ADVERTISEMENT

ಜಾತಿ, ಧರ್ಮ ನೋಡಿ ಕೆಲಸ ಮಾಡಿಲ್ಲ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 5:13 IST
Last Updated 8 ಜನವರಿ 2018, 5:13 IST
ಬೆಳ್ತಂಗಡಿಯಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕ್ಷಣ. ಪ್ರಜಾವಾಣಿ ಚಿತ್ರ
ಬೆಳ್ತಂಗಡಿಯಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕ್ಷಣ. ಪ್ರಜಾವಾಣಿ ಚಿತ್ರ   

ಬೆಳ್ತಂಗಡಿ (ಮಂಗಳೂರು): ‘ನಾಲ್ಕು ವರ್ಷ ಎಂಟು ತಿಂಗಳ ಅವಧಿಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ನಡೆದಿದ್ದೇನೆ. ಜಾತಿ, ಧರ್ಮ ನೋಡಿ ಯಾವ ಕೆಲಸವನ್ನೂ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳ್ತಂಗಡಿ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ₹ 76 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ‘ನಮ್ಮ ಸರ್ಕಾರ ಧರ್ಮ, ಜಾತಿ ನೋಡಿ ಯಾವ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂಬುದನ್ನು ತೋರಿಸಿ’ ಎಂದು ಸವಾಲು ಹಾಕಿದರು.

‘ಅನ್ನಭಾಗ್ಯ ಯೋಜನೆಯಡಿ ಎಲ್ಲ ಧರ್ಮ, ಜಾತಿಯ ಜನರಿಗೂ ಉಚಿತ ಅಕ್ಕಿ ನೀಡುತ್ತಿದ್ದೇವೆ. ಇದನ್ನು ಜಾತಿ ನೋಡಿ ಮಾಡಿದ್ದೇವಾ? ಕ್ಷೀರಭಾಗ್ಯ ಯೋಜನೆಯಲ್ಲಿ ಎಲ್ಲ ಮಕ್ಕಳಿಗೂ ಹಾಲು ವಿತರಿಸುತ್ತೇವೆ. ಇದರಲ್ಲಿ ಜಾತಿ, ಧರ್ಮ ಇದೆಯಾ? ರೈತರ, ನೇಕಾರರ, ಬಡವರ ಸಾಲ ಮನ್ನಾದಲ್ಲಿ ಜಾತಿ, ಧರ್ಮ ಎಲ್ಲಿದೆ? ಮಾತೃಪೂರ್ಣ ಯೋಜನೆಗೆ ಯಾವ ಧರ್ಮದ, ಯಾವ ಜಾತಿಯ ನಂಟಿದೆ?’ ಎಂದು ಕೇಳಿದರು.

ADVERTISEMENT

ಬಿಜೆಪಿಯವರ ಬಳಿ ಕಾರ್ಯಕ್ರಮ ಗಳೇ ಇಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವುದು, ಧರ್ಮದ ಹೆಸರಿನಲ್ಲಿ ಹಿಂಸೆ ಸೃಷ್ಟಿಸುವುದೇ ಅವರ ಕಾರ್ಯಕ್ರಮಗಳು. ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷ ನೀಡಿದ್ದ ಭರ ವಸೆಗಳಲ್ಲಿ ಶೇಕಡ 95ರಷ್ಟು ಈಡೇರಿವೆ. ಉಳಿದ ಭರವಸೆಗಳನ್ನು ಮಾರ್ಚ್‌ ನೊಳಗೆ ಖಚಿತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದರು.

‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕರ್ನಾಟಕಕ್ಕೆ ಬಂದು ನಮಗೆ ಪಾಠ ಹೇಳಲು ಯತ್ನಿಸುತ್ತಿದ್ದಾರೆ. ಅವರದ್ದು ಜಂಗಲ್‌ ರಾಜ್ಯ. ಕರ್ನಾಟಕದ ಇತಿಹಾಸ, ಸಂಸ್ಕೃತಿ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ನಾನು ಈ ಕನ್ನಡದ ಮಣ್ಣಿನ ಮಗ. ಅವರಿಂದ ಪಾಠ ಕಲಿಯಬೇಕಿಲ್ಲ’ ಎಂದರು.

ಕುಮ್ಕಿ ಮಂಜೂರಿಗೆ ಬಂಗೇರ ಒತ್ತಾಯ
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ‘ಜಿಲ್ಲೆಯಲ್ಲಿ ಕುಮ್ಕಿ ಜಮೀನನ್ನು ರೈತರಿಗೆ ಮಂಜೂರು ಮಾಡಲು ಕ್ರಮ ಕೈಗೊಳ್ಳಿ. 1,200 ಕುಟುಂಬಗಳಿಗೆ ಡಿ.ಸಿ ಮನ್ನಾ ಜಮೀನು ಮಂಜೂರಾತಿ ಬಾಕಿ ಇದೆ. ಅದನ್ನು ಪೂರ್ಣಗೊಳಿಸಲು ಒಪ್ಪಿಗೆ ನೀಡಿ’ ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹ 500 ಕೋಟಿ ಅನುದಾನಕ್ಕೆ ಮನವಿ ಸಲ್ಲಿಸಲಾಗಿತ್ತು. ₹ 100 ಕೋಟಿ ಮಂಜೂರಾತಿಯ ಭರವಸೆ ನೀಡಿದ್ದರೂ, ಈಡೇರಿಸಿಲ್ಲ. ಐದು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಸಂಬಂಧಿಸಿದ ಅರ್ಜಿಗಳೂ ಬಾಕಿ ಇವೆ. ಎಲ್ಲವನ್ನೂ ಮಂಜೂರು ಮಾಡಿ ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆದಿವೆ. ಸಿದ್ದರಾಮಯ್ಯ ಅವರು ಕನ್ನಡಿಗರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಏಕೈಕ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ’ ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜ, ವಸಂತ ಬಂಗೇರ ಅವರ ಪತ್ನಿ ಸುಜಿತಾ ವಿ. ಬಂಗೇರ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌.ಖಾದರ್, ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಾಹುಲ್ ಹಮೀದ್, ಧರಣೇಂದ್ರಕುಮಾರ್, ಮಮತಾ ಡಿ. ಗಟ್ಟಿ, ನಕ್ಸಲ್‌ ನಿಗ್ರಹ ಪಡೆ ಐಜಿಪಿ ಅರುಣ್ ಚಕ್ರವರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್‌ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಕೆಲಸಕ್ಕಾಗಿ ಬಂಗೇರ ಸಿಟ್ಟು

‘ಶಾಸಕ ವಸಂತ ಬಂಗೇರ ಯಾವಾಗಲೂ ಕ್ಷೇತ್ರದ ಅಭಿವೃದ್ಧಿಗಾಗಿ ಪತ್ರ ತರುತ್ತಾರೆ. ಕೆಲಸ ಮಾಡಿಕೊಡದಿದ್ದರೆ ನೇರವಾಗಿ ಮಾತನಾಡುತ್ತಾರೆ. ಯಾವ ಮುಲಾಜಿಗೂ ಒಳಗಾಗುವುದಿಲ್ಲ. ಕೆಲಸಕ್ಕಾಗಿ ಸಿಟ್ಟು ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಗಳಿದರು.

‘ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳುವವರಲ್ಲ. ಐದು ಬಾರಿ ಶಾಸಕರಾದ ಅವರು ಮಂತ್ರಿಯಾಗಬೇಕಿತ್ತು. ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರು. ನಾನು ಒಪ್ಪಿಸಿದ್ದೇನೆ. ಮತ್ತೊಮ್ಮೆ ಅವರನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.