾಂಶ ಮತ್ತು ವಿಚಾರಗಳನ್ನು ಹಂಚಿಕೊಂಡು, ಸಂವಾದ ನಡೆಸಿದರು. 
 
ಕಲ್ಲು ಕೋರೆಯಲ್ಲಿ ಸಂಭವಿಸುವ ಮಕ್ಕಳ ಸಾವಿನ ತಡೆಗೆ ಆಲೂರಿನಲ್ಲಿ ಕೈಗೊಂಡ ಕ್ರಮವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್. ಮಂಜಯ್ಯ ಶೆಟ್ಟಿ ವಿವರಿಸಿದರು. ಇಂತಹ ಕ್ರಮದ ಜತೆಗೆ ಪರ್ಯಾಯಗಳ ಕುರಿತು ಚಿಂತಿಸಬೇಕೆಂದು ಶಿಲ್ಪಾ ನಾಗ್ ಸಲಹೆಯಿತ್ತರು. ದೇವಿ, ಶಂಕರನಾ ರಾಯಣ ಚಾತ್ರ ಮತ್ತು ಸಂಗೀತಾ ಅಕ್ರಮ ಮದ್ಯ ಮಾರಾಟ ನಡೆಯು ತ್ತಿರುವ ಗ್ರಾಮಗಳ ಹೆಸರು ನೀಡಿ ಅದರ ತಡೆಗೆ ಆಗ್ರಹಿಸಿದರು.
 
ಕುಟುಂಬದ ಜೀವನ ನಿರ್ವಹಣೆಗಾಗಿ ಅನಿವಾರ್ಯವಾಗಿ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಬಾಲಕಾರ್ಮಿಕರೆಂಬ ಕಾರಣಕ್ಕೆ ಇಲಾಖೆ ರಕ್ಷಣೆಯ ಹೆಸರಿನಲ್ಲಿ ಅನುಭವಿಸಿದ ಅವಮಾನ, ಶೋಷಣೆಯನ್ನು ವಿವರಿಸಿ ಕಣ್ಣೀರು ಹಾಕಿದರು. 
 
ಅಂತಿಮವಾಗಿ ಸಂವಾದದಲ್ಲಿ ಮೂಡಿದ ಮಕ್ಕಳ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಮೂರು ಪ್ರಧಾನ ವಿಷಯಗಳ ಕುರಿತು ಯೋಜನೆ ರೂಪಿಸಿ ಅನುಷ್ಠಾನಿಸಲು, ಅದಕ್ಕಾಗಿ ಗ್ರಾಮ, ತಾಲ್ಲೂಕು, ಜಿಲ್ಲಾ ಹಂತದಲ್ಲಿ ಕಾರ್ಯಪಡೆಗಳನ್ನು ರಚಿಸಿಕೊಳ್ಳಲು ನಿರ್ಧರಿಸಲಾಯಿತು. 
 
ಶ್ರೀನಿವಾಸ ಗಾಣಿಗ ಸ್ವಾಗತಿಸಿದರು. ಎಸ್. ಜನಾರ್ದನ, ಸತೀಶ ಪೂಜಾರಿ, ಕೃಪಾ ಎಂ. ಎಂ. ವಿವಿಧ ವಿಷಯ  ಪ್ರಸ್ತಾಪಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿ ರ್ವಹಣಾಧಿಕಾರಿ ಚೆನ್ನಪ್ಪ ಮೊಯಿಲಿ, ಕಾರ್ಮಿಕ ನಿರೀಕ್ಷಕ ಅಧಿಕಾರಿ ಸತ್ಯನಾ ರಾಯಣ, ಕುಂದಾಪುರ ಎಸ್‌ಐ ನಾಸೀರ್  ಹುಸೇನ್, ಕೊರ್ಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಿ ಕುಲಾಲ್ತಿ, ಅಭಿವೃದ್ಧಿ ಅಧಿಕಾರಿ ಹರೀಶ್, ಸಿಡ ಬ್ಯ್ಲೂಸಿಯ ಬಿ.ದಾಮೋದರ ಆಚಾರ್ಯ, ನಂದನಾ ರೆಡ್ಡಿ, ಪ್ರಭಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.