ADVERTISEMENT

ಇಂದಿನಿಂದ ಹೊನಲು ಬೆಳಕಿನ ಕಬಡ್ಡಿ ಲೀಗ್‌

ರಾಷ್ಟ್ರೀಯ ಕಬಡ್ಡಿ ಆಟಗಾರ ಎಸ್.ಎಸ್‌.ಮಂಜುನಾಥ್‌ ಸ್ಮರಣಾರ್ಥ ಆಯೋಜನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:41 IST
Last Updated 12 ಜನವರಿ 2017, 11:41 IST
ದಾವಣಗೆರೆ: ಕಳೆದ ವರ್ಷ ಅಮೋಘ ಯಶಸ್ಸನ್ನು ಕಂಡಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪ್ರೀಮಿಯರ್‌ ಲೀಗ್‌ ಮತ್ತೆ ಮರಳಿದೆ. ಸೃಷ್ಟಿ ಕಬಡ್ಡಿ ಅಕಾಡೆಮಿಯ ಆಶ್ರಯದಲ್ಲಿ ಜ.12ರಿಂದ 15ರವರೆಗೆ ಎಸ್‌.ಎಸ್‌.ಮಂಜುನಾಥ್‌ ಸ್ಮರಣಾರ್ಥ 2ನೇ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್‌ ನಡೆಯಲಿದ್ದು, ನಗರದ ಜಿಲ್ಲಾ ಕ್ರೀಡಾಂಗಣ  ಸಕಲ ರೀತಿಯಲ್ಲಿ ಸಜ್ಜಾಗಿದೆ.
 
ಜಿಲ್ಲೆಯಲ್ಲಿ ಕಬಡ್ಡಿ ಆಟ ಜನಪ್ರಿಯಗೊಳಿಸುವಲ್ಲಿ ಎಸ್‌.ಎಸ್‌. ಮಂಜುನಾಥ್‌ ಅವರ  ಶ್ರಮ ಹೆಚ್ಚು ಇದೆ. ಅವರ ಹೆಸರಿನಲ್ಲಿ ಈ ಪಂದ್ಯಾವಳಿ ಏರ್ಪಡಿಸಲಾಗಿದೆ. ಪ್ರೊ ಕಬಡ್ಡಿ ಲೀಗ್‌ ಮಾದರಿಯಲ್ಲೇ ಪಂದ್ಯಾವಳಿ ನಡೆಯಲಿದೆ ಎಂದು ಕಾಂಗ್ರೆಸ್‌ ಮುಖಂಡ ಡಿ.ಬಸವರಾಜ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 
ಎಂಟು ಫ್ರಾಂಚೈಸಿ ತಂಡಗಳಿಗೆ ಹರಾಜು ಮೂಲಕ ಆಟಗಾರರ ಆಯ್ಕೆ ಪ್ರಕ್ರಿಯೆ ಕಳೆದ ತಿಂಗಳು ನಡೆದಿತ್ತು. ರೌಂಡ್‌ ರಾಬಿನ್‌ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ ಎಂದರು.
 
ಗೆಲ್ಲುವ ತಂಡಕ್ಕೆ ₹ 75 ಸಾವಿರ ಪ್ರಥಮ ಬಹುಮಾನ, ತಂಡದ ಪ್ರತಿ ಆಟಗಾರರಿಗೆ 30 ಗ್ರಾಂ ತೂಕದ ಬೆಳ್ಳಿ ಪದಕ ವಿತರಿಸಲಾಗುವುದು. ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ₹ 50 ಸಾವಿರ, ಮೂರನೇ ಸ್ಥಾನ ಗಳಿಸುವ ತಂಡಕ್ಕೆ ₹ 30 ಸಾವಿರ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ₹ 20 ಸಾವಿರ ನಗದು ಬಹುಮಾನ ನೀಡಲಾಗುವುದು. 
 
ಪ್ರತಿ ಪಂದ್ಯದಲ್ಲೂ ಬೆಸ್ಟ್‌ ರೈಡರ್‌ ಮತ್ತು ಬೆಸ್ಟ್‌ ಕ್ಯಾಚರ್‌ ಪ್ರಶಸ್ತಿ ಇರಲಿವೆ. ಪಂದ್ಯಾವಳಿಯ ಅಂತಿಮ ದಿನ ಶ್ರೇಷ್ಠ ರೈಡರ್‌ ಮತ್ತು ಶ್ರೇಷ್ಠ ಕ್ಯಾಚರ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗು ವುದು ಎಂದು ಅವರು ತಿಳಿಸಿದರು.
 
10 ಸಾವಿರ ಆಸನ ವ್ಯವಸ್ಥೆ: ಪ್ರೇಕ್ಷಕರಿಗಾಗಿ 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 150 ಅಡಿ ಅಗಲ ಮತ್ತು 100 ಅಡಿ ಉದ್ದದ ಗ್ಯಾಲರಿ ನಿರ್ಮಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ತೀರ್ಪುಗಾರರನ್ನು ಕರೆಸಲಾಗಿದೆ. ಪಂದ್ಯಾವಳಿಗೆ ಸುಮಾರು ₹ 15 ಲಕ್ಷ ಖರ್ಚಾಗಬಹುದು ಎಂದರು.
 
ಅದ್ಧೂರಿ ಮೆರವಣಿಗೆ: 12ರಂದು ಪಂದ್ಯಾವಳಿಯ ಉದ್ಘಾಟನೆಗೂ ಮುನ್ನ ಜಯದೇವ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯುವ ಮೆರವಣಿಗೆಯಲ್ಲಿ ಎಂಟೂ ತಂಡಗಳ ಆಟಗಾರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಮೆರವಣಿಗೆ ಆರಂಭವಾಗಲಿದೆ. ಸಂಜೆ 4ಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಪಂದ್ಯಾವಳಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಂ.ಸಿದ್ದೇಶ್ವರ, ಮೇಯರ್‌ ರೇಖಾ ನಾಗರಾಜ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. 
 
15ರಂದು(ಭಾನುವಾರ) ರಾತ್ರಿ 8 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಗೆದ್ದ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
 
ಪ್ರಮುಖರಾದ ಬಿ.ಲೋಕೇಶ್‌, ಕೊಂಡಜ್ಜಿ ಜಯಪ್ರಕಾಶ್‌, ಎಂ.ದೊಡ್ಡಪ್ಪ, ಪ್ರದೀಪ್‌ಕುಮಾರ್, ಎಚ್‌.ಚಂದ್ರಪ್ಪ, ಎ.ಎಂ.ರಾಮಣ್ಣ, ಎಂ.ನಾಗರಾಜ್, ಲೋಕಿಕೆರೆ ಸಚ್ಚಿದಾನಂದ, ಜಿ.ಎಸ್‌. ಮೋಹನ್‌ರಾಜ್, ನಾಗೇಂದ್ರ ನಾಯ್ಕ, ವೇಣು ಮತ್ತಿತರರು ಇದ್ದರು.
 
***
ಒಬ್ಬ ಜೂನಿಯರ್
ಈ ಬಾರಿಯೂ ಪ್ರತಿ ತಂಡದಲ್ಲಿ ಒಬ್ಬರು ಜೂನಿಯರ್‌ (19 ವರ್ಷದೊಳಗಿನವರ) ಆಟಗಾರರು ಇರುವಂತೆ ನಿಯಮ ಮಾಡಲಾಗಿದೆ. ಆದರೆ ತಂಡಗಳೇ ಕಿರಿಯ ಆಟಗಾರರನ್ನು ಖರೀದಿಸಿದ್ದು, ಎಂಟು ತಂಡಗ ಳಲ್ಲಿ ಸುಮಾರು 20 ಜೂನಿಯರ್‌ ಆಟಗಾರರು ಇದ್ದಾರೆ ಎಂದು ಕಬಡ್ಡಿ ತರಬೇತುದಾರ ಶ್ರೀಶೈಲ ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.