ADVERTISEMENT

ವೃದ್ಧೆಯ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಒಂದನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ತೀರ್ಪು

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:54 IST
Last Updated 18 ಜನವರಿ 2017, 5:54 IST
ವೃದ್ಧೆಯ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ
ವೃದ್ಧೆಯ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ   

ಮಂಗಳೂರು: ಚಿಕಿತ್ಸೆ ಪಡೆಯುವುದ ಕ್ಕಾಗಿ ನಗರಕ್ಕೆ ಬಂದಿದ್ದ ಕೇರಳ ರಾಜ್ಯದ ಎರ್ನಾಕುಳಂ ಜಿಲ್ಲೆಯ ವೃದ್ಧೆಯೊಬ್ಬರನ್ನು ಲಾಡ್ಜ್‌ಗೆ ಕರೆದೊಯ್ದು ಅವರಿಗೆ ಮತ್ತು ಬರುವ ಮಾತ್ರೆಗಳನ್ನು ನೀಡಿ, ಉಸಿ ರುಗಟ್ಟಿಸಿ ಕೊಲೆ ಮಾಡಿದ ಬಳಿಕ ಮೃತಳ ಚಿನ್ನಾಭರಣ ಹೊತ್ತೊಯ್ದಿದ್ದ ಅದೇ ರಾಜ್ಯದ ಕಣ್ಣೂರು ಜಿಲ್ಲೆಯ ವ್ಯಕ್ತಿ ಯೊಬ್ಬನಿಗೆ ನಗರದ ಮೊದಲನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾ ವಧಿ ಶಿಕ್ಷೆ ವಿಧಿಸಿದೆ.

ಕಣ್ಣೂರಿನ ತಳಿಪರಂಬ ಸಮೀಪದ ಪಟುವಾಂ ಕಣ್ಣೂರುಮನೆ ನಿವಾಸಿ ಕೆ.ರವೀಂದ್ರನ್‌ (63) ಶಿಕ್ಷೆಗೊಳಗಾದ ವ್ಯಕ್ತಿ. ಈತ ನಗರದ ನವರತ್ನ ಡಿಲಕ್ಸ್‌ ಲಾಡ್ಜ್‌ನಲ್ಲಿ 2014ರ ಜನವರಿ 15ರಂದು ಎರ್ನಾಕುಳಂ ಜಿಲ್ಲೆಯ ಪಳ್ಳಿಕಾವಳದ ಎಲಿ ಕುಟ್ಟಿ (70) ಅವರನ್ನು ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಸಾರಿದೆ. ಮಂಗಳ ವಾರ ಈ ಕುರಿತ ಅಂತಿಮ ಆದೇಶ ಪ್ರಕಟಿಸಿದ ನ್ಯಾಯಾಧೀಶ ಸಿ.ಎಂ. ಜೋಶಿ, ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ₹ 5,000 ದಂಡ ವಿಧಿಸಿ ಆದೇಶ ಹೊರಡಿಸಿದರು.

ರವೀಂದ್ರನ್‌ ಮೊದಲು ಖಾಸಗಿ ಬಸ್‌ನಲ್ಲಿ ನಿರ್ವಾಹಕನಾಗಿದ್ದ. ನಂತರ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡ ಗಿಸಿಕೊಂಡಿದ್ದು, ಮೃತ ಮಹಿಳೆ ಆಗಾಗ ಬಸ್ಸಿನಲ್ಲಿ ಬರುತ್ತಿದ್ದರಿಂದ ಇಬ್ಬರೂ ಪರಿ ಚಿತರಾಗಿದ್ದರು.

ಎಲಿ ಕುಟ್ಟಿ 2014ರ ಜ.14ರಂದು ಚಿಕಿತ್ಸೆಗಾಗಿ ಕಣ್ಣೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದರು. ಪ್ರಯಾಣದ ಮಧ್ಯೆ ಆರೋಪಿ ಜೊತೆ ಯಾಗಿದ್ದ. ಇಬ್ಬರೂ ಆ ದಿನ ಸಂಜೆ ನವ ರತ್ನ ಲಾಡ್ಜ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ತಿಳಿಸಿದ್ದರು.

ಆ ದಿನ ರಾತ್ರಿ ಮತ್ತು ಬರಿಸುವ ಮಾತ್ರೆಗಳನ್ನು ವೈನ್‌ನಲ್ಲಿ ಬೆರೆಸಿ ಮಹಿ ಳೆಗೆ ನೀಡಿದ್ದ. ಜ.15ರ ನಸುಕಿನಲ್ಲಿ ದಿಂಬಿ ನಿಂದ ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಿದ್ದ. ಶವವನ್ನು ಕೊಠಡಿಯಲ್ಲೇ ಬಿಟ್ಟು, ಚಿನ್ನಾಭರಣ ದೋಚಿಕೊಂಡು ಕೊಠಡಿಯ ಕೀಲಿ ಹಾಕಿಕೊಂಡು ಪರಾ ರಿಯಾಗಿದ್ದ. ಜ.17ರ ಬೆಳಿಗ್ಗೆ ಲಾಡ್ಜ್‌ನ ಸಿಬ್ಬಂದಿ ಬಾಗಿಲು ಒಡೆದು ಒಳ ಪ್ರವೇಶಿ ಸಿದಾಗ ಎಲಿ ಕುಟ್ಟಿ ಅವರ ಶವ ಮಂಚದ ಮೇಲೆ ಬಿದ್ದಿತ್ತು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಮಂಗ ಳೂರು ಉತ್ತರ ಪೊಲೀಸ್ ಠಾಣೆಯ ಆಗಿನ ಇನ್‌ಸ್ಪೆಕ್ಟರ್ ಚೆಲುವರಾಜು ಅವರು ಜ.23ರಂದು ಪಟುವಾಂನಲ್ಲಿ ರವೀಂದ್ರನ್‌ನನ್ನು ಬಂಧಿಸಿದ್ದರು. ಆತನ ವಿರುದ್ಧ ಕೊಲೆ, ದೋಚುವ ಉದ್ದೇಶ ದಿಂದ ಹಿಂಸಿಸಿರುವುದು, ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪದ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಎಲಿ ಕುಟ್ಟಿ ಸಾವು ಸಹಜವಾಗಿಯೇ ಸಂಭವಿಸಿದೆ ಎಂದು ವಿಚಾರಣೆ ವೇಳೆ ಆರೋಪಿ ವಾದಿಸಿದ್ದ. ಪೊಲೀಸರ ಪರ ವಾದಿಸಿದ್ದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ರಾಜು ಬನ್ನಾಡಿ, 19 ಸಾಕ್ಷಿಗಳ ಪಾಟಿಸವಾಲು ನಡೆಸಿದ್ದರು. ಲಾಡ್ಜ್‌ನ ಪಕ್ಕದ ಹೋಟೆಲ್‌ ಒಂದರ ಸಿಬ್ಬಂದಿಯೊಬ್ಬ ಆರೋಪಿ ಯೊಬ್ಬನನ್ನು ಗುರುತಿಸಿದ್ದು, ಲಾಡ್ಜ್‌ಗೆ ತೆರಳುವ ಮುನ್ನ ತನ್ನ ಬಳಿ ಕೊಠಡಿಗಾಗಿ ವಿಚಾರಿಸಿರುವುದಾಗಿ ಹೇಳಿಕೆ ನೀಡಿದ್ದ. ಲಾಡ್ಜ್‌ನ ಸಿಬ್ಬಂದಿಯೊಬ್ಬ ಕೊಠಡಿಗೆ ನೀರು ಪೂರೈಸಿರುವುದಾಗಿ ತಿಳಿಸಿದ್ದ.

ಶವದ ಮರಣೋತ್ತರ ಪರೀಕ್ಷೆಯ ಬಳಿಕ ಅಂಗಾಂಗಗಳನ್ನು ಹೆಚ್ಚಿನ ಪರೀ ಕ್ಷೆಗೆ ರವಾನಿಸಲಾಗಿತ್ತು. ಆದರೆ, ಅಂ ಗಾಂಗ ಮಾದರಿಗಳ ಪರೀಕ್ಷೆಯ ಬಳಿ ಕವೂ ಸಾವಿಗೆ ನಿಖರವಾದ ಕಾರಣ ಗೊತ್ತಾಗಿರಲಿಲ್ಲ. ಪರೀಕ್ಷೆಗೆ ಸಂಗ್ರಹಿಸಿದ್ದ ಮಾದರಿಗಳಲ್ಲಿ ವಿಷದ ಅಂಶ ಪತ್ತೆಯಾ ಗಿಲ್ಲ ಎಂದು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕ ಅಧಿ ಕಾರಿ ಸುಜಾತಾ ತಿಳಿಸಿದ್ದರು. ಆದರೆ, ಶವವು ಕೊಳೆಯಲು ಆರಂಭವಾದ ಬಳಿಕ ಆ ರೀತಿ ವಿಷದ ಅಂಶ ಪತ್ತೆಯಾ ಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂದ ಹೇಳಿಕೆಯನ್ನೂ ವಿಚಾರಣೆ ವೇಳೆ ನೀಡಿದ್ದರು.

ವಿಚಾರಣೆ ವೇಳೆ ಲಭ್ಯವಾದ ಸಾಂದ ರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ರವೀಂ ದ್ರನ್‌ ಅಪರಾಧಿ ಎಂಬ ಅಭಿಪ್ರಾಯ ಪ್ರಕಟಿಸಿದ ನ್ಯಾಯಾಧೀಶರು, ಜೀವಾ ವಧಿ ಶಿಕ್ಷೆ ಮತ್ತು ದಂಡ ವಿಧಿಸಿದರು. ದಂಡ ಪಾವತಿಗೆ ತಪ್ಪಿದಲ್ಲಿ ಮೂರು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿ ಸುವಂತೆ ಆದೇಶದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.