ADVERTISEMENT

ನೀರಿನ ಸಂರಕ್ಷಣೆಯ ಅರಿವು ಮೂಡಿಸಿ

ವಿಶ್ವ ಜಲ ದಿನಾಚರಣೆಯಲ್ಲಿ ನ್ಯಾಯಾಧೀಶ ಎಸ್‌.ಎಚ್‌. ಹೊಸಗೌಡರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 10:15 IST
Last Updated 23 ಮಾರ್ಚ್ 2018, 10:15 IST

ದಾವಣಗೆರೆ: ನಿರಂತರ ಬರಗಾಲ ದಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ನೀರಿನ ಅಗತ್ಯ ಹಾಗೂ ಅದರ ಸಂರಕ್ಷಣೆ ಕುರಿತು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ತುರ್ತು ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್‌. ಹೊಸಗೌಡರ್‌ ಹೇಳಿದರು.

ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನೀರಿಗಾಗಿ ಪ್ರಕೃತಿ’ ಈ ಬಾರಿಯ ವಿಶ್ವ ಜಲ ದಿನಾಚರಣೆಯ ಘೋಷವಾಕ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಹಂತ ಹಂತವಾಗಿ ಅರಣ್ಯ ನಾಶವಾಗುತ್ತಿದೆ. ಕೃಷಿ ಭೂಮಿಯಲ್ಲಿ ಕೈಗಾರಿಕೆಗಳು ತಲೆ ಎತ್ತಿವೆ. ಜತೆಗೆ ನೂತನ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಇದು ಹೀಗೆಯೇ ಮುಂದುವರಿದಲ್ಲಿ ಕುಡಿಯುವ ನೀರಿಗಾಗಿ ಇನ್ನೂ ಕಷ್ಟದ ದಿನಗಳನ್ನು ನಾವು ಎದುರಿಸಬೇಕಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಪ್ರಕೃತಿ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಅದರಲ್ಲೂ ವಿದ್ಯಾರ್ಥಿಗಳಿಗೆ ನೀರಿನ ಅಗತ್ಯ
ಹಾಗೂ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ’ ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಅವರು, ‘ಈ ಹಿಂದೆ ನಾವು ಸಾಕಷ್ಟು ನೀರನ್ನು ವ್ಯರ್ಥ ಮಾಡುತ್ತಿದ್ದೆವು. ಆದರೆ, ಪ್ರಸ್ತುತ ಅಂತಹ ವಾತಾವರಣವಿಲ್ಲ. ಚಿಕ್ಕ ಬಾಟಲಿಯಲ್ಲಿ ನೀರು ಕಾಪಿಟ್ಟುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬರೂ ನೀರಿನ ಮಹತ್ವ ತಿಳಿದುಕೊಂಡು ವ್ಯರ್ಥ ಬಳಕೆಗೆ ಕಡಿವಾಣ ಹಾಕಬೇಕು’ ಎಂದರು.

ಅಭಿವೃದ್ಧಿ ನೆಪದಲ್ಲಿ ಪರಿಸರ ನಾಶವಾಗಿ ಮಣ್ಣಿನ ರಸ್ತೆಗಳು ಸಿಮೆಂಟ್‌ ರಸ್ತೆಗಳಾಗಿ ಮಾರ್ಪಟ್ಟಿವೆ. ಭೂಮಿಯಲ್ಲಿ ನೀರು ಇಂಗುತ್ತಿಲ್ಲ. ಪರಿಸರದಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಇದರಿಂದಾಗಿ ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಪ್ರತಿಯೊಬ್ಬರು ಎಚ್ಚರ ವಹಿಸಿ, ಈಗಿರುವ ನೀರಿನ ಮೂಲವನ್ನು ಸಂರಕ್ಷಿಸಬೇಕಿದೆ ಎಂದು ಹೇಳಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಲೋಕಿಕೆರೆ ಸಿದ್ದಪ್ಪ, ‘ಕೃಷಿಗೆ ನೀರು ಪೂರೈಸುವುದಕ್ಕಾಗಿಯೇ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. ಆದರೆ, ಅವುಗಳು ಕೂಡ ಈಗ ಬರಿದಾಗುತ್ತಿವೆ. ಕುಡಿಯುವ ನೀರಿಗಾಗಿ ಅವುಗಳನ್ನು ಸಂರಕ್ಷಿಸಿಕೊಳ್ಳಬೇಕಿದೆ’ ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌.ಅರುಣ್‌ಕುಮಾರ್‌, ಪ್ರಾಂಶುಪಾಲ ಡಾ.ಎಚ್‌.ಮಲ್ಲಿಕಾರ್ಜುನಪ್ಪ, ಉಪನ್ಯಾಸಕಿ ಎಂ.ಎ.ರುಕ್ಸಾನ ಅಂಜುಂ, ಜಿ.ಎಂ.ಶಶಿಕಲಾ ಅವರೂ ಇದ್ದರು.

ಪ್ರಶಿಕ್ಷಣಾರ್ಥಿ ಎಚ್‌.ರೇಖಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.