ADVERTISEMENT

ಅಂತರ್ಜಲ ಕುಸಿತ: ಕಣ್ಮುಚ್ಚಿ ಕುಳಿತ ಆಡಳಿತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 8:34 IST
Last Updated 16 ಜುಲೈ 2017, 8:34 IST

ಜಗಳೂರು: ತಾಲ್ಲೂಕಿನ ಅಂತರ್ಜಲದ ಪ್ರಮುಖ ಮೂಲವಾಗಿರುವ  ಸಿದ್ದಿಹಳ್ಳಿ ಸಮೀಪದ ಜಿನಿಗಿ ಹಳ್ಳದಲ್ಲಿ  ವ್ಯಾಪಕವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ತಾಲ್ಲೂಕಿನ ಸಂಗೇನಹಳ್ಳಿಯಿಂದ ಗಡಿ ಗ್ರಾಮ ಮಲ್ಲಾಪುರ ಹಾಗೂ ಚಿಕ್ಕಮಲ್ಲನಹೊಳೆ ಗ್ರಾಮದವರೆಗೆ  ಜಿನಿಗಿ ಹಳ್ಳದ ಹರಿವು ಇದೆ.

ಈ ಹಳ್ಳದ ತಟದಲ್ಲಿ ಕೆಲವೆಡೆ ಉತ್ಕೃಷ್ಟ ಮರಳು ಸಿಗುತ್ತಿದೆ.   ಮೂಡಲಮಾಚಿಕೆರೆ ಸಮೀಪದಿಂದ ಸಿದ್ದಿಹಳ್ಳಿ ಹಾಗೂ ಕಮಂಡಲಗುಂದಿ ಗ್ರಾಮದವರೆಗೆ ಪ್ರತಿರಾತ್ರಿ  ಹಳ್ಳದಿಂದ ಮರಳನ್ನು ಅಕ್ರಮವಾಗಿ ತೆಗೆದು ಚಿತ್ರದುರ್ಗ, ಹಿರಿಯೂರು ಹಾಗೂ ತುಮಕೂರಿಗೆ ಲಾರಿಗಳಲ್ಲಿ ಸಾಗಣೆ ಮಾಡ ಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ಈ ಹಳ್ಳದಲ್ಲಿನ ಮರಳಿಗೆ ಭಾರಿ ಬೇಡಿಕೆ ಇದೆ. ತುಮಕೂರು ಜಿಲ್ಲೆ ಯವರೆಗೆ ಸಾಗಣೆಯಾಗುತ್ತಿದ್ದು, ದೊಡ್ಡ ಜಾಲವೇ ಇಲ್ಲಿ ಕೆಲಸ ಮಾಡುತ್ತಿದೆ. ಕಳೆದ ಐದು ತಿಂಗಳಿಂದ  ದೊಡ್ಡ ಮಟ್ಟದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೂ ಸಹ ಕೆಲವು ಪ್ರಮುಖ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮರಳು ಲಾಬಿಯ ಜೊತೆ ಕೈಜೋಡಿಸಿದ್ದಾರೆ ಎಂದು ಸಿದ್ದಿಹಳ್ಳಿ ಹಾಗೂ ಮುಸ್ಟೂರಿನ ಗ್ರಾಮದ ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ. 

ADVERTISEMENT

ರಾತ್ರಿ 12 ಗಂಟೆಯ ನಂತರ ಮರಳನ್ನು ಹೊತ್ತ ದೈತ್ಯ ಲಾರಿಗಳ ಆರ್ಭಟ ಇಲ್ಲಿ ಶುರುವಾಗುತ್ತದೆ. ನಸುಕಿನ ವೇಳೆ 5 ಗಂಟೆಯವರೆಗೆ ಸಾಲುಸಾಲಾಗಿ ಲಾರಿಗಳ ಓಡಾಟ ಇಲ್ಲಿ ಸಾಮಾನ್ಯವಾಗಿದೆ. ಸಿದ್ದಿಹಳ್ಳಿ, ಮುಸ್ಟೂರು ಹಾಗೂ ಚಿತ್ರದುರ್ಗ ತಾಲ್ಲೂಕಿನ ಕಡಬನಕಟ್ಟೆ, ತುರುವನೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಲಾರಿಗಳು ಯಾವುದೇ ಅಡೆತಡೆ ಇಲ್ಲದೆ ಸಂಚರಿಸುತ್ತವೆ.

ಆಯಾ ಪ್ರದೇಶದ ಪರಿಮಿತಿಯ ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ಶಂಕೆ ಇದ್ದು, ಪ್ರತಿ ಲಾರಿಗೆ ತಿಂಗಳಿಗೆ₹ 20 ಸಾವಿರದವರೆಗೆ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂಬ ಗಂಭೀರ ದೂರುಗಳಿವೆ. ಪುರಾತನ ಕಾಲದಿಂದಲೂ ಬಯಲು ಸೀಮೆಯ ಪ್ರಮುಖ ಅಂತರ್ಜಲದ ಸೆಲೆಯಾಗಿರುವ  ಜಿನಿಗಿ ಹಳ್ಳದ ಒಡಲನ್ನು ಮರಳು ದಂಧೆಕೋರರು ಎಗ್ಗಿಲ್ಲದೆ ಬಗೆದು ಹಾಕುತ್ತಿದ್ದಾರೆ.  ಪ್ರಬಲವಾಗಿರುವ ಮರಳು ಲಾಬಿ ಯಿಂದಾಗಿ ಗ್ರಾಮಸ್ಥರು ಹಾಗೂ ಹಿರಿಯರು ಬಹಿರಂಗವಾಗಿ  ಅಕ್ರಮದ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಈ ಭಾಗದ ಮುಖಂಡರು ಆತಂಕ ವ್ಯಕ್ತಪಡಿಸುತ್ತಾರೆ.

ರಾತ್ರಿಯಿಡೀ ಲಾರಿಗಳ ಓಡಾಟದ ಸದ್ದಿನಿಂದಾಗಿ ನೆಮ್ಮದಿಯಿಂದ ನಿದ್ದೆ ಮಾಡುವಂತಿಲ್ಲ. ರಸ್ತೆಯ ಸಮೀಪವಿರುವ ಮನೆಗಳಲ್ಲಿ ಧೂಳು  ಹಾಗೂ ಮಣ್ಣಿನಿಂದ ಗ್ರಾಮಸ್ಥರಿಗೆ ಆರೋಗ್ಯದ ಸಮಸ್ಯೆ ಆಗುತ್ತಿದೆ. ಹಳ್ಳದ ಉದ್ದಕ್ಕೂ ಆಳದವರೆಗೆ ಜೆಸಿಬಿ ಯಂತ್ರಗಳಿಂದ ಬಗೆದು ಹಾಕುತ್ತಿರುವ ಕಾರಣ ಅಂತರ್ಜಲ ಕುಸಿತವಾಗಿದ್ದು, ಈ ಭಾಗದ ನೂರಾರು ಕೊಳವೆಬಾವಿಗಳು ಬತ್ತಿ ಹೋಗಿವೆ. ಸಿದ್ದಿಹಳ್ಳಿ, ಮೂಡಲ ಮಾಚಿಕೆರೆ ಮತ್ತು ಮುಸ್ಟೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜಿನಿಗಿ ಹಳ್ಳದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಇಲಾಖೆಗೆ ದೂರುಗಳು ಬಂದಿವೆ. ಮರಳು ಸಾಗಣೆ ನಿಯಂತ್ರಣ ಕಾರ್ಯಪಡೆಯ ಮುಖ್ಯಸ್ಥರಾದ ಉಪವಿಭಾಗಾಧಿಕಾರಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಶೀಘ್ರ ಕಾರ್ಯಪಡೆಯ ಸಭೆ ಕರೆಯುವಂತೆ ಅವರಿಗೆ ಮನವಿ ಮಾಡಿದ್ದೇನೆ’ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರದೀಪ್‌ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

ಪೊಲೀಸ್‌ ಇಲಾಖೆ, ಲೋಕೋಪಯೋಗಿ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ಕಾಗದದ ಮೇಲಷ್ಟೇ ಅಸ್ತಿತ್ವದಲ್ಲಿದೆ. ಕಳೆದ ಎರಡು ವರ್ಷಗಳಿಂದ ಒಂದು ಸಭೆಯನ್ನೂ ನಡೆಸಿಲ್ಲ. ತಾಲ್ಲೂಕಿನಲ್ಲಿ ಬೇಕಾಬಿಟ್ಟಿ ಮಣ್ಣು ಮತ್ತು ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ವ್ಯಾಪಕವಾಗಿವೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.