ADVERTISEMENT

‘ವಿವಿಧತೆಯಲ್ಲಿ ಏಕತೆ ಕೊಂಕಣಿಯ ಸೊಗಸು’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 5:30 IST
Last Updated 20 ನವೆಂಬರ್ 2017, 5:30 IST

ಮಂಗಳೂರು: ಕೊಂಕಣಿ ಭಾಷೆಯನ್ನು ಹಲವು ಕಡೆಗಳಲ್ಲಿ ಹಲವು ಸಮುದಾಯಗಳು ಭಿನ್ನ ರೀತಿಯಲ್ಲಿ ಪ್ರಯೋಗ ನಡೆಸಿದರೂ ಅವರಲ್ಲಿನ ವೈವಿಧ್ಯತೆಯಲ್ಲಿ ಏಕತೆ ಮೆಚ್ಚುಗೆಯಾಗುವ ಅಂಶ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ ಭೈರಪ್ಪ ಹೇಳಿದರು.

ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶಕ್ತಿ ನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಭಾನುವಾರ ನಡೆದ ವಿಶ್ವ ಕೊಂಕಣಿ ಸಮಾರೋಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೊಂಕಣಿ ಸಮುದಾಯದವರು ಶ್ರಮಿಕರು, ಲೆಕ್ಕಾಚಾರದ ಮನುಷ್ಯರಾದರೂ ಕೂಡ ಎಂದಿಗೂ ಅವರು ಮೋಸ ಮಾಡುವವರಲ್ಲ. ಇವರು ವ್ಯಾಪಾರದಲ್ಲಿ ಮಾತ್ರವಲ್ಲದೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಸ್ಥಾಪನೆ ಹಾಗೂ ಉದ್ಯಮಗಳಲ್ಲಿಯೂ ಅವರ ಸಾಧನೆ ಅಪಾರವಿದೆ’ ಎಂದು ಹೇಳಿದರು.

ADVERTISEMENT

‘ಮಂಗಳೂರು ವಿಶ್ವವಿದ್ಯಾಲಯ ಕೂಡ ಕಳೆದ ವರ್ಷದಿಂದ ಕೊಂಕಣಿ ಎಂ.ಎ ಪದವಿಯನ್ನು ಪ್ರಾರಂಭಿಸಿ ಯಶಸ್ಸಿನಿಂದ ಮುಂದೆಸಾಗುತ್ತಿದೆ. ಕೊಂಕಣಿ ಅಧ್ಯಯನ ಪೀಠದ ವತಿಯಿಂದಲೂ ಕೂಡ ಸಾಕಷ್ಟು ಸಂಶೋಧನೆ ಹಾಗೂ ಅಧ್ಯಯನಗಳು ನಡೆಯುತ್ತಿದೆ ಎಂದರು.

ಗೂಗಲ್‌ ಸಾಹಿತ್ಯ: ಈಚಿನ ದಿನಗಳಲ್ಲಿ ಮಕ್ಕಳು ತಮಗೆ ಬೇಕಾದ ವಿಚಾರವನ್ನು ಗೂಗಲ್‌ನಲ್ಲಿ ಹುಡುಕುವುದರಲ್ಲಿ ಯಶಸ್ವಿಯಾಗುತ್ತಿದ್ದು, ಸಾಹಿತ್ಯ ಓದುವ ಪರಿಪಾಠ ಕಡಿಮೆಯಾಗುತ್ತಿದೆ ಎಂದು ಮಲಯಾಳ ಬರಹಗಾರ ಎನ್.ಎನ್. ಮಾಧವನ್ ಅಭಿಪ್ರಾಯೊಟ್ಟರು.

ಯುರೋಪಿಯನ್ನರು ಭಾರತಕ್ಕೆ ಬರುವ ಮೊದಲೇ ಕೊಂಕಣಿಗರು ಭಾರತದಲ್ಲಿ ನೆಲೆಸಿದ್ದು, ಅವರು ಕೊಂಕಣಿಯನ್ನು ಪ್ರಬಲ ಭಾಷೆಯಾಗಿ ಬಳಸಿಕೊಂಡು ವ್ಯವಹಾರ ಮಾಡುತ್ತಿರುವ ವಿಚಾರ ಇತಿಹಾಸದಲ್ಲಿ ದಾಖಲಾಗಿದೆ ಎಂದು ಗೋವಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವರುಣ್ ಶೆಣೈ ಹೇಳಿದರು.

ಮಕ್ಕಳ ಸಾಹಿತ್ಯ ಎನ್ನುವುದು ಮಕ್ಕಳಿಗೆ 3 ರೀತಿಯಲ್ಲಿ ಅನಿವಾರ್ಯವಾಗುತ್ತದೆ. ಮಕ್ಕಳಲ್ಲಿ ಉತ್ತಮ ಕನಸು ಬಿತ್ತುವ ಜೊತೆಗೆ ಮೌಲ್ಯಗಳನ್ನು ಹೇಳುತ್ತದೆ. ಕುತೂಹಲ ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸುತ್ತದೆ. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವು ಮೂಡಿಸಲು ಮಕ್ಕಳ ಸಾಹಿತ್ಯ ಅಗತ್ಯ ಎಂದರು.

ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟಗೊಂಡ ಮೂವರು ಬರಹಗಾರರ ಕೊಂಕಣಿ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಕೊಂಕಣಿ ಸಲಹಾ ಸಮಿತಿಯ ಸಂಯೋಜಕ ತನಜಿ ಹರ್ಲಂಕರ್, ಬಿ.ಆರ್. ಭಟ್, ಬೋಳಂತೂರು ಪ್ರಭಾಕರ್ ಪ್ರಭು, ಡಾ.ಕಿರಣ್ ಬುಡ್ಕುಲೆ ಇದ್ದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಸ್ವಾಗತಿಸಿದರು. ಶಕುಂತಲಾ ಕಿಣಿ ನಿರೂಪಿಸಿದರು.

* * 

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೊಂಕಣಿಗರ ಶ್ರಮವಿದೆ. ಇವರು ತಮ್ಮ ಮಾತೃ ಭಾಷೆಗಿಂತ ಹೆಚ್ಚಾಗಿ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ
ಪ್ರೊ.ಕೆ.ಭೈರಪ್ಪ
ಮಂಗಳೂರು ವಿವಿ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.