ADVERTISEMENT

ಕಲಾವಿದರಿಂದ ಬಯಲಾಟ ನೇಪಥ್ಯಕ್ಕೆ ಸರಿದಿಲ್ಲ

ಕಲಾಸಂಭ್ರಮ ಸಮಾರೋಪದಲ್ಲಿ ಜನಪದ ವಿದ್ವಾಂಸ ಮಲ್ಲಿಕಾರ್ಜುನ ಕಲಮರಹಳ್ಳಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 4:33 IST
Last Updated 15 ಜುಲೈ 2017, 4:33 IST

ದಾವಣಗೆರೆ:  ಅಪ್ಪಟ ಜನಪದ ಕಲೆಯಾದ ಬಯಲಾಟ ನೇಪಥ್ಯಕ್ಕೆ ಸರಿಯಲು ಕಲಾವಿದರು ಕಾರಣರಲ್ಲ. ಅಕ್ಷರ ಕಲಿತು ನಗರ ಸೇರಿದವರ ನಿರ್ಲಕ್ಷ್ಯ ಭಾವನೆಯಿಂದ ಈ ಕಲೆ ತೀವ್ರ ಸಂಕಷ್ಟದಲ್ಲಿದೆ ಎಂದು ಜನಪದ ವಿದ್ವಾಂಸ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ವಿಶ್ಲೇಷಿಸಿದರು.

ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಏರ್ಪಡಿಸಿದ್ದ ಬಯಲಾಟ ಯಕ್ಷಗಾನ ಕಲಾ ಸಂಭ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

‘ಬಯಲಾಟ ಕಲಾವಿದರು ತಳಸಮುದಾಯದವರು, ಅನಕ್ಷರಸ್ಥರು. ರಾತ್ರಿಯಿಡೀ ಬಯಲಾಟ ಆಡುವುದಷ್ಟೇ ಅವರಿಗೆ ಗೊತ್ತು. ಹೀಗಾಗಿ, ಅವರಿಗೆ ತರಬೇತಿ ನೀಡುವ, ಬಯಲಾಟವನ್ನು ಪರಿಷ್ಕರಣೆಗೆ ಒಡ್ಡಿ ಪುನಶ್ಚೇತನ ಗೊಳಿಸುವ ಕಾರ್ಯವನ್ನು ವಿದ್ವಾಂಸರು ಮಾಡಬೇಕಿದೆ’ ಎಂದು ತಿಳಿಸಿದರು.

ADVERTISEMENT

ಯಕ್ಷಗಾನ ಕರಾವಳಿ ಸಂಸ್ಕೃತಿಯ ಭಾಗವಾಗಿ ಮಾರ್ಪಟ್ಟಿದೆ. ವಿದ್ಯಾವಂತರು ಯಕ್ಷಗಾನ ಕಲಿತ ಕಾರಣ ಅದು ಗಟ್ಟಿಗೊಂಡಿದೆ. ಅಲ್ಲಿ ತಾಳಮದ್ದಲೆಗೆ ಹೆಜ್ಜೆ ಹಾಕದವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಮುದಾಯ ಕಲೆಯೊಂದಿಗೆ ಬೆರೆತಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇನ್ನಾದರೂ ಸಮಾಜ ಬಯಲಾಟ ಕಲೆ ಯನ್ನು ಪೋಷಿಸಲಿ ಎಂದು ಹೇಳಿದರು.

ಕಾಲೇಜು ವಿದ್ಯಾರ್ಥಿಗಳನ್ನು ಬಯಲಾಟದ ಪಟ್ಟುಗಳಿಗೆ ಒಗ್ಗಿಸುವುದು ಸುಲಭವಲ್ಲ. ಹೀಗಾಗಿ, ಅಕಾಡೆಮಿಯು ಪ್ರತಿ ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿ. ಇದಕ್ಕೆ ಶಿಕ್ಷಣ ಇಲಾಖೆಯ ಸಹಯೋಗ ಪಡೆಯಲಿ. ಪ್ರತಿ ತಾಲ್ಲೂಕಿನಲ್ಲೂ ಕನಿಷ್ಠ ಹತ್ತು ತಂಡಗಳನ್ನು ಕಟ್ಟಲಿ ಎಂದು ಒತ್ತಾಯಿಸಿದರು.

ಹಳ್ಳಿ ಜನರ ಚಿಂತನೆಗಳು ಬದ ಲಾಗಿವೆ. ಅವರ ನಿರೀಕ್ಷೆಗಳು ರೂಪಾಂತರಗೊಂಡಿವೆ. ಗ್ರಾಮೀಣ ಭಾಗದ ವಾತಾವರಣ ಕಲುಷಿತ ಗೊಂಡಿದೆ. ಹೀಗಾಗಿ, ಹಳ್ಳಿ ಜನರಲ್ಲಿ ಬಯಲಾಟದ ಬಗೆಗೆ ಅಷ್ಟಾಗಿ ಆಸಕ್ತಿ ಇಲ್ಲ.  ಹಳ್ಳಿಗಳ ಮಕ್ಕಳಿಗೆ ಬಯಲಾಟ ಕಲಿಸುವುದು ಉತ್ತಮ  ಎಂದರು.

ಎರಡು ತಿಂಗಳ ತರಬೇತಿ ಸಾಕು:  ಅಕಾಡೆಮಿಯು ಬಯಲಾಟ ಕಲಿಸಲು ಆರು ತಿಂಗಳ ಅವಧಿಯ ತರಬೇತಿ ನೀಡುತ್ತಿದೆ. ಆದರೆ, ಇಷ್ಟು ದೀರ್ಘ ಅವಧಿಯ ತರಬೇತಿಗೆ ಯುವಕರು ಬರುವುದು ಕಷ್ಟ. ಆರು ತಿಂಗಳ ತರಬೇತಿ ಪ್ರಾಯೋಗಿಕವಾಗಿಯೂ ಸಾಧುವಲ್ಲ.  ಅವಧಿಯನ್ನು ಎರಡು ತಿಂಗಳಿಗೆ ಇಳಿಸು ವುದು ಸೂಕ್ತ ಎಂದು ಸಲಹೆ ನೀಡಿದರು.

ಜೆ.ಎಚ್‌.ಪಟೇಲ್‌ ಕಾಲೇಜಿನ ಆಡಳಿತಾಧಿಕಾರಿ ದೊಗ್ಗಳ್ಳಿ ಪುಟ್ಟರಾಜು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎನ್‌.ಎಸ್‌.ರಾಜು ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಬಾರಿಕೇರ ಕರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಸಂಚಾಲಕ ಡಾ.ಬಿ.ಎಂ.ಗುರುನಾಥ್‌, ರಿಜಿಸ್ಟ್ರಾರ್‌ ಎಸ್‌.ಎಚ್‌.ಶಿವರುದ್ರಪ್ಪ ಇದ್ದರು.

***

‘ಸಮನ್ವಯ ಇರಲಿ’
ಯಕ್ಷಗಾನ–ಬಯಲಾಟ ಅಕಾಡೆಮಿಯಲ್ಲಿ ಯಕ್ಷಗಾನ ಕಲೆಗೇ ಹೆಚ್ಚು ಒತ್ತು ನೀಡಲಾಗಿದೆ.  ಬಯಲಾಟಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಅಸಮಾಧಾನ ಕೇಳಿಬಂದಿತ್ತು. ಯಕ್ಷಗಾನ ಅಗಾಧವಾಗಿ ಬೆಳೆದಿದೆ. ಅದಕ್ಕೆ ಸಮನಾಂತರವಾಗಿ ಬಯಲಾಟ ಬೆಳೆಯುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಯಕ್ಷಗಾನ ಮತ್ತು ಬಯಲಾಟಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುತ್ತಿರುವುದು ಸ್ವಾಗತಾರ್ಹ ಎಂದು ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು.

ಬಯಲಾಟ ಅಕಾಡೆಮಿ ಆರಂಭವಾಗುತ್ತಿದೆ. ಮತ್ತೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಭೇದ ಉಂಟಾಗಬಾರದು. ದಕ್ಷಿಣಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಬಯಲಾಟ ಸಶಕ್ತವಾಗಿದೆ. ಹೀಗಾಗಿ ಅಕಾಡೆಮಿಯಲ್ಲಿ ಉತ್ತರ ಕರ್ನಾಟಕದವರ ಪ್ರಾಬಲ್ಯ ಹೆಚ್ಚಾಗುವ ಸಾಧ್ಯತೆ ಇದೆ.  ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.