ADVERTISEMENT

₹ 260 ಕೋಟಿ ಅನುದಾನ: ಮಹದೇವಪ್ಪ

ಉಳ್ಳಾಲ – ಮಂಗಳೂರು ಕ್ಷೇತ್ರದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 9:53 IST
Last Updated 9 ಮಾರ್ಚ್ 2017, 9:53 IST
ಉಳ್ಳಾಲ: ‘ಉಳ್ಳಾಲ ಮತ್ತು ಮಂಗಳೂರು ಕ್ಷೇತ್ರದ ಅಭಿವೃದ್ಧಿಗೆ ಸುಮಾರು ₹ 260 ಕೋಟಿ ಅನುದಾನ ನೀಡಲಾಗಿದೆ’ ಎಂದು ಎಂದು ರಾಜ್ಯ ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದರು.
 
ಮಂಗಳವಾರ ಉಳ್ಳಾಲ ನಗರಸಭೆಯಲ್ಲಿ ಸುಮಾರು ₹ 3.7 ಕೋಟಿ ವೆಚ್ಚದಲ್ಲಿ ವಿವಿಧ ಫಲಾನು ಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡಿದರು. 
 
‘ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಮತ್ತು ಶಾಸಕ ಜೆ.ಆರ್. ಲೋಬೊ ಅವರ ಮನವಿ ಮೇರೆಗೆ ಹಲವಾರು ಅನುದಾನಗಳನ್ನು ಬಿಡುಗಡೆ ಮಾಡಿದ್ದು, ಕರಾವಳಿ ರಕ್ಷಣೆ ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ಇಲ್ಲಿಗೆ ಹರಿದು ಬರಲಿದೆ.

ಉಳ್ಳಾಲಕ್ಕೆ ಈಗಾಗಲೇ ನಗರೋತ್ಥಾನ ಅನುದಾನದಡಿ ₹ 25 ಕೋಟಿ ಬಿಡುಗಡೆ ಯಾಗಿದ್ದು, ₹ 10 ಕೋಟಿಯಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಚುನಾವಣೆ ಸಂದರ್ಭ ಕಾಂಗ್ರೆಸ್ ನೀಡಲಾಗಿದ್ದ 165 ಭರವಸೆಗಳ ಪೈಕಿ 135 ಈಡೇರಿಸಲಾಗಿದ್ದು, ಇನ್ನುಳಿದ ಭರವಸೆಗಳನ್ನು 2018ರೊಳಗೆ ಈಡೇರಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಸಚಿವ ಯು.ಟಿ.ಖಾದರ್ ಮಾತ ನಾಡಿ, ‘ಉಳ್ಳಾಲದಲ್ಲಿ ಹಲವು ವರ್ಷಗಳ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ರಸ್ತೆ ಅಭಿವೃದ್ಧಿಗೆ ಅನುದಾನ ದೊರಕಿದೆ. ತೊಕ್ಕೊಟ್ಟಿನಿಂದ ಅಬ್ಬಕ್ಕ ವೃತ್ತದವರೆಗೆ ರಸ್ತೆ ಕಾಂಕ್ರಿಟ್‌ ಕಾಮಗಾರಿ ನಡೆದಿದ್ದು, ಫುಟ್‌ಪಾತ್‌, ವಾಕಿಂಗ್ ಟ್ರ್ಯಾಕ್, ವಿದ್ಯುತ್ ದೀಪ ಅಳವಡಿಸಿ ರಾಜಮಾರ್ಗವನ್ನಾಗಿಸುವ ನಿಟ್ಟಿನಲ್ಲಿ ಐದು ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಲಾಗಿದೆ’ ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ₹ 3.72 ಕೋಟಿ ಮೊತ್ತದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್.ಲೋಬೊ, ನಗರಸಭಾಧ್ಯಕ್ಷ ಹುಸೈನ್ ಕುಂಞ ಮೋನು, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಉಪಾಧ್ಯಕ್ಷೆ ಚಿತ್ರಾಕ್ಷಿ, ನಗರಸಭಾ ಸದಸ್ಯರಾದ ಫಾರೂಕ್ ಉಳ್ಳಾಲ್, ಮುಸ್ತಫಾ ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

* ತೊಕ್ಕೊಟ್ಟಿನಿಂದ ಅಬ್ಬಕ್ಕ ವೃತ್ತದವರೆಗೆ ರಸ್ತೆ ಕಾಂಕ್ರಿಟ್‌ ಕಾಮಗಾರಿ ನಡೆದಿದ್ದು, ಫುಟ್‌ಪಾತ್‌, ವಾಕಿಂಗ್ ಟ್ರ್ಯಾಕ್, ವಿದ್ಯುತ್ ದೀಪ ಅಳವಡಿಕೆಗೆ ₹ ಐದು ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಲಾಗಿದೆ
ಯು.ಟಿ.ಖಾದರ್,  ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.