ADVERTISEMENT

ಜನರ ಪ್ರೀತಿ, ವಿಶ್ವಾಸವೇ ನನಗೆ ಆಸ್ತಿ

‘ಹೆಬ್ಬುಲಿ’ ಗೆಲ್ಲಿಸಿದ್ದಕ್ಕೆ ದಾವಣಗೆರೆ ಅಭಿಮಾನಿಗಳಿಗೆ ವಿಶೇಷ ಧನ್ಯವಾದ: ಚಿತ್ರನಟ ಸುದೀಪ್

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 5:08 IST
Last Updated 7 ಮಾರ್ಚ್ 2017, 5:08 IST
ಜನರ ಪ್ರೀತಿ, ವಿಶ್ವಾಸವೇ ನನಗೆ ಆಸ್ತಿ
ಜನರ ಪ್ರೀತಿ, ವಿಶ್ವಾಸವೇ ನನಗೆ ಆಸ್ತಿ   
ದಾವಣಗೆರೆ: ‘ಚಿತ್ರರಂಗಕ್ಕೆ ಬಂದು ಇಷ್ಟು ವರ್ಷ ಆಯಿತು, ಎಷ್ಟು ಆಸ್ತಿ ಮಾಡಿದೆ ಗೊತ್ತಿಲ್ಲ. ಆದರೆ, ಜನರ ಪ್ರೀತಿ–ವಿಶ್ವಾಸ ಗಳಿಸಿದ್ದೇನೆ. ಈ ಜನ್ಮಕ್ಕೆ ಇಷ್ಟು ಸಾಕು’– ಹೀಗೆ ಹೇಳಿದ್ದು ನಾಯಕ ನಟ ಸುದೀಪ್.
 
ತಾವು ನಾಯಕ ನಟನಾಗಿ ಅಭಿನಯಿಸಿದ ‘ಹೆಬ್ಬುಲಿ’ ಚಿತ್ರದ ಪ್ರಚಾರ ಕಾರ್ಯಕ್ಕೆ ಬಂದಿದ್ದ ಅವರು ಸೋಮವಾರ ನಗರದ ಆಶೋಕ ಚಿತ್ರ ಮಂದಿರದ ಎದುರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
 
‘ನಿಮ್ಮೆಲ್ಲರ ಪ್ರೀತಿಯ ಮುಂದೆ ಯಾವ ‘ಹೆಬ್ಬುಲಿ’ಯೂ ಇಲ್ಲ. ನಿಮ್ಮ ಪ್ರೀತಿ ಹಾಗೂ ನಗುವನ್ನು ಹೃದಯದಲ್ಲಿಟ್ಟು ತೆರಳುತ್ತಿದ್ದೇನೆ’ ಎಂದು ಪ್ರಖರ ಬಿಸಿಲಿನ ತಾಪದಲ್ಲೂ ಸೇರಿದ್ದ ಅಭಿಮಾನಿಗಳಿಗೆ ಗಾಳಿಯಲ್ಲಿ ಹೂಮುತ್ತು ನೀಡಿದರು.   
 
‘ನಿಮ್ಮೂರಿಗೆ ಮತ್ತೆ ವಾಪಸು ಬಂದಿದ್ದೇನೆ. ದಾವಣಗೆರೆ ಜನರಿಗೆ ಎರಡು ಸಲ ಧನ್ಯವಾದ ಹೇಳಬೇಕು. ಒಂದು ಚಿತ್ರದ ಆಡಿಯೊ ಕಾರ್ಯಕ್ರಮ ಯಶಸ್ಸುಗೊಳಿಸಿದ್ದೀರಿ. ಇನ್ನೊಂದು ಚಿತ್ರದ ಅದ್ಭುತ ಯಶಸ್ಸಿಗೆ ಕಾರಣರಾ ಗಿದ್ದೀರಿ’ ಎಂದು ಕೈ ಬೀಸಿದರು.
 
‘ರಾಜ್ಯದ ಎಲ್ಲೆಡೆ ಚಿತ್ರತಂಡಕ್ಕೆ ಅಭಿಮಾನಿಗಳ ಅದ್ಧೂರಿ ಸ್ವಾಗತ ಸಿಗುತ್ತಿದೆ. ಇದು ಸದಾ ಹೀಗೇ ಇರಲಿ. ‘ಹೆಬ್ಬುಲಿ’ಯ 50ನೇ ದಿನದ ಸಂಭ್ರಮಕ್ಕೆ ಮತ್ತೆ ಬರುತ್ತೇನೆ. ಆವಾಗ ನಿಮ್ಮ ಊರಿನ ಬೆಣ್ಣೆದೋಸೆ ತಿನ್ನುತ್ತೇನೆ’ ಎಂದು ಹೇಳಿದರು.
 
ರಕ್ಷಣೆ ನೀಡುತ್ತಿರುವ ಪೊಲೀಸ್‌ ಸಿಬ್ಬಂದಿಗೆ, ಪ್ರಚಾರಕ್ಕೆ ಸಹಕಾರಿಯಾದ ಮಾಧ್ಯಮಗಳನ್ನು ಇದೇ ಸಂದರ್ಭ ಸುದೀಪ್‌ ತಮ್ಮ ಭಾಷಣದಲ್ಲಿ ಸ್ಮರಿಸಿದರು.
ಅಭಿಮಾನಿಗಳ ಒತ್ತಾಯದ ಮೇರೆಗೆ ‘ಹೆಬ್ಬುಲಿ’ ಚಿತ್ರದ ಚಿಕ್ಕ ಸಂಭಾಷಣೆ ಹೇಳಿ ರಂಜಿಸಿದ ಸುದೀಪ್‌ಗೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಸುರಿಯಿತು.
‘ದೊಡ್ಡ ಯಶಸ್ಸು’: ಚಿತ್ರದ ನಿರ್ದೇಶಕ ಕೃಷ್ಣ ಮಾತನಾಡಿ, ‘ಚಿತ್ರ ಯಶಸ್ಸು ಕಂಡಿದೆ. ನಿಮ್ಮ ಪ್ರೀತಿ–ವಿಶ್ವಾಸ ಸದಾ ನಮ್ಮ ಮೇಲಿರಲಿ’ ಎಂದರು.

ನಿಮಾರ್ಪಕರಲ್ಲಿ ಒಬ್ಬರಾದ ಎಸ್‌.ವಿ.ರಘುನಾಥ ಮಾತನಾಡಿ, ‘ನನ್ನ ಮೊದಲ ಸಿನಿಮಾ ಇಷ್ಟು ದೊಡ್ಡಮಟ್ಟದಲ್ಲಿ ಪ್ರದರ್ಶನ ಕಾಣುತ್ತಿರುವುದು ಖುಷಿ ತಂದಿದೆ. ಅದಕ್ಕಾಗಿ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅಭಿಮಾನಿಗಳಿಗೆ ಕೈಮುಗಿದರು. ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಉಪಸ್ಥಿತರಿದ್ದರು.

ಸುದೀಪ್ ಬರುವ ಸಮಯ ಮಧ್ಯಾಹ್ನ 2.30ಕ್ಕೆ ನಿಗದಿಯಾಗಿತ್ತು. ಆದರೆ, ಅವರು ಅರ್ಧ ಗಂಟೆ ಮುಂಚಿತವಾಗಿ ಬಂದರು. ಅಷ್ಟಾ ದರೂ ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಅವರಿದ್ದ ಕಾರು ವೇದಿಕೆ ಹತ್ತಿರವೇ ಬಂದು ನಿಂತಿದ್ದರೂ ಅಭಿಮಾನಿಗಳು ಸುತ್ತುವರಿದಿದ್ದ ಕಾರಣ ವೇದಿಕೆ ಏರುವುದು ಸ್ವಲ್ಪ ತಡವಾಯಿತು.

ಸುದೀಪ್‌ಗೆ ಅಭಿಮಾನಿಗಳ ಮುತ್ತಿಗೆ
ವೇದಿಕೆ ಮೇಲೆ ಕೂಡ ಅಭಿಮಾನಿಗಳ ದಂಡು ನೆರೆದಿತ್ತು. ಅವರನ್ನು ಇಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸುದೀಪ್ ಪೊಲೀಸರ ಸರ್ಪಗಾವ ಲಿನಲ್ಲೇ ವೇದಿಕೆ ಏರಿ ಅಭಿಮಾನಿ ಗಳತ್ತ ಕೈಬೀಸಿದರು. ನಂತರ ವೇದಿಕೆ ಕೆಳಗಿದ್ದ ಕೆಲ ಅಭಿಮಾನಿಗಳಿಗೆ ಕೈ ಕೊಟ್ಟರು. ಒಬ್ಬರ ಮೇಲೆ ಒಬ್ಬರು ಬಿದ್ದು ಅವರ ಕೈ ಮುಟ್ಟಿದರು. ಕೆಲವರು ಅವರ ಕೈಯನ್ನೇ ಎಳೆದರು. ತಕ್ಷಣ ಎಚ್ಚೆತ್ತ ಸುದೀಪ್ ರಕ್ಷಣಾ ಸಿಬ್ಬಂದಿ ಅಭಿಮಾನಿಗಳ ಕೈಗೆ ಏಟಿನ ರುಚಿ ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.