ADVERTISEMENT

ನಮ್ಮೊಡಲು ಸೇರುತ್ತಿದೆ ಆಸ್ಪತ್ರೆ ತ್ಯಾಜ್ಯ!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 10:23 IST
Last Updated 13 ಸೆಪ್ಟೆಂಬರ್ 2017, 10:23 IST

ದಾವಣಗೆರೆ: ಜಿಲ್ಲೆಯಲ್ಲಿ ಆರೋಗ್ಯ ಚಿಕಿತ್ಸಾಲಯಗಳ ಸಂಖ್ಯೆ 1,357. ಇವುಗಳಿಂದ ಪ್ರತಿ ನಿತ್ಯ 1,585 ಕೆ.ಜಿ. ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಆಗುವುದು ಕೇವಲ 600 ಕೆ.ಜಿ. ಉಳಿದ ತ್ಯಾಜ್ಯ ಎಲ್ಲಿ? ತ್ಯಾಜ್ಯದಲ್ಲಿ ಬಹಳಷ್ಟು ಪ್ರಮಾಣ ಚರಂಡಿ ಸೇರುತ್ತದೆ. ಇನ್ನಷ್ಟು ಪಾಲಿಕೆಯ ಘನ ತ್ಯಾಜ್ಯ ಜತೆಗೆ ವಿಲೇ ಆಗುತ್ತದೆ. ಮತ್ತಷ್ಟು ನಾಯಿ, ಹಂದಿಗಳ ಬಾಯಿಗೆ ಆಹಾರವಾಗುತ್ತಿದೆ. ಹೀಗೆ ಪ್ರತಿ ನಿತ್ಯ ಸುಮಾರು 1ಸಾವಿರ ಕೆ.ಜಿ. ವೈದ್ಯಕೀಯ ತ್ಯಾಜ್ಯ ವಾತಾವರಣ ಸೇರಿಕೊಳ್ಳುತ್ತಿದೆ.

ಅಂಗಾಂಗಗಳ ದರ್ಶನ, ಕೀವು ಒರೆಸಿದ ಬ್ಯಾಂಡೇಜ್: ನಗರದ ಹಲವು ಆಸ್ಪತ್ರೆ, ಪ್ರಯೋಗಾಲಯಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಕಂಡುಬಂದಿದ್ದು ಘನ ಘೋರ ದೃಶ್ಯಗಳು. ಪಿ.ಜೆ.ಬಡಾವಣೆಯ ಆಸ್ಪತ್ರೆಯೊಂದರಲ್ಲಿ ಘನ ಹಾಗೂ ಹಸಿ ತ್ಯಾಜ್ಯವನ್ನು ಒಂದೇ ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿಡಲಾಗಿತ್ತು. ಅದನ್ನು ಒತ್ತಾಯದಿಂದ ಬಿಚ್ಚಿಸಿ ನೋಡಿದಾಗ ಎಚ್‌ಐವಿ ಪರೀಕ್ಷೆಗೆ ಬಳಸಿದ ರಕ್ತದ ಮಾದರಿ, ಇಂಜೆಕ್ಷನ್, ಒಡೆದ ಔಷಧಿ ಬಾಟಲಿ, ರಕ್ತ ಒರೆಸಿದ ಹತ್ತಿ, ಶಸ್ತ್ರಚಿಕಿತ್ಸೆಯಲ್ಲಿ ಕತ್ತರಿಸಿದ ಮನುಷ್ಯನ ಅಂಗಾಂಗಳು ಅದರಲ್ಲಿ ಕಂಡುಬಂದವು.

ರಾಮ್‌ ಆಂಡ್‌ ಕೋಂ ಹತ್ತಿರದ ಪ್ರಯೋಗಾಲಯವೊಂದರಲ್ಲಿ ಬಕೆಟ್‌ನಲ್ಲಿ ಒಣ, ಹಸಿ ಕಸ ಎರಡನ್ನೂ ತುಂಬಿಡಲಾಗಿತ್ತು. ಅದರಲ್ಲಿ ಗಾಜಿನ ಚೂರು, ಸಿರಂಜ್, ಬ್ಲೇಡ್, ಬ್ಯಾಂಡೇಜ್ ಬಟ್ಟೆ ಎದ್ದು ಕಾಣುತ್ತಿದ್ದವು. ಇವುಗಳನ್ನು ಆಸ್ಪತ್ರೆಯ ಕಾಪೌಂಡ್‌ನಲ್ಲಿ ಇಡಲಾಗಿತ್ತು. ಎಷ್ಟು ದಿವಸಗಳಿಗೊಮ್ಮೆ ಈ ಕಸ ತೆಗೆದುಕೊಂಡು ಹೋಗುತ್ತಾರೆಂಬ ಎಂಬ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿಯೇ ಇಲ್ಲ. ತ್ಯಾಜ್ಯ ವಿಲೇವಾರಿ ಬಗ್ಗೆ ರಿಜಿಸ್ಟರ್ ಪುಸ್ತಕವನ್ನು ನಿರ್ವಹಣೆ ಮಾಡಿಯೇ ಇಲ್ಲ. ಪ್ರಯೋಗಾಲಯದಲ್ಲಿ ಮಾತ್ರ ವಾರಕ್ಕೊಮ್ಮೆ ಬಂದು ತ್ಯಾಜ್ಯ ಸಂಗ್ರಹಿಸಿದ ರಸೀದಿ ತೋರಿಸಿದರು.

ADVERTISEMENT

ಹೀಗೆ ಆಸ್ಪತ್ರೆ ತ್ಯಾಜ್ಯ ಇರುವ ಪ್ಲಾಸ್ಟಿಕ್‌ ಚೀಲಗಳು ಕಾಪೌಂಡ್‌ನಲ್ಲೇ ಇಟ್ಟಿದ್ದು, ಕಾವಲಿಗೆ ಯಾರೂ ಇಲ್ಲ. ಕೆಲವೊಮ್ಮೆ ಚಿಂದಿ ಆಯುವವರೂ ಇದನ್ನು ಎತ್ತಿಕೊಂಡು ಹೋಗುತ್ತಾರೆ. ಹಲವು ಸಲ ನಾಯಿ, ಹಂದಿಗಳು ಈ ತ್ಯಾಜ್ಯವನ್ನು ಕಚ್ಚಿಕೊಂಡು ಹೋಗಿ ರಸ್ತೆ ತುಂಬಾ ಚೆಲ್ಲಾಡುವ ಉದಾಹರಣೆಗಳು ಸಾಕಷ್ಟಿವೆ ಎನ್ನುತ್ತಾರೆ ಆಸ್ಪತ್ರೆ ರೋಗಿಗಳು.

ಹಾರಿಕೆ ಉತ್ತರ
ಈ ಸಮಸ್ಯೆ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ತ್ರಿ‍ಪುಲಾಂಭ ಅವರಿಗೆ ಅರಿವೇ ಇಲ್ಲ. ಜೈವಿಕ ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೂ ತಮಗೂ ಸಂಬಂಧವೇ ಇಲ್ಲ ಎಂಬ ಉತ್ತರ ಅವರದ್ದು. ತ್ಯಾಜ್ಯ ಸಮಸ್ಯೆ ನೋಡಿಕೊಳ್ಳುವುದು ಪಾಲಿಕೆ ಕೆಲಸ, ಕ್ರಮ ಕೈಗೊಳ್ಳುವುದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯ ಎಂದು ಈ ಎರಡು ಸಂಸ್ಥೆಗಳ ಮೇಲೆ ತಮ್ಮ ಜವಾಬ್ದಾರಿ ಎತ್ತಿ ಹಾಕುತ್ತಾರೆ. ಪಾಲಿಕೆ ಅಧಿಕಾರಿಗಳು, ಆಸ್ಪತ್ರೆ ಕಸವನ್ನು ನಾವು ಸ್ವೀಕರಿಸುವುದಿಲ್ಲ ಎನ್ನುತ್ತಾರೆ. ಮಂಡಳಿ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಈ ಸಮಸ್ಯೆಯೇ ಉದ್ಭವಿಸುವುದಿಲ್ಲ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.