ADVERTISEMENT

ವಿಟ್ಲ ಗಲಭೆ ಪ್ರಕರಣ: 100 ಜನರ ವಿರುದ್ಧ ಪ್ರಕರಣ

ಕಾಂಗ್ರೆಸ್‌ ಕೃತ್ಯ, ಪೊಲೀಸ್‌ ವರ್ತನೆಗೆ ಹಿಂಜಾವೇ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 8:42 IST
Last Updated 22 ಮೇ 2018, 8:42 IST

ವಿಟ್ಲ: ಕಾಂಗ್ರೆಸ್‌ ವಿಜಯೋತ್ಸವ ವೇಳೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಎರಡೂ ತಂಡಗಳ ಸುಮಾರು 100 ಮಂದಿಯ ವಿರುದ್ಧ ವಿಟ್ಲ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.

ವಿವರ: ಕೆಲಿಂಜದಲ್ಲಿ ನಡೆದುಕೊಂಡು ಹೋಗುವಾಗ ಕೇಪುವಿನ ಚೀಕು, ಸುಮಂತ್, ಅಭಿಲಾಶ್, ಆನಂದ ಸೇರಿ ಇನ್ನೊಬ್ಬನ ಮೇಲೆ ಅವಾಚ್ಯವಾಗಿ ಬೈದುದಲ್ಲದೆ ಅಬ್ದುಲ್ ಅಜೀಜ್ ಅವರಿಗೆ ಬಾಟಲಿಯಿಂದ ತಲೆಗೆ ಹೊಡೆದ ಬಗ್ಗೆ ಕೆಲಿಂಜ ನಿವಾಸಿ ಮಹಮ್ಮದ್ ಸಾಲೀಮ್ ಎಂಬವರು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.

ಕೆಲಿಂಜ ಎಂಬಲ್ಲಿಗೆ ತಲುಪಿದಾಗ ಒಂದು ಪಿಕಪ್ ವಾಹನ ಹಾಗೂ ಹಲವಾರು ಬೈಕಿನಲ್ಲಿ ಬೊಬ್ಬೆ ಹಾಕುತ್ತಾ ವಿಜಯೋತ್ಸವ ಮಾಡಿಕೊಂಡು ಬರುತ್ತಿದ್ದ ಗುಂಪು ಹಿಂದೂ ದೇವರಿಗೆ ಅವಹೇಳನ ಮಾಡಿದ್ದೂ ಅಲ್ಲದೆ, ಹಿಂದೂ ಸಂಘಟನೆಯ ಕಾರ್ಯಕರ್ತ ಎಂಬ ನಿಟ್ಟಿನಲ್ಲಿ ಚಂದ್ರಶೇಖರ ಅವರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಬಗ್ಗೆ ಮಂಗಲಪದವಿನ ಸಾಲಿ, ಶಂಶೀರ್ ಪಂಚಾಯಿತಿ ಸದಸ್ಯ ಉಬೈದ್, ಕೆಲಿಂಜದ ಸಾಲೀಂ, ಅಜೀಜ್, ಕೊಡಪದವಿನ ಸಮ್ಮಸ್, ಸಫ್ವಾನ್ ಹಾಗೂ ಇತರ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ಮಂಗಲಪದವು ಎಂಬಲ್ಲಿ ಹಸೈನಾರ್ ಎಂಬವರ ಮನೆಗೆ ಮಿಥುನ್ ಮತ್ತು ಇತರರು ಅಕ್ರಮವಾಗಿ ಗುಂಪು ಸೇರಿ ಮನೆಗೆ ಕಲ್ಲು ಹೊಡೆದು ಕಿಟಕಿ ಗಾಜುಗಳನ್ನು ಪುಡಿ ಮಾಡಿದ ಬಗ್ಗೆ ಹಾರೂನ್ ರಶೀದ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಕುಡ್ಪಲ್ತಡ್ಕ ತಿರುವು ಬಳಿ ಸುಮಾರು 10-12 ಜನರಿದ್ದ ಗುಂಪು ಕೈಯಲ್ಲಿ ಮರದ ದೊಣ್ಣೆಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿ ತಲೆಗೆ, ಕಾಲಿಗೆ ಹಾಗೂ ಬೆನ್ನಿಗೆ ಹಲ್ಲೆ ಮಾಡಿದ್ದೂ ಅಲ್ಲದೆ ಬೈಕ್ ಗೆ ಮರದ ದೊಣ್ಣೆಯಲ್ಲಿ ಹೊಡೆದ ಬಗ್ಗೆ ಉಮೇಶ್ ದೂರು ನೀಡಿದ್ದಾರೆ. ಪ್ರದೀಪ್, ವಿನೋದ್, ರಮೇಶ್ ಶೆಟ್ಟಿ, ಆಶ್ವಥ್, ವಿಶ್ವೇಶ್ವರ ಭಟ್, ಅಂಬಾಪ್ರಸಾದ್, ವಚನ್, ಸುದರ್ಶನ್ ಶೆಟ್ಟಿ, ಪ್ರಸಾದ್, ಶರತ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕುಡ್ಪಲ್ತಡ್ಕ ಅನಿಯಾಲಕೋಡಿ ಎಂಬಲ್ಲಿರುವ ಶ್ರೀ ಭಾರತಿ ಸಂಕೀರ್ಣ ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಆನೆಕಲ್ಲು ಕಡೆಯಿಂದ ಕಾಂಗ್ರೆಸ್ ವಿಜಯೋತ್ಸವ ನಿಮಿತ್ತ ಸುಮಾರು 150 ರಿಂದ 200 ಜನರು ಜೈಕಾರ ಹಾಕುತ್ತಾ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬೈಕ್, ಕಾರು ಹಾಗೂ ಪಿಕಪ್ ನಲ್ಲಿ ಕಲ್ಲು, ಸೋಡಾ ಬಾಟ್ಲಿ, ಸೋಂಟೆ ಮತ್ತು ತಲವಾರುಗಳೊಂದಿಗೆ ಕುಡಲ್ತಡ್ಕ ಜಂಕ್ಷನ್‌ಗೆ ಬಂದು ಹಸಿರು ದ್ವಜ ಹಿಡಿದು ಪಾಕಿಸ್ತಾನದ ಪರ ಘೋಷಣೆ, ಶ್ರೀ ರಾಮನಿಗೆ ಅವಹೇಳನದ ಘೋಷಣೆ ಕೂಗಿರುವ ಬಗ್ಗೆ ಬಿ. ವಿಘ್ವೇಶ್ವರ ಭಟ್ ಅವರು ದೂರು ನೀಡಿದ್ದಾರೆ.

ಅನ್ವರ್ ಎ, ಎ.ಕೆ. ಖಾದರ್, ಮೊಹಮ್ಮದ್ ಆಲಿ ಮಿತ್ತನಡ್ಕ, ಕಲೀಲ್ ದೇವಸ್ಯ, ಫಾರೂಕ್ ಮುಗುಳಿ, ಇರ್ಷಾದ್ ಕನ್ಯಾನ, ಸತ್ತಾರ್ ಕನ್ಯಾನ, ಅನ್ವರ್ ಮುಗುಳಿ, ಸಫೀಕ್ ದರ್ಖಾಸು, ನೌಫಾಲ್ ಸೇರಾಜೆ, ಉಸ್ಮಾನ್, ಮಜೀದ್ ಮರಾಠಿ ಮೂಲೆ, ಆಸೀಫ್ ಮಂಡ್ಯೂರು ಮತ್ತು ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡು ತಂಡದ ಸುಮಾರು 23 ಮಂದಿಯ ವಿರುದ್ಧ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಹಾಗೂ ಕಾನೂನು ಉಲ್ಲಂಘಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.

ಮಂಗಲಪದವು ಎಂಬಲ್ಲಿಗೆ ಕೆಲವರು ಬೈಕಿನಲ್ಲಿ ಮತ್ತು ಉಳಿದವರು ಅಲ್ಲಿ ಓಡಾಡುವ ಜನರನ್ನು ಮತ್ತು ವಾಹನಗಳನ್ನು ತಡೆದು ನಿಲ್ಲಿಸುತ್ತಾ ಮುಸ್ಲಿಂ ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗುತ್ತಾ ಗಲಾಟೆ ಮಾಡುತ್ತಿದ್ದರು. ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘನೆ ಮಾಡಿ ಕರ್ತವ್ಯಕ್ಕೆ ಅಡೆತಡೆ ಮಾಡಿದ ಆರೋಪದಲ್ಲಿ ಸುಮಾರು 30 ಬಿ.ಜೆ.ಪಿ ಕಾರ್ಯಕರ್ತರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎನ್ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.

ಕುಡ್ತಮುಗೇರು ಎಂಬಲ್ಲಿ ಕೊಡಂಗೈ ಕಡೆಯಿಂದ ಸುಮಾರು 30 ಜನರು ಬೈಕಿನಲ್ಲಿ ಬಂದು ಕುಡ್ತಮುಗೇರು ಜಂಕ್ಷನ್ ನಲ್ಲಿ ನಿಲ್ಲಿಸಿ ಬಿ.ಜೆ.ಪಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹಿಂದೂ ದೇವರ ಬಗ್ಗೆ ನೀಚ ಪದಗಳಿಂದ ನಿಂದಿಸಿ, ಮುದ್ದ, ಧನ್ ರಾಜ್ ಎಂ, ಲಕ್ಷ್ಮೀಶ ಅವರಿಗೆ ವಿವಿಧ ರೀತಿಯ ವಸ್ತುಗಳಿಂದ ಹಲ್ಲೆ ನಡೆಸಿದ್ದೂ ಅಲ್ಲದೆ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆಂದು ಶರತ್ ಕುಮಾರ್ ಕೆ ದೂರು ನೀಡಿದ್ದಾರೆ.

ಇರ್ಷಾದ್ ಕುಡ್ತ ಮಗೇರು, ಸಂಶುದ್ದೀನ್ ಕುಡ್ತಮುಗೇರು, ಅಕ್ಬರ್ ಕುಡ್ತ ಮುಗೇರು, ಬಾರಿಕ್ ಕುಡ್ತ ಮುಗೇರು, ಶಫಿಲ್ ವಿಟ್ಲ, ಅಬ್ದುಲ್ ಪತಾಹ್ ಕರೈ, ನೂಫಿಜ್ ಕರೈ ಹಾಗೂ ಇತರ 15 ಜನರ ಮೇಲೆ ಪ್ರಕರಣ ದಾಖಲಾಗಿದೆ. ಹರ್ಷಿತ್ ಹಾಗೂ ಗಣೇಶ್ ಎಂಬವರು ನಡೆದು ಹೋಗುತ್ತಿದ್ದ ಸಮಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಎಂಬ ನಿಟ್ಟಿನಲ್ಲಿ ಹಲ್ಲೆ ನಡೆಸಿದ ಬಗ್ಗೆ ಜೈನುದ್ದೀನ್, ನಿಸಾರ್, ಹನೀಫ್, ನವಾಜ್, ಇಕ್ಬಾಲ್ ಹಾಗೂ ಇತರ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಸಂದೇಶ ರವಾನಿಸಿದ ನಿತಿನ್ ವಿರುದ್ಧ ವಿಟ್ಲ ಎಸ್‌ಐ ಚಂದ್ರಶೇಖರ ಪ್ರಕರಣ ದಾಖಲಿಸಿದ್ದಾರೆ.

ಹಿಂದೂ ಜಾಗರಣ ವೇದಿಕೆ ಖಂಡನೆ

ವಿಜಯೋತ್ಸವದ ನೆಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಟ್ಲ ಹಾಗೂ ಕನ್ಯಾನದ ಪರಿಸರದಲ್ಲಿ ಹಿಂದೂ ಧರ್ಮದ, ಹಿಂದೂ ದೇವರುಗಳ ನಿಂದನೆ, ಮಠ ಮಂದಿಗಳ ಅವಹೇಳನ, ಹಿಂದೂ ಸಂಘಟನೆಗಳಾದ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ತು, ಬಜರಂಗ ದಳದ ನಿಂದನೆ ಮತ್ತು ಅಮಾಯಕ ಬಿಜೆಪಿ ಕಾರ್ಯಕರ್ತರ ಮೇಲಿನ ಮಾರಕ ಹಲ್ಲೆಯನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಸಮಿತಿ ತೀವ್ರವಾಗಿ ಖಂಡಿಸಿದೆ.

‘ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿ, ಗಲಭೆಯನ್ನು ಹಬ್ಬಿಸುವ ಕೃತ್ಯ ಇದಾಗಿರುತ್ತದೆ. ಇಂತಹ ಸಮಾಜಘಾತುಕರ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಬಲವಾಗಿ ಆಗ್ರಹಿಸುತ್ತದೆ. ಹಲ್ಲೆಕೋರರ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ, ಬಂಧಿಸದೆ ಅಮಾಯಕ ಹಿಂದೂಗಳ ಮನೆಗೆ ನುಗ್ಗಿ ದೌರ್ಜನ್ಯ ನಡೆಸಿದ ವಿಟ್ಲದ ಪೊಲೀಸ್ ಸಿಬ್ಬಂದಿ ಕೃತ್ಯವನ್ನು  ಖಂಡಿಸುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.