ADVERTISEMENT

ಉದ್ಯಮಿಯ ಕೊಟ್ಟಿಗೆ ತುಂಬಿದ ದೇಸಿ ಆಕಳು

​ಪ್ರಜಾವಾಣಿ ವಾರ್ತೆ
Published 20 ಮೇ 2017, 4:54 IST
Last Updated 20 ಮೇ 2017, 4:54 IST
ಗಿರ್‌ ತಳಿ ಹಸುಗಳೊಂದಿಗೆ ಮಾಲೀಕ ಕುಮಾರಸ್ವಾಮಿ
ಗಿರ್‌ ತಳಿ ಹಸುಗಳೊಂದಿಗೆ ಮಾಲೀಕ ಕುಮಾರಸ್ವಾಮಿ   

ಹರಪನಹಳ್ಳಿ:  ಹಸುವಿನ ಹಾಲು ಒಂದು ಲೀಟರ್‌ಗೆ ₹ 70, ಬೆಣ್ಣೆ ಒಂದು ಕೆ.ಜಿ.ಗೆ  ₹ 1,000,  ತುಪ್ಪ ಒಂದು ಕೆ.ಜಿ.ಗೆ ₹ 1,800, ಗೋಮೂತ್ರ ಒಂದು ಲೀಟರ್‌ಗೆ ₹ 120.... ಅಬ್ಬಾ ಇದು ಯಾವ ಸೀಮೆ ಹಸುವಿನ ಉತ್ಪನ್ನಗಳ ಬೆಲೆ ಎಂದು ಆಶ್ಚರ್ಯಪಡಬೇಡಿ.

ಇದು ಅಪ್ಪಟ ದೇಸಿ ಹಸು ಗಿರ್ ತಳಿ ಉತ್ಪನ್ನಗಳ ಬೆಲೆ. ಗಿರ್‌ ಗೋವಿನ ಪ್ರತಿ ಉತ್ಪನ್ನ ಗಳೂ ಆರೋಗ್ಯಕ್ಕೆ ಶ್ರೇಷ್ಠ ಎಂಬ ಭಾವನೆಯಿದ್ದು, ಇದರ ಉತ್ಪನ್ನಗಳಿಗೂ ಬೇಡಿಕೆ ಅಧಿಕ. ಸಹಜವಾಗಿಯೇ ಬೆಲೆಯೂ ಜಾಸ್ತಿ.

ಹರಪನಹಳ್ಳಿ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಭಾನುಪ್ರಕಾಶ್‌ ಪೆಟ್ರೋಲ್‌ ಬಂಕ್‌ ಮಾಲೀಕ ಕುಮಾರಸ್ವಾಮಿ ಅವರದು ‘ಹಟ್ಟಿ ತುಂಬ ಹಸು, ಹೊಲದ ತುಂಬ ಸಸಿ, ಮನೆ ತುಂಬ ಮಕ್ಕಳು’ ಎಂಬ ತತ್ವಗಳನ್ನು ಅಳವಡಿಸಿಕೊಂಡಿರುವ ಅವಿಭಕ್ತ ಕುಟುಂಬ. 

ADVERTISEMENT

ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದಲ್ಲಿ ಮೂರು ವರ್ಷಗಳಿಂದ ಹೈನುಗಾರಿಕೆ ಮತ್ತು ತಳಿ ಅಭಿವೃದ್ಧಿಯನ್ನು ಅವರ ಕುಟುಂಬ ಉಪ ಕಸುಬಾಗಿ ಮಾಡುತ್ತಿದೆ.
ಗಿರ್‌ ತಳಿಯ 32 ಮತ್ತು ಅಮೃತ್‌ ಮಹಲ್‌ ತಳಿಯ ಒಂಬತ್ತು ಹಸುಗಳು, ಜತೆಗೆ ಕರು, ಹೋರಿಗಳನ್ನು ಸಾಕಿದ್ದಾರೆ. ಬರಗಾಲದ ಈ ದಿನಗಳಲ್ಲಿ ಗಿರ್‌ ತಳಿಯ ಆರು  ಹಸುಗಳಿಂದ ನಿತ್ಯ 28 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. 

ಇಂಟರ್‌ನೆಟ್‌ ಮೂಲಕ ಮಾಹಿತಿ: ‘ಹಸುಗಳನ್ನು ಸಾಕುವ ಆಸಕ್ತಿಯಿಂದ ಅಂತರ್ಜಾಲದಲ್ಲಿ ಹುಡುಕಾಡಿದಾಗ  1830ರಲ್ಲಿ ಬ್ರೆಜಿಲ್‌ ದೇಶದವರೊಬ್ಬರು ನಮ್ಮ ದೇಶದ ಗಿರ್‌ ತಳಿಯನ್ನು ಸಾಕಿ ತಳಿ ಅಭಿವೃದ್ಧಿಪಡಿಸಿದ ಮಾಹಿತಿ ಲಭ್ಯವಾಯಿತು. ಅವರಿಗೆ ಸಾಧ್ಯವಾಗುವುದಾದರೆ ನಮಗೇಕೆ ಸಾಧ್ಯವಿಲ್ಲ ಎಂದುಕೊಂಡು ಗಿರ್ ತಳಿಯನ್ನೇ ಆಯ್ಕೆ ಮಾಡಿಕೊಂಡೆ’ ಎಂದು ಕುಮಾರಸ್ವಾಮಿ ಹೈನುಗಾರಿಕೆಯ ಹಿನ್ನೆಲೆ ವಿವರಿಸುತ್ತಾರೆ.

‘ನಮ್ಮ ತಂದೆ ಗುಂಡಾಭಕ್ತರ ಚನ್ನಬಸಪ್ಪ ಮತ್ತು ತಾಯಿ ಕಾಡಮ್ಮ ಅವರಿಗೆ ಹಸುಗಳ ಮೇಲೆ ಅಪಾರ ಭಕ್ತಿ. ಜತೆಗೇ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಹಸುಗಳ ಮೇಲೆ ಹೊಂದಿರುವ ಪ್ರೀತಿಯಿಂದ ನಾನೂ ಪ್ರೇರಣೆಗೊಂಡಿದ್ದೇನೆ’ ಎನ್ನುತ್ತಾರೆ ಅವರು.

ಆರಂಭದಲ್ಲಿ ಮಧ್ಯಪ್ರದೇಶ ಭೋರಾಂಪುರ್‌ನಿಂದ ನಾಲ್ಕು ಹಸು ಮತ್ತು ನಾಲ್ಕು ಕರುಗಳನ್ನು ಖರೀದಿಸಿ ತಂದರು. ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಉಂಟಾದ ಬರಗಾಲದಿಂದ ಅಲ್ಲಿನ ರೈತರು ಸಾಕಲಾರದೆ ಗಿರ್‌ ತಳಿ ಹಸುಗಳನ್ನು  ಇಲ್ಲಿ ಬಿಟ್ಟು ಹೋಗಿದ್ದಾರೆ. ಹೀಗೆ ಸಂಗ್ರಹವಾದ ಹಸುಗಳಿಂದ ತಳಿ ಅಭಿವೃದ್ಧಿ ಪಡಿಸಿದ್ದು, ಮೂರು ವರ್ಷಗಳಲ್ಲಿ ಅವುಗಳ ಸಂಖ್ಯೆ 32ಕ್ಕೆ ತಲುಪಿದೆ.

‘ಈ ವರ್ಷದ  ಬರಗಾಲದಲ್ಲಿ ಹಸುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದೇನೆ. ಛಲದಿಂದ ಈ ವೃತ್ತಿ ಮುಂದುವರಿಸಿಕೊಂಡು ಹೋಗುತ್ತೇನೆ. ಒಂದು ಹಸುವಿಗೆ ಕನಿಷ್ಠ ₹ 40 ಸಾವಿರದಿಂದ ₹ 50 ಸಾವಿರ ಬೆಲೆ ಇದೆ. ರೈತರು ಸಾಕಲು ಮುಂದೆ ಬಂದರೆ ಮಾರಾಟ ಮಾಡಲು ಸಿದ್ಧನಿದ್ದೇನೆ’ ಎಂದು ಅವರು ಹೇಳುತ್ತಾರೆ.

‘ನೂರಾರು ರೈತರು ನನ್ನ ಫಾರಂಗೆ ಭೇಟಿ ನೀಡಿ ಹಸುಗಳಿಗೆ ಬೇಡಿಕೆ ಇಟ್ಟಿದ್ದರು. ತಾಲ್ಲೂಕಿನ ಮೈದೂರು, ಗುಂಡಗತ್ತಿ, ಕವಲಹಳ್ಳಿ, ಅಸಗೋಡು, ದೊಣ್ಣೆಹಳ್ಳಿ, ಹುಲಿಕೆರೆ, ಕಡೂರು, ನಾಗೇನಹಳ್ಳಿ, ಕೂಡ್ಲಿಗಿ ತಾಲ್ಲೂಕಿನ ಕೆಲವು ಗ್ರಾಮಗಳ ರೈತರಿಗೆ 200ಕ್ಕೂ ಹೆಚ್ಚು ಹಸುಗಳನ್ನು ಮಧ್ಯಪ್ರದೇಶಕ್ಕೆ ಹೋಗಿ ಖರೀದಿಸಿ ತಂದುಕೊಟ್ಟಿದ್ದೇನೆ’ ಎಂದು ತಿಳಿಸುತ್ತಾರೆ.

‘ಈ  ವರ್ಷ ತೀವ್ರ ಬರಗಾಲದಿಂದ  ತತ್ತರಿಸಿದ್ದು  ಒಣ ಮೇವನ್ನು ಸಂಗ್ರಹಿಸಿದ್ದೇನೆ. ಹಸುಗಳಿಗೆ ಪೋಷಕಾಂಶದ ಕೊರತೆ ಆಗದಂತೆ ಮೆಕ್ಕೆಜೋಳದ ಸಸಿಗಳನ್ನು ಬೆಳೆಸಿ ನಿತ್ಯ ಐದು ಕೆ.ಜಿ. ಹಸಿರು ಹುಲ್ಲನ್ನು ನೀಡುತ್ತಿದ್ದೇನೆ. ಹಸುಗಳಿಂದ ಉತ್ಪಾದನೆಯಾಗುವ ಪ್ರತಿಯೊಂದು ವಸ್ತುವನ್ನು ಮರು ಬಳಕೆ ಮಾಡಿಕೊಂಡಿದ್ದೇನೆ’ ಎಂದು ವಿವರಿಸುತ್ತಾರೆ.
ತುಪ್ಪಕ್ಕೆ ಬೇಡಿಕೆ: ‘ದಾವಣಗೆರೆ ನಗರದಿಂದ ಹಾಲಿಗೆ ಬೇಡಿಕೆ ಇದೆ. ಇದನ್ನು ಮನೆ ಬಾಗಿಲಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ತಯಾರಿಸಿದ ತುಪ್ಪಕ್ಕೆ ತುಂಬ ಬೇಡಿಕೆ ಇದೆ. ಪ್ರತಿ ತಿಂಗಳು ಕನಿಷ್ಠ 30–40 ಕೆ.ಜಿ ತುಪ್ಪ ಮಾರಾಟ ಮಾಡುತ್ತಿದ್ದೇನೆ. ರಾಣೇಬೆನ್ನೂರಿನ ಗ್ರಾಹಕರೊಬ್ಬರು ದುಬೈನಲ್ಲಿರುವ ತಮ್ಮ ಮಕ್ಕಳಿಗೆ ಕಳುಹಿಸುತ್ತಿದ್ದಾರೆ. ಮಹಾರಾಷ್ಟ್ರದ ಕನ್ಹೇರಿ ಮಠದ ಸ್ವಾಮೀಜಿಗೆ ಕೂಡ ನಾನೇ ತುಪ್ಪ ಕಳುಹಿಸಿಕೊಡುತ್ತೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಗೋಬರ್‌ಗ್ಯಾಸ್‌:  ಸೆಗಣಿಯಿಂದ ಗೋಬರ್‌
ಗ್ಯಾಸ್‌ ಉತ್ಪಾದನೆ ಮಾಡುತ್ತಿದ್ದಾರೆ. ಗೋಮೂತ್ರವನ್ನು ಸಂಸ್ಕರಿಸಿ ಆಯುರ್ವೇದ ವೈದ್ಯರು ಮತ್ತು ಔಷಧ ತಯಾರಕರಿಗೆ ಮಾರಾಟ ಮಾಡುತ್ತಿದ್ದಾರೆ.
ಹೈನುಗಾರಿಕೆ ಬಗ್ಗೆ ಮಾಹಿತಿಗೆ ಕುಮಾರಸ್ವಾಮಿ ಅವರನ್ನು ಮೊಬೈಲ್: 73490 53102  ಸಂಪರ್ಕಿಸಬಹುದು.

ಗೋಮೂತ್ರ ಸಿಂಪಡಿಸಿ ರೋಗ ನಿಯಂತ್ರಣ
‘ಸಂಸ್ಕರಿಸಿ ಉಳಿದ ಗೋ ಮೂತ್ರಕ್ಕೆ ನೀರನ್ನು ಮಿಶ್ರಣ ಮಾಡಿ ಬೆಳೆಗಳಿಗೆ ಸಿಂಪಡಿಸುತ್ತೇನೆ. ಇದರಿಂದ ರೋಗಗಳು ಹತೋಟಿಗೆ ಬಂದಿವೆ. 25 ವರ್ಷಗಳಿಂದ ನನ್ನ 16 ಎಕರೆ ಜಮೀನಿಗೆ ರಾಸಾಯನಿಕ ಗೊಬ್ಬರ ಬಳಸಿಲ್ಲ. ಈ ಜಮೀನಿನಲ್ಲಿ ರಾಗಿ, ಮೆಕ್ಕೆಜೋಳ, ಜೋಳ, ಕಬ್ಬು, ತರಕಾರಿ, ಬೇಳೆ ಕಾಳು ಬೆಳೆಯುತ್ತೇನೆ. ಸಾವಯವ ಧಾನ್ಯಗಳನ್ನು ಆಸಕ್ತರಿಗೆ ಮಾರಾಟ ಮಾಡುತ್ತಿದ್ದೇನೆ’ ಎಂದು ಕುಮಾರಸ್ವಾಮಿ ಮಾಹಿತಿ ಹಂಚಿಕೊಂಡರು.

ಹೆಚ್ಚು ಪೌಷ್ಟಿಕಾಂಶ
‘ಗಿರ್‌ ತಳಿಯ ಹಸು ಎಲ್ಲಾ ಹವಾಗುಣಗಳಿಗೆ ಒಗ್ಗಿಕೊಳ್ಳುತ್ತವೆ. ಕನಿಷ್ಠ ಆರು ಲೀ. ನಿಂದ 20 ಲೀ.ವರೆಗೆ ಹಾಲು ನೀಡುತ್ತವೆ. ಪೌಷ್ಟಿಕ ಆಹಾರ ನೀಡಿದಂತೆಲ್ಲಾ ಹೆಚ್ಚು ಹಾಲು ಕೊಡುತ್ತವೆ. ಎಲ್ಲಾ ಹಸುಗಳಿಗಿಂತ ಇದರ ಹಾಲು, ಮೊಸರು, ಬೆಣ್ಣೆ, ತುಪ್ಪ ಆರೋಗ್ಯಕ್ಕೆ ಉತ್ತಮ’ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಟಿ.ವೆಂಕಾರೆಡ್ಡಿ ಹೇಳುತ್ತಾರೆ.

– ಮಲ್ಲಿಕಾರ್ಜುನ ಕನ್ನಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.