ADVERTISEMENT

ಜಿ.ಪಂ. ಗದ್ದುಗೆ; ಕಾಂಗ್ರೆಸ್‌–ಬಿಜೆಪಿ ಮಧ್ಯೆ ಪೈಪೋಟಿ!

ಕೊನೆಯ ಅವಧಿಯ ಅಧಿಕಾರ ವಶಕ್ಕೆ ಕಸರತ್ತು, ಮೂವರಿಗೆ ಮೀಸಲಾತಿ ಭಾಗ್ಯ

ಚಂದ್ರಹಾಸ ಹಿರೇಮಳಲಿ
Published 25 ಏಪ್ರಿಲ್ 2014, 6:46 IST
Last Updated 25 ಏಪ್ರಿಲ್ 2014, 6:46 IST

ದಾವಣಗೆರೆ: ಜಿಲ್ಲಾ ಪಂಚಾಯ್ತಿಯ ಕೊನೆಯ ಅವಧಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಂಡಿದ್ದು, ಗದ್ದುಗೆ ಏರಲು ಎರಡು ತಿಂಗಳ ಮೊದಲೇ ಬಿಜೆಪಿ–ಕಾಂಗ್ರೆಸ್‌ನಲ್ಲಿ ಪೈಪೋಟಿ ಆರಂಭವಾಗಿದೆ.

ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಬಿ’ಗೆ ನಿಗದಿಯಾಗಿದೆ.

ಜಿಲ್ಲಾ ಪಂಚಾಯ್ತಿಯ ಮೊದಲ 20 ತಿಂಗಳ ಮೀಸಲಾತಿ ಸಾಮಾನ್ಯ ವರ್ಗಕ್ಕೆ, ಎರಡನೇ ಅವಧಿಯ 20 ತಿಂಗಳ ಮೀಸಲಾತಿ ಸಾಮಾನ್ಯ ಮಹಿಳೆಗೆ ನಿಗದಿಯಾಗಿತ್ತು.

ಜಿಲ್ಲಾ ಪಂಚಾಯ್ತಿಯ 34 ಸ್ಥಾನಗಳಲ್ಲಿ ಬಿಜೆಪಿ 18 ಹಾಗೂ ಕಾಂಗ್ರೆಸ್‌ 16 ಸ್ಥಾನ ಪಡೆದಿವೆ. ಸರಳ ಬಹುಮತ  ಹೊಂದಿರುವ  ಬಿಜೆಪಿಯ  ಆಂತರಿಕ  ಒಪ್ಪಂದದಂತೆ  ಮೊದಲ  ಅವಧಿಯಲ್ಲಿ  ಮೂವರು,  ಎರಡನೇ ಅವಧಿಯಲ್ಲಿ ಇಬ್ಬರು ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಚನ್ನಗಿರಿ ತಾಲ್ಲೂಕು ನಲ್ಲೂರು ಕ್ಷೇತ್ರದ ಪ್ರೇಮಾ ಲೋಕೇಶಪ್ಪ ಅಧ್ಯಕ್ಷರಾಗಿದ್ದಾರೆ.

ಜಿಲ್ಲಾ ಪಂಚಾಯ್ತಿ ವಶಕ್ಕೆ ಕಾಂಗ್ರೆಸ್‌ ಯತ್ನ
1997ರಲ್ಲಿ ಹೊಸ ಜಿಲ್ಲೆಯಾಗಿ ದಾವಣಗೆರೆ ರಚನೆಯಾದ ನಂತರ ಜಿಲ್ಲಾ ಪಂಚಾಯ್ತಿಗೆ ನಡೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ, 2010 ಡಿಸೆಂಬರ್‌ 31ರಂದು ನಡೆದಿದ್ದ ಮೂರನೇ ಚುನಾವಣೆಯಲ್ಲಿ ಜಿಲ್ಲಾ ಪಂಚಾಯ್ತಿ ಬಿಜೆಪಿ ವಶವಾಗಿತ್ತು. ಕೇವಲ 2 ಸ್ಥಾನ ಕಡಿಮೆ ಪಡೆದಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು.

ಪ್ರಸ್ತುತ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗಿದ್ದು, ಕೆಲ ಬಿಜೆಪಿ ಸದಸ್ಯರು ಪರೋಪಕ್ಷವಾಗಿ ಕಾಂಗ್ರೆಸ್‌ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಸಾಸ್ವೆಹಳ್ಳಿ ಕ್ಷೇತ್ರದ ಸದಸ್ಯೆ ಶೀಲಾ ಗದ್ದಿಗೇಶ್‌ ಪತಿ ಗದ್ದಿಗೇಶ್‌ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದು, ಅವರ ಪತ್ನಿ ಮುಂದಿನ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹರಿಹರ ಮಾಜಿ ಶಾಸಕ ಬಿ.ಪಿ. ಹರೀಶ್‌ ಈಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಅವರ ಬೆಂಬಲಿಗ ಸದಸ್ಯರ ನಡೆ ಏನು  ಎನ್ನುವ ಕುತೂಹಲವಿದೆ.

ಯಾರು ಯಾವ ನಿರ್ಧಾರ ತೆಗೆದುಕೊಂಡರೂ, ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಬಿಜೆಪಿಯ ಇಬ್ಬರು ಗೈರುಹಾಜರಾಗುವಂತೆ ನೋಡಿ ಕೊಂಡರೂ, ಕಾಂಗ್ರೆಸ್‌ ಹಾದಿ ಸುಲಭವಾಗಲಿದೆ.

ಬಿಜೆಪಿಯಲ್ಲಿನ ಮುಸುಕಿನ ಗುದ್ದಾಟದ ಲಾಭ ಪಡೆದರೂ ಸುಲಭವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ.

ಸದ್ಯ ಬಿಜೆಪಿಯಲ್ಲಿ ಯಶೋಧಮ್ಮ ಹಾಲೇಶಪ್ಪ, ಪ್ರೇಮಾ ಸಿದ್ದೇಶ್‌, ಕಾಂಗ್ರೆಸ್‌ನಲ್ಲಿ ಮಂಜುಳಾ ಶೇಖರಪ್ಪ ಎಸ್‌ಟಿ ಸದಸ್ಯರಾಗಿದ್ದು, ಯಾರು ಅಧ್ಯಕ್ಷರಾಗುತ್ತಾರೆ ಎನ್ನುವ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಉಷಾ ಅಶೋಕ್‌, ಜಯಲಕ್ಷ್ಮೀ ಮಹೇಶ್ ಕಾಂಗ್ರೆಸ್‌ನಲ್ಲಿ ಕೆ.ಎಚ್‌. ಗುರುಮೂರ್ತಿ, ಬಸವನಗೌಡ, ಹಾಲೇಶಪ್ಪ, ಕರಿಬಸಪ್ಪ, ಕವಿತಾ ರಾಮಗಿರಿ ಸೇರಿದಂತೆ ಹಲವು ಆಕಾಕ್ಷಿಗಳಿದ್ದಾರೆ. ಆದರೆ, ಅವರ ಆದಾಯದ ಪ್ರಮಾಣ ಪತ್ರದ (₨ 2 ಲಕ್ಷದ ಒಳಗೆ) ಮೇಲೆ ಸ್ಪರ್ಧೆಗೆ ಅರ್ಹತೆ ದೊರೆಯಲಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು

ಆಕಾಂಕ್ಷಿ                                 ಕ್ಷೇತ್ರ                      ಪಕ್ಷ

ಯಶೋಧಮ್ಮ ಹಾಲೇಶಪ್ಪ        ಆನಗೋಡು                 ಬಿಜೆಪಿ
ಪ್ರೇಮಾ ಸಿದ್ದೇಶ್                    ಸಂತೇಬೆನ್ನೂರು          ಬಿಜೆಪಿ
ಮಂಜುಳಾ ಶೇಖರಪ್ಪ              ಕಂಚಿಕೆರೆ                 ಕಾಂಗ್ರೆಸ್‌

ಗದ್ದುಗೆ ಏರಿದ ಬಿಜೆಪಿ ಸದಸ್ಯರು
1. ಕೆ.ಜಿ. ಬಸವಲಿಂಗಪ್ಪ 

2. ವೀರೇಶ್‌ ಹನಗವಾಡಿ
3. ಮೆಳ್ಳೆಕಟ್ಟೆ ಚಿದಾನಂದ ಐಗೂರು
4. ಶೀಲಾ ಗದ್ದಿಗೇಶ್
5. ಪ್ರೇಮಾ ಲೋಕೇಶಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.