ADVERTISEMENT

ಪಟ್ಟನೆ ಕೇಳಿದ ಪ್ರಶ್ನೆಗೆ ತಟ್ಟನೆ ಉತ್ತರ!

‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌ l ಪ್ರೇಕ್ಷಕರಿಂದಲೂ ಉತ್ಸಾಹ l ವಿದ್ಯಾರ್ಥಿಗಳಿಂದ ವೇಗದ ಉತ್ತರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 7:17 IST
Last Updated 17 ಜನವರಿ 2017, 7:17 IST
ಪಟ್ಟನೆ ಕೇಳಿದ ಪ್ರಶ್ನೆಗೆ ತಟ್ಟನೆ ಉತ್ತರ!
ಪಟ್ಟನೆ ಕೇಳಿದ ಪ್ರಶ್ನೆಗೆ ತಟ್ಟನೆ ಉತ್ತರ!   

ದಾವಣಗೆರೆ: ಕ್ವಿಜ್‌ ಮಾಸ್ಟರ್ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದರೆ, ವಿದ್ಯಾರ್ಥಿಗಳು ಅಷ್ಟೆ ಸಲೀಸಾಗಿ ಉತ್ತರ ನೀಡುವ ಮೂಲಕ ಎಲ್ಲರಿಂದಲೂ ಶಹಬ್ಬಾಸ್‌ ಗಿರಿ ಗಿಟ್ಟಿಸಿಕೊಂಡರು. ಸರಿ ಉತ್ತರ ಕೊಟ್ಟವರು ಉಡುಗೊರೆ ಪಡೆದು ಬೀಗಿದರೆ, ಉಳಿದವರು ಅರಿವಿನ ಪರಿಧಿಯನ್ನು ವಿಸ್ತರಿಸಿಕೊಂಡರು.

‘ಪ್ರಜಾವಾಣಿ’ ಬಳಗದಿಂದ ನಗರದ ಕುವೆಂಪು ಕನ್ನಡಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಯಿತು. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಜಿಲ್ಲೆಗಳಿಂದ ತಂಡೋಪತಂಡವಾಗಿ ಬಂದಿದ್ದ ವಿದ್ಯಾರ್ಥಿಗಳು ತಮ್ಮ ಜಾಣ್ಮೆ ಪ್ರದರ್ಶಿಸಿದರು.

70ಕ್ಕೂ ಹೆಚ್ಚು ಶಾಲೆಗಳ 350ಕ್ಕೂ ಅಧಿಕ ವಿದ್ಯಾರ್ಥಿಗಳ ನಡುವಿನ ಪೈಪೋಟಿಯಲ್ಲಿ ಅಂತಿಮವಾಗಿ ದಾವಣಗೆರೆ ಕೇಂದ್ರೀಯ ವಿದ್ಯಾಲಯದ ಹರ್ಷವರ್ಧನ್‌ ಹಾಗೂ ಶಶಾಂಕ್‌ ವಿಜಯಮಾಲೆ ಧರಿಸುವ ಮೂಲಕ ಬೆಂಗಳೂರಿನಲ್ಲಿ ಜ.21ರಂದು ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡರು.

ವಿದ್ಯಾರ್ಥಿಗಳೇ ಉದ್ಘಾಟಕರು: ಆರಂಭ ದಲ್ಲಿ ಕ್ವಿಜ್‌ ಮಾಸ್ಟರ್ ರಾಘವ್‌ ಚಕ್ರವರ್ತಿ ಅವರು ವಿದ್ಯಾರ್ಥಿಗಳ ಸಮೂಹಕ್ಕೆ ಎಸೆದ ನಾಲ್ಕು ಪ್ರಶ್ನೆಗಳಿಗೆ ಥಟ್ ಎಂದು ಉತ್ತರ ನೀಡಿದ ಮಾಡ್ರನ್ ಶಾಲೆಯ ನಿಸರ್ಗ, ಡಿವಿಎಸ್‌ ಶಾಲೆಯ ದಿವಾಕರ್, ನಿಟ್ಟೂರು ಸೆಂಟ್ರಲ್ ಶಾಲೆಯ ಸಂಜನಾ, ಕೇಂದ್ರೀಯ ವಿದ್ಯಾಲಯದ ಹರ್ಷವರ್ಧನ್‌ ಅವರು ಕಾರ್ಯಕ್ರಮ ಉದ್ಘಾಟಿಸುವ ಅವಕಾಶ ಪಡೆದರು. ಕಾರ್ಯಕ್ರಮಕ್ಕೆ ಚಾಲನೆ ಸಿಗುತ್ತಿದ್ದಂತೆ ವಿದ್ಯಾರ್ಥಿಗಳ ಎದೆಬಡಿತ, ಕುತೂಹಲ ಹೆಚ್ಚಾಯಿತು.

ಪ್ರಾಥಮಿಕ ಸುತ್ತಿನಲ್ಲಿ ಒಂದು ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ರಚಿಸಿ, ಪ್ರತ್ಯೇಕವಾಗಿ ಕೂರಿಸಲಾಯಿತು. 20 ಲಿಖಿತ ಪ್ರಶ್ನೆಗಳನ್ನು ಕೇಳಲಾಯಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಸುತ್ತಿನಲ್ಲಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ನಿಟ್ಟೂರು ಸೆಂಟ್ರಲ್‌ ಶಾಲೆ, ದಾವಣಗೆರೆ ಜಿಲ್ಲೆಯ ಕೇಂದ್ರೀಯ ವಿದ್ಯಾಲಯ, ತೋಳಹುಣಸೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಇಂಗ್ಲಿಷ್‌ ಮೀಡಿಯಂ ಶಾಲೆ (ಪಿಎಸ್‌ಎಸ್‌ಇಎಂಆರ್ ಶಾಲೆ), ತರಳಬಾಳು ಸೆಂಟ್ರಲ್ ಸ್ಕೂಲ್‌, ಅಮೃತ ವಿದ್ಯಾಲಯ, ಜೈನ್ ಪಬ್ಲಿಕ್ ಸ್ಕೂಲ್‌ ವಿದ್ಯಾರ್ಥಿಗಳ ತಂಡಗಳು  ಅತಿ ಹೆಚ್ಚು ಅಂಕಗಳಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡವು.

ಕೂದಲೆಳೆಯ ಅಂತರದಲ್ಲಿ ಫೈನಲ್‌ ಪ್ರವೇಶಿಸುವುದರಿಂದ ವಂಚಿತರಾದ ಅಮೃತ ವಿದ್ಯಾಲಯದ ಇನ್ನೊಂದು ತಂಡಕ್ಕೆ ಸಮಾಧಾನಕರ ಬಹುಮಾನ ನೀಡಲಾಯಿತು.

ಇದಕ್ಕೂ ಮುನ್ನ ನಡೆದ ‘ಆಡಿಯನ್ಸ್ ರೌಂಡ್ಸ್‌’ ವಿದ್ಯಾರ್ಥಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಜೊತೆಗೆ ಸರಿ–ತಪ್ಪು ಉತ್ತರಗಳ ಪರಾಮರ್ಶೆಗೆ ವೇದಿಕೆಯಾಯಿತು. ‘ನಂದಗಡದಲ್ಲಿ ಯಾವ ಸ್ವಾತಂತ್ರ್ಯ ಹೋರಾಟಗಾರನ ಚಿತಾಭಸ್ಮ ಇದೆ?’ ಎಂಬ ಪ್ರಶ್ನೆಗೆ ಸಂಗೊಳ್ಳಿ ರಾಯಣ್ಣ ಎಂದು ಉತ್ತರಿಸಿದ ಆಲೂರಹಟ್ಟಿ ಶಾಲೆಯ ಶಶಿಕುಮಾರ್ ಚಪ್ಪಾಳೆ ಗಿಟ್ಟಿಸಿಕೊಂಡರು. ದಾವಣಗೆರೆಗೆ ಹಿಂದೆ ಯಾವ ದೇಶದ ನಗರವೊಂದರ ಹೆಸರು ಅಂಟಿಕೊಂಡಿತ್ತು ಎಂಬ ಪ್ರಶ್ನೆಗೆ ಹಲವು ವಿದ್ಯಾರ್ಥಿಗಳು ಉತ್ತರಿಸಲು ಮುಂದಾದರು. ಜಂಗಮ ತಂಬಿಗೆರೆ ಸರ್ಕಾರಿ ಶಾಲೆಯ ಮಮತಾ, ‘ಮ್ಯಾಂಚೆಸ್ಟರ್ ಆಫ್ ಕರ್ನಾಟಕ’ ಎಂದು ಉತ್ತರಿಸುತ್ತಿದ್ದಂತೆ ಎಲ್ಲೆಡೆ ಕರತಾಡನ.

ಭಾರತದಲ್ಲಿ .in ನಿಂದ ವೆಬ್‌ಸೈಟ್ ವಿಳಾಸ ಅಂತ್ಯವಾದಂತೆ .ch ನಿಂದ ಅಂತ್ಯವಾಗುವ ವೆಬ್‌ಸೈಟ್‌ ಯಾವ ದೇಶಕ್ಕೆ ಬಳಕೆಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ನೀಡಲು ವಿದ್ಯಾರ್ಥಿಗಳು ತಡಬಡಾಯಿಸಿದರು. ಆ ದೇಶವು ವಾಚ್‌ ತಯಾರಿಕೆಗೆ ಪ್ರಸಿದ್ಧಿ ಪಡೆದಿದೆ ಎಂಬ ಸುಳಿವು ನೀಡಿದಾಗ, ಅಂತಿಮವಾಗಿ ‘ಸ್ವಿಜರ್ಲೆಂಡ್’ ಎಂದು ಉತ್ತರಿಸಿದ ಎಂಎನ್‌ಎಸ್‌ ಕಾಂಟಿನೆಂಟಲ್ ಶಾಲೆಯ ನೇಹಾ  ‘ಭೇಷ್‌’ ಎನಿಸಿಕೊಂಡಳು.

ವಿಷಯ ಜೋಡಣೆ ಸುತ್ತು: ಒಂದು ನಿರ್ದಿಷ್ಟ ವಸ್ತು ಅಥವಾ ವ್ಯಕ್ತಿಗೆ ಸಂಬಂಧ ಪಟ್ಟಂತೆ ಉತ್ತರ ನೀಡುವ ವಿಷಯ ಜೋಡಣೆ ಸುತ್ತು ಗಮನ ಸೆಳೆ ಯಿತು. ಜೇಮ್ಸ್‌ ಬಾಂಡ್, ಸಚಿನ್ ತೆಂಡೂಲ್ಕರ್, ಅಮೆಜಾನ್‌, ವೀರಪ್ಪನ್ ಬಗ್ಗೆ ವಿಷಯ ಜೋಡಣೆ ಸುತ್ತಿನಲ್ಲಿ ಕೇಳಿದ ಪ್ರಶ್ನೆ ಸಭಿಕರಲ್ಲೂ ಅಚ್ಚರಿ ಮೂಡಿಸಿತು.
ಸುಳಿವಿನ ಸುತ್ತಿನಲ್ಲಿ ‘ಜಪಾನಿನ ವಾಯುಪಡೆ ದಾಳಿ ಮಾಡಬಹುದು ಎಂಬ ಭೀತಿಯಿಂದ ಹೊದಿಕೆಯಿಂದ ಮುಚ್ಚಲಾಗಿದ್ದ ಭಾರತದ ಹೆಸರಾಂತ ಸ್ಮಾರಕ ಯಾವುದು?’ ಎಂಬ ಪ್ರಶ್ನೆಗೆ ನಿಟ್ಟೂರು ಸೆಂಟ್ರಲ್‌ ಶಾಲೆಯ ವಿದ್ಯಾರ್ಥಿಗಳು, ‘ತಾಜ್‌ಮಹಲ್’ ಎಂದು ಉತ್ತರಿಸಿದರು.

ಅಂತಿಮವಾಗಿ ಒಟ್ಟು 60 ಅಂಕ ಪಡೆದ ಕೇಂದ್ರೀಯ ವಿದ್ಯಾಲಯ ಪ್ರಥಮ ಬಹುಮಾನ ಗೆದ್ದುಕೊಂಡಿತು. ನಿಟ್ಟೂರು ಸೆಂಟ್ರಲ್‌ ಸ್ಕೂಲ್‌ ತಂಡ 50 ಅಂಕಗಳೊಂದಿಗೆ ಎರಡನೇ ಬಹುಮಾನ ಗಳಿಸಿದರೆ, ತರಳಬಾಳು ಸೆಂಟ್ರಲ್‌ ಸ್ಕೂಲ್‌ನ ತಂಡ 40 ಅಂಕಗಳೊಂದಿಗೆ ಮೂರನೇ ಬಹುಮಾನ ಪಡೆಯಿತು.
ವಿಜೇತ ಮೊದಲ ಮೂರು ತಂಡಗಳಿಗೆ ನಗದು ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕ್ವಿಜ್ ಮಾಸ್ಟರ್‌ಗಳಾದ ರಾಘವ್ ಚಕ್ರವರ್ತಿ, ಅರವಿಂದ್ ಶ್ರೀನಿವಾಸ್‌ ಕಾರ್ಯಕ್ರಮ ನಡೆಸಿಕೊಟ್ಟರು. ಡಿಡಿಪಿಐ ಎಚ್‌.ಎಂ.ಪ್ರೇಮಾ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಹುಬ್ಬಳ್ಳಿ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಶಿವರಾಜ್‌ ನರೋಣ, ದಾವಣಗೆರೆ ಪ್ರಸರಣ ವಿಭಾಗದ ಮುಖ್ಯಸ್ಥ ವೈ.ವಿ.ಪೂರ್ಣಪ್ರಸಾದ್‌, ‘ಪ್ರಜಾವಾಣಿ’ ದಾವಣಗೆರೆ ಬ್ಯೂರೋ ಮುಖ್ಯಸ್ಥ ನಾಗೇಶ್‌ ಶೆಣೈ, ಜಾಹೀರಾತು ವಿಭಾಗದ ಮುಖ್ಯಸ್ಥ ಪ್ರಮೋದ್ ಭಾಗವತ್, ಪ್ರಸರಣ ವಿಭಾಗದ ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸರ್‌ ಎಂ.ವಿ ಪದವಿ ಪೂರ್ವ ಕಾಲೇಜು ಸಹ ಪ್ರಾಯೋಜಕತ್ವ ವಹಿಸಿತ್ತು. ಸಂಸ್ಥೆಯ ಕಾರ್ಯದರ್ಶಿ ಶ್ರೀಧರ್, ಪ್ರಾಂಶುಪಾಲ ರಾಜೇಂದ್ರ ನಾಯ್ಡು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ರೋಚಕ ಫೈನಲ್‌....
ಫೈನಲ್ಸ್‌ನ ಐದು ಸುತ್ತುಗಳಲ್ಲಿ ಆರು ತಂಡಗಳು ಪ್ರಶಸ್ತಿಗೆ ಸೆಣಸಾಟ ನಡೆಸಿದವು. ಆರಂಭದಲ್ಲಿ ನಡೆದ ‘ಪಾಟ್‌ಪುರಿ ರೌಂಡ್‌’ ಗಮನ ಸೆಳೆಯಿತು. 1762ರಲ್ಲಿ ರಾಜನೊಬ್ಬ ಜೂಜಾಡುವಾಗ ಆಟಕ್ಕೆ ತೊಂದರೆಯಾಗದಂತೆ ತಿನ್ನಲು ಹೊಸ ಆಹಾರ ಕಂಡುಹಿಡಿಯಲು ಬಾಣಸಿಗನಿಗೆ ಆದೇಶಿಸಿದ ಆಹಾರ ಯಾವುದು’ ಎಂಬ ಪ್ರಶ್ನೆಗೆ, ಪಿಎಸ್‌ಎಸ್‌ಎಂಆರ್ ಶಾಲೆಯ ವಿದ್ಯಾರ್ಥಿಯೊಬ್ಬ ‘ಸ್ಯಾಂಡ್‌ವಿಚ್‌’ ಎಂದು ಉತ್ತರಿಸಿದರು. ಉತ್ತರ ಕೇಳಿ ಅಲ್ಲಿದ್ದವರೆಲ್ಲ ತಲೆದೂಗಿದರು.

ಕಾಮನ್‌ವೆಲ್ತ್, ಫಿಫಾ ವಿಶ್ವಕಪ್ ಫುಟ್ಬಾಲ್‌ ಪಂದ್ಯಾವಳಿಗಿಂತಲೂ ಹೆಚ್ಚು ಚರ್ಚೆಯಾದ, ಅಚ್ಚುಕಟ್ಟಾಗಿ ಆಯೋಜಿಸಿ ವಿಶ್ವದ ಗಮನ ಸೆಳೆದ ಉತ್ಸವ ಯಾವುದು ಎಂಬ ಪ್ರಶ್ನೆಗೆ ವೇದಿಕೆಯಲ್ಲಿದ್ದ ಯಾವ ತಂಡಗಳೂ ಉತ್ತರ ನೀಡಲಿಲ್ಲ. ಚಿತ್ರದುರ್ಗದ ವಾಸವಿ ಶಾಲೆಯ ಇಮ್ರಾನ್ ‘ಮಹಾ ಕುಂಭಮೇಳ’ ಎಂದು ಉತ್ತರಿಸಿ ಮೆಚ್ಚುಗೆ ಗಳಿಸಿದ.

ಎರಡನೇ ಸುತ್ತಿನಲ್ಲಿ ಪ್ರಖ್ಯಾತ ರಂಗಭೂಮಿ ಕಲಾವಿದೆ ಚಿಂದೋಡಿ ಲೀಲಾ ಪರಿಚಯ, ಬ್ಯಾಡಗಿ ಮೆಣಸಿನಕಾಯಿಯ ವಿಶೇಷ, ಚನ್ನಗಿರಿ ರಂಗಪ್ಪ ಕ್ಲಾಕ್ ಟವರ್‌ ಸ್ಪೆಷಲ್‌, ಚಿತ್ರದುರ್ಗದ ಕೋಟೆಯಲ್ಲಿರುವ ಮದ್ದು ಗುಂಡು ಅರೆಯುವ ಕಲ್ಲು, ಹರಿಹರದ ಹರಿಹರೇಶ್ವರ ದೇವಸ್ಥಾನದ ಬಗ್ಗೆ ಪ್ರಾದೇಶಿಕತೆಯ ಮಾಹಿತಿಯನ್ನು ಸ್ಪರ್ಧಿಗಳ ಮೂಲಕವೇ ಪ್ರೇಕ್ಷಕರಿಗೂ ಹಂಚಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.