ADVERTISEMENT

ಹಳೆಯ ಬೇರಿನಿಂದ ಚಿಗುರುವುದೇ ಹೊಸತನ

‘ಏಕೀಕರಣೋತ್ತರ ಸಾಹಿತ್ಯ’ ಗೋಷ್ಠಿಯಲ್ಲಿ ಸಾಹಿತಿ ವಸುಧೇಂದ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2015, 5:34 IST
Last Updated 28 ನವೆಂಬರ್ 2015, 5:34 IST

ರತ್ನಾಕರವರ್ಣಿ ವೇದಿಕೆ(ವಿದ್ಯಾಗಿರಿ, ಮೂಡುಬಿದಿರೆ): ‘ಹಳೆಯ ಬೇರುಗಳ ಮೇಲೆ ಚಿಗುರೊಡೆಯುವುದೇ ಹೊಸ­ತನ. ಹಳೆಯತನಕ್ಕೆ ನಾವು ಒಪ್ಪಿ­ಕೊಳ್ಳುವುದಿಲ್ಲ ಎಂದರೆ, ಹೊಸತನ ಸೃಷ್ಟಿಸಲು ಸಾಧ್ಯವಿಲ್ಲ’ ಎಂದು ಸಾಹಿತಿ ವಸುಧೇಂದ್ರ ಅಭಿಪ್ರಾಯಪಟ್ಟರು.

ಇಲ್ಲಿ ನಡೆಯುತ್ತಿರುವ 12ನೇ ನುಡಿಸಿರಿಯಲ್ಲಿ ಭಾಗವಹಿಸಿ ‘ಏಕೀಕರ­ಣೋತ್ತರ ಸಾಹಿತ್ಯ: ಹೊಸತನ ಹುಡುಕಾಟ’ ಕುರಿತು ಮಾತನಾಡಿದ ಅವರು, ‘ಹೊಸತನ ಜೀವಂತಿಕೆಯನ್ನು ಸೂಚಿಸುತ್ತದೆ. ಹೊಸತನ ವ್ಯಕ್ತಿಯ ಆಂತರ್ಯದಿಂದ ಬರಬೇಕು. ಇದಕ್ಕೆ ಮೊದಮೊದಲು ವಿರೋಧ ಬರುವುದು ಸಹಜ. ಆದರೆ, ನಂತರ ಅದನ್ನು ಹೊಸತನ ಎಂದು ಜನರು, ವಿಮರ್ಶಕರು ಸ್ವೀಕರಿಸುತ್ತಾರೆ’ ಎಂದು ವಿಶ್ಲೇಷಿಸಿದರು.

‘ಅನುಕರಣೆಯಿಂದ ಹೊಸತನ ತರಲು ಸಾಧ್ಯವಿಲ್ಲ. ಅನುಕರಣೆ ಸುಲಭ ಹಾದಿಯೆಂದು ಅದರ ಕಡೆ ಹೆಜ್ಜೆ ಹಾಕಬಾರದು. ಅಂತಹ ಸಾಹಿತ್ಯ ಜನರ ಮೆಚ್ಚುಗೆ ಪಡೆಯುವುದಿಲ್ಲ. ಅನುಕರಣೆ ಜೀವಂತ ಹೊಸತನ ಅಲ್ಲ. ಹೊಸತನಕ್ಕೆ ಬೇರು ಬೇಕು. ಆದ್ದರಿಂದ ಯುವ ಸಾಹಿತಿಗಳು ಅನುಕರಣೆ ಸಾಹಿತ್ಯದತ್ತ ವಾಲಬಾರದು. ಬದಲಿಗೆ ಜಗತ್ತಿಗೆ ತೆರೆದುಕೊಳ್ಳಬೇಕು. ಇದರಿಂದ ಹೊಸ ಸಂಗತಿಗಳು ತಿಳಿದು, ಹೊಸತನ ಹುಟ್ಟಿಕೊಳ್ಳುತ್ತದೆ’ ಎಂದು ಹೇಳಿದರು.

ಸಾಹಿತಿ ಡಾ. ಜಿ.ಬಿ. ಹರೀಶ್ ಅವರು ಏಕೀಕರಣ ಪೂರ್ವ ಸಾಹಿತ್ಯದ ಬಗ್ಗೆ ಮಾತನಾಡಿ,‘ಕನ್ನಡ ಸಾಹಿತ್ಯದಲ್ಲಿ ನವೋದಯ ಎನ್ನುವುದೇ ಹೊಸತನದ ಹುಡುಕಾಟ. ಇಲ್ಲಿ ಲೇಖಕನ ಆಶಯ ಸಾಮಾನ್ಯ ಜನರಿಗೆ ಅರ್ಥವಾಗಬೇಕು ಎಂಬ ತುಡಿತ ಇತ್ತು. ಸಕಲರಿಗೆ ಒಳ್ಳೆಯ­ದಾಗಲಿ ಎನ್ನುವುದೇ ಹೊಸತನದ ಹುಡುಕಾಟದ ತಿರುಳು’ ಎಂದರು.

‘ಏಕೀಕರಣ ಪೂರ್ವ ಸಾಹಿತ್ಯದಲ್ಲಿ ನಮ್ಮ ಹಿರಿಯ ಸಾಹಿತಿಗಳು ವಿಶ್ವದ ಯಾವುದೇ ಭಾಗದ ವಿಷಯಗಳಿರಲಿ ಅದನ್ನು ಕನ್ನಡಕ್ಕೆ ತರುವ ಯತ್ನ ಮಾಡಿದರು. ಇದರಿಂದ ವಿಶ್ವ ಸಾಹಿತ್ಯದ ಬೆಳಕು ಕನ್ನಡದ ಮೇಲೆ ಬಿದ್ದಿತ್ತು. ಇದರಿಂದ ಸಾಹಿತ್ಯ ಪಕ್ವಗೊಂಡಿತು’ ಎಂದು ಹೇಳಿದರು.

‘ಏಕೀಕರಣ ಪೂರ್ವದಲ್ಲಿ ಕನ್ನಡ ಸಾಹಿತ್ಯ ವರ್ಣಪಲ್ಲಟದ ಕೊಳವೆಯಂತೆ (ಪ್ರಿಸ್ಮ್) ಕಾರ್ಯ ನಿರ್ವಹಿಸಿತು. ವಿಶ್ವದ ಯಾವುದೇ ಮೂಲೆಯ ಒಂದು ವಿಷಯದ ಪ್ರಿಸ್ಮ್ ಮೂಲಕ ಹರಿದು ಬಣ್ಣವಾಗಿ ಹೊರಹೊಮ್ಮಿತು. ಇದನ್ನು ಕನ್ನಡ ತಲೆ ಎತ್ತಿದ ಬಗೆ ಎಂತಲೂ ಹೇಳಬಹುದು’ ಎಂದು ಹೇಳಿದರು. ಸಾಹಿತಿ ನಾ. ದಾಮೋದರ ಶೆಟ್ಟಿ ಇದ್ದರು.

ಇಂದಿನ ದಿನಗಳಲ್ಲಿ ನಾರಾಯಣಪ್ಪ ಅಲ್ಲ; ಪ್ರಾಣೇಶಾಚಾರ್ಯ ಬೇಕು
ಹೊಸತನದ ಹುಡುಕಾಟದ ಬಗ್ಗೆ ಮಾತನಾಡಿದ ಸಾಹಿತಿ ವಸುಧೇಂದ್ರ ಅವರು ಯು.ಆರ್. ಅನಂತಮೂರ್ತಿ ಅವರ ‘ಸಂಸ್ಕಾರ’ ಕೃತಿಯನ್ನು ಉದಾಹರಣೆಗೆ ತೆಗೆದುಕೊಂಡರು. ಅನಂತಮೂರ್ತಿಯವರು ಸಂಸ್ಕಾರ ಬರೆದಾಗ ನಾರಾಯಣಪ್ಪನಲ್ಲಿ ಸ್ವಾತಂತ್ರ್ಯವನ್ನು ಕಂಡುಕೊಂಡರು. ಆ ಕಾಲದಲ್ಲಿ ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಯಿತು. ಇದು ಅನಂತಮೂರ್ತಿಯವರ ಹೊಸತನದ ಹುಡುಕಾಟದ ಬಗೆ. ಆದರೆ, ಇಂದಿನ ದಿನಗಳಲ್ಲಿ ಎತ್ತ ಕಣ್ಣು ಹಾಯಿಸಿದರೂ ನಾರಾಯಣಪ್ಪನವರೇ ಕಾಣುತ್ತಿದ್ದಾರೆ, ಪ್ರಾಣೇಶಾಚಾರ್ಯ ಮಾಯವಾಗಿದ್ದಾರೆ. ಅವರನ್ನು ಹುಡುಕಬೇಕಾಗಿದೆ’ ಎಂದು ಹೇಳಿದರು.

ನವಮಾಧ್ಯಮಗಳಲ್ಲಿ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ಅಂತರ್ಜಾಲದ ಮಾಹಿತಿಯನ್ನು ಸುರಕ್ಷಿತವಾಗಿ ಬಳಸಿಕೊಳ್ಳಬೇಕಾಗಿದೆ.
ವಸುಧೇಂದ್ರ,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.