ADVERTISEMENT

ಇನ್ನಷ್ಟು ಬಹುತಾರಾಗಣದ ಚಿತ್ರ

ಬೆಣ್ಣೆದೋಸೆ ನಗರಿಯಲ್ಲಿ ‘ಚೌಕ’ ಚಿತ್ರತಂಡದಿಂದ ‘ದಿಗ್ವಿಜಯ ಯಾತ್ರೆ’

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 7:31 IST
Last Updated 14 ಫೆಬ್ರುವರಿ 2017, 7:31 IST
ದಾವಣಗೆರೆಯ ಅಶೋಕ ಚಿತ್ರಮಂದಿರಕ್ಕೆ ‘ಚೌಕ’ ಸಿನಿಮಾ ಪ್ರಚಾರಕ್ಕೆ ಬಂದ ನಾಯಕ ನಟರಾದ ‘ನೆನಪಿರಲಿ’ ಪ್ರೇಮ್, ಪ್ರಜ್ವಲ್ ದೇವರಾಜ್, ದಿಗಂತ್ ಅಭಿಮಾನಿಗಳತ್ತ ಕೈ ಬೀಸಿದರು.
ದಾವಣಗೆರೆಯ ಅಶೋಕ ಚಿತ್ರಮಂದಿರಕ್ಕೆ ‘ಚೌಕ’ ಸಿನಿಮಾ ಪ್ರಚಾರಕ್ಕೆ ಬಂದ ನಾಯಕ ನಟರಾದ ‘ನೆನಪಿರಲಿ’ ಪ್ರೇಮ್, ಪ್ರಜ್ವಲ್ ದೇವರಾಜ್, ದಿಗಂತ್ ಅಭಿಮಾನಿಗಳತ್ತ ಕೈ ಬೀಸಿದರು.   
ದಾವಣಗೆರೆ: ‘ಉತ್ತಮ ಕಥೆ ಇದ್ದರೆ ಬಹುತಾರಾಗಣದ ಸಿನಿಮಾಗಳಲ್ಲಿ ನಟಿಸಲು ಕನ್ನಡ ಬಹುತೇಕ ನಾಯಕ ನಟರು ಸಿದ್ಧರಿದ್ದಾರೆ’ ಎಂದು ನಿರ್ದೇಶಕ ತರುಣ್‌ ಸುಧೀರ್ ಹೇಳಿದರು.
 
‘ಚೌಕ’ ಚಿತ್ರ ಪ್ರಚಾರದ ಹಿನ್ನೆಲೆಯಲ್ಲಿ ನಗರಕ್ಕೆ ಸೋಮವಾರ ಚಿತ್ರ ತಂಡದೊಂದಿಗೆ ಬಂದಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
 
‘ಕಥೆ ಮೊದಲು ಅವರಿಗೆ ಇಷ್ಟವಾಗಬೇಕು. ಸೂಕ್ತ ಕಾರಣ ಗಳನ್ನು ನೀಡಿ ನಿರ್ದೇಶಕರು ನಾಯಕ ನಟರನ್ನು ಬಹುತಾರಾಗಣದ ಚಿತ್ರಗಳಲ್ಲಿ ನಟಿಸಲು ಒಪ್ಪಿಸಬೇಕು. ಹಿಂದೆ ಈ ರೀತಿಯ ಪ್ರಯತ್ನಗಳು ನಡೆದಿಲ್ಲ ಎಂದಾದರೆ ಅದಕ್ಕೆ ನಾವು ಅವರಿಗೆ ಕಥೆ ಅರ್ಥೈಸುವಲ್ಲಿ ಸೋತಿದ್ದೇವೆ ಎಂದೇ ಅರ್ಥ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
 
ಬಹುತಾರಾಗಣದ ಚಿತ್ರಗಳಿಗೆ ಕಥೆಯೇ ಮುಖ್ಯ. ಬಹುತಾರಾಗಣದ ‘ಚೌಕ’ದ ಗೆಲುವು ಇಂತಹ ಪ್ರಯೋಗ ಗಳಿಗೆ ಧೈರ್ಯ ತುಂಬಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರುವ ಸಾಧ್ಯತೆಗಳಿವೆ ಎಂದು ಹೇಳಿದರು.
 
‘ನಟ ದರ್ಶನ್ ಅವರ 50ನೇ ಚಿತ್ರ ನಿರ್ದೇಶಿಸುವ ಅವಕಾಶ ನನಗೆ ಸಿಕ್ಕಿದೆ. ಇದು ‘ಚೌಕ’ದ ಯಶಸ್ಸಿಗೆ ಸಿಕ್ಕ  ಮನ್ನಣೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಚಿತ್ರನಿರ್ಮಾಪಕ ಯೋಗೀಶ್ ದ್ವಾರಕೀಶ್ ಮಾತನಾಡಿ, ‘ಚೌಕ’ಕ್ಕೆ ಉತ್ತಮ ಯಶಸ್ಸು ಸಿಕ್ಕಿದೆ. ಯಶಸ್ವಿಗೊಳಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಲು ‘ಚೌಕ ದಿಗ್ವಿಜಯ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದರು.
 
ಇದು ದ್ವಾರಕೀಶ್‌ ಸಂಸ್ಥೆ ನಿರ್ಮಾಣದ 50ನೇ ಚಿತ್ರ. ‘ಚೌಕ’ ಬಿಡುಗಡೆಯಾದ ಮೊದಲ ವಾರ 208 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಎರಡನೇ ವಾರ 178 ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ದಾವಣಗೆರೆಯಿಂದ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.
 
ಚಿತ್ರದ ಚಿತ್ರೀಕರಣ ಆರಂಭವಾಗಿ ಒಂದು 1ವರ್ಷವಾಗಿತ್ತು. 86 ದಿನ ದೀರ್ಘಾವಧಿ ಚಿತ್ರೀಕರಣ ನಡೆಯಿತು. ಬಿಡುಗಡೆಯೂ ತಡವಾಯಿತು. ಈಗ ಎಲ್ಲೆಡೆ ತುಂಬಿದ ಗೃಹಗಳಿಂದ ಪ್ರದರ್ಶನಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
 
ನಟ ನೆನಪಿರಲಿ ಪ್ರೇಮ್ ಮಾತನಾಡಿ, ‘ಚಿತ್ರ ದೊಡ್ಡಮಟ್ಟದಲ್ಲಿ ಗೆದ್ದಿದ್ದು, ಇದರ ಒಂದು ಭಾಗವಾಗಿರುವ ನನಗೆ ಈ ಯಶಸ್ಸು ತುಂಬಾ ಸಂತೋಷ ಕೊಟ್ಟಿದೆ’ ಎಂದರು.
ಈ ದಿಗ್ವಿಜಯ ಯಾತ್ರೆಯಲ್ಲಿ ಪ್ರೇಕ್ಷಕರ ಅಭಿಮಾನವನ್ನು ಹತ್ತಿರದಿಂದ ನೋಡಲು ಸಾಧ್ಯವಾಗುತ್ತಿದೆ ಎಂದು ನಟ ಪ್ರಜ್ವಲ್ ದೇವರಾಜ್ ಹರ್ಷ ವ್ಯಕ್ತಪಡಿಸಿದರು.
 
ನಟ ದಿಗಂತ್ ಮಾತನಾಡಿ, ‘ಈ ಚಿತ್ರದ ಬಗ್ಗೆ ಆರಂಭದಲ್ಲಿ ಸಾಮಾಜಿಕ ಜಾಣತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಜನರೆಲ್ಲಾ ‘ಚೌಕ’ದ ಬಗ್ಗೆ ಮಾತನಾಡುವಂತಾಗಿದೆ’ ಎಂದರು. ನಂತರ ನಾಯಕನಟರು ‘ಚೌಕ’ ಚಿತ್ರಪ್ರದರ್ಶನ ನಡೆಯುತ್ತಿರುವ ಅಶೋಕ ಚಿತ್ರಮಂದಿರಕ್ಕೆ ಭೇಟಿ ನೀಡಿ, ಅಭಿಮಾನಿಗಳತ್ತ ಕೈ ಬೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.