ADVERTISEMENT

‘ಹಾನಿಯಾದರೆ ಮರಳುಗಾರಿಕೆ ನಿಷೇಧ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 5:24 IST
Last Updated 15 ನವೆಂಬರ್ 2017, 5:24 IST
ಸಸಿಕಾಂತ್ ಸೆಂಥಿಲ್
ಸಸಿಕಾಂತ್ ಸೆಂಥಿಲ್   

ಮಂಗಳೂರು: ‘ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಜೆಡ್‌) ಮರಳು ತೆಗೆಯುವುದರಿಂದ ಪರಿಸರಕ್ಕೆ ಹಾನಿ ಯಾದಲ್ಲಿ ಮರಳುಗಾರಿಕೆ ನಿಷೇಧಕ್ಕೂ ಹಿಂಜರಿಯುವುದಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿಆರ್‌ಜೆಡ್‌ ಪ್ರದೇಶದಲ್ಲಿ ಸಂಗ್ರ ಹವಾಗುವ ಮರಳಿನ ದಿಬ್ಬಗಳನ್ನು ತೆರವು ಮಾಡಲು ಮಾತ್ರ ಅವಕಾಶವಿದೆ. ಅಲ್ಲಿ ನಿರಂತರವಾಗಿ ಮರಳುಗಾರಿಕೆ ನಡೆ ಸಲು ಅವಕಾಶವಿದೆ ಎಂಬ ಕಲ್ಪನೆಯೇ ತಪ್ಪು’ ಎಂದರು.

ಸಿಆರ್‌ಜೆಡ್‌ ಪ್ರದೇಶದಲ್ಲಿ ಮರಳು ತೆಗೆಯುವಾಗ ಹೆಚ್ಚು ಎಚ್ಚ ರಿಕೆ ವಹಿಸಬೇಕಿದೆ. ಅದರಿಂದ ದುಷ್ಪರಿಣಾಮಗಳು ಉಂಟಾದರೆ ಇಡೀ ಕರಾವಳಿಯ ಪರಿಸರಕ್ಕೆ ಹಾನಿ ಯಾಗುತ್ತದೆ. ಈ ವಿಚಾರವಾಗಿ ನಿಯಮಿತವಾಗಿ ತಜ್ಞರ ವರದಿ ಪಡೆ ಯಲಾಗುವುದು. ಅಪಾಯಕಾರಿ ಸ್ಥಿತಿ ಕಂಡುಬಂದರೆ ಸಿಆರ್‌ಜೆಡ್‌ ಪ್ರದೇಶ ದಲ್ಲಿ ಮರಳು ತೆಗೆಯುವುದನ್ನೇ ನಿಷೇಧಿ ಸಲಾಗುವುದು ಎಂದು ಹೇಳಿದರು.

ADVERTISEMENT

ದಾಖಲೆ ಆಧರಿಸಿ ವರ್ಗೀಕರಣ: ಸಿಆರ್‌ಜೆಡ್‌ ಪ್ರದೇಶದಲ್ಲಿ ಸಾಂಪ್ರದಾ ಯಿಕ ರೀತಿಯಲ್ಲಿ ಮರಳು ತೆಗೆಯಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದವರನ್ನು ದಾಖಲೆಗಳ ಆಧಾರದಲ್ಲಿ ವರ್ಗೀ ಕರಣ ಮಾಡಲಾಗಿದೆ. ಮೂರು ವರ್ಷಗಳ ವರೆಗೆ ಸತತವಾಗಿ ಈ ಕೆಲಸ ಮಾಡುತ್ತಿದ್ದ 41 ಜನರಿಗೆ ಈಗಾಗಲೇ ಪರವಾನಗಿ ನೀಡಲಾಗಿದೆ. ಇದೇ ವರ್ಗದಲ್ಲಿರುವ 61 ಜನರಿಗೆ ಪರವಾನಗಿ ನೀಡಲು ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉಳಿದ ಅರ್ಜಿದಾರರಿಗೆ ಪರವಾನಗಿ ನೀಡುವ ವಿಚಾರದಲ್ಲಿ ಜಿಲ್ಲಾ ಮಟ್ಟದ ಸಮಿತಿ ನಿರ್ಧಾರಕ್ಕೆ ಬರುತ್ತದೆ. ಒಬ್ಬ ಪರವಾನಗಿದಾರ ಮೂರು ದೋಣಿ ಗಳನ್ನು ಮಾತ್ರ ಬಳಸಬಹುದು. ಎಲ್ಲ ದೋಣಿಗಳಿಗೂ ಕಡ್ಡಾಯವಾಗಿ ನಿಗ ದಿತ ಬಣ್ಣ ಬಳಿದಿರಬೇಕು ಮತ್ತು ಜಿಪಿಎಸ್‌ ಅಳವಡಿಸಬೇಕು. ಅನಧಿಕೃತ ದೋಣಿಗಳನ್ನು ಬಳಕೆ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಹೊರ ರಾಜ್ಯಗಳಿಗೆ ಮರಳು ಸಾಗಣೆ ನಿಷೇಧಿಸಿ ಈಗಾಗಲೇ ಆದೇಶ ಹೊರಡಿ ಸಲಾಗಿದೆ. ಹೊರ ಜಿಲ್ಲೆಗಳಿಗೆ ಮರಳು ಸಾಗಣೆ ನಿಷೇಧಿಸುವ ಸಂಬಂಧ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ಸಿಆರ್‌ಜೆಡ್‌ ಹೊರಗಿನ ನದಿ ದಂಡೆ ಗಳಲ್ಲಿ ಲಭ್ಯವಿರುವ ಮರಳನ್ನು ತೆಗೆ ಯಲು ಶೀಘ್ರದಲ್ಲಿ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.

ವಿಶೇಷ ತಂಡ ರಚನೆಗೆ ನಿರ್ದೇಶನ: ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸೆಂಥಿಲ್, ‘ನಿರಂತರವಾಗಿ ರಸ್ತೆ ಗುಂಡಿ ಮುಚ್ಚುವ ಕೆಲಸ ನಿರ್ವಹಿಸುವುದಕ್ಕಾಗಿ ವಿಶೇಷ ತಂಡ ವೊಂದನ್ನು ರಚಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಲಾಗುವುದು. ನಂತರ ಉಳಿದಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಈ ಸಂಬಂಧ ಆದೇಶ ನೀಡಲಾಗುವುದು’ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ರಸ್ತೆಗಳ ನಿರ್ವಹಣೆ ಕುರಿತು ದೂರುಗಳಿವೆ. ಈ ಸಂಬಂಧ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ರಸ್ತೆ ಗುಂಡಿಮುಚ್ಚಲು ಸೂಚನೆ ನೀಡಲಾಗಿದೆ. ಅದನ್ನು ಪಾಲಿಸದಿದ್ದರೆ ಮ್ಯಾಜಿಸ್ಟ್ರೇಟ್‌ ಅಧಿಕಾರ ಬಳಸಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.