ADVERTISEMENT

ಬಲಿಗಾಗಿ ಕಾದಿರುವ ಗುಂಡಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 9:46 IST
Last Updated 11 ಸೆಪ್ಟೆಂಬರ್ 2017, 9:46 IST

ಹರಿಹರ: ಕೈಗಾರಿಕಾ ಚಟುವಟಿಕೆಯಿಂದ ಸದಾ ವ್ಯಸ್ತವಾಗಿರುವ ನಗರದ ಕೈಗಾರಿಕಾ ವಸಾಹತು ಪ್ರದೇಶದ ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಕಚೇರಿ ಬಳಿ ಒಳಚರಂಡಿ (ಯುಜಿಡಿ)ಯ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದು ಎರಡಡಿ ಆಳದ ಗುಂಡಿ ನಿರ್ಮಾಣಗೊಂಡು ಬಲಿಗಾಗಿ ಕಾದು ಕುಳಿತಿದೆ.

ಕೈಗಾರಿಕೆ ವಸಾಹತು ಪ್ರದೇಶದ ಯಂತ್ರಾಗಾರಗಳಿಗೆ ನಿತ್ಯವೂ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಲು ಹಾಗೂ ಅಲ್ಲಿಂದ ಸಿದ್ಧವಸ್ತುಗಳನ್ನು ರವಾನಿಸಲು ಹಲವು ಸರಕು ವಾಹನಗಳು ಸಂಚರಿಸುತ್ತವೆ. ಯುಜಿಡಿ ಕಾಮಗಾರಿ ನಂತರ, ಪೈಪ್‌ಲೈನ್ ಗುಂಡಿಗಳನ್ನು ಸರಿಯಾಗಿ ಭರ್ತಿ ಮಾಡದ ಹಿನ್ನೆಲೆಯಲ್ಲಿ ರಸ್ತೆಗಳು ಕುಸಿಯುತ್ತಿವೆ ಎಂಬುದು ವಸಾಹತಿನ ಕಾರ್ಮಿಕರ ಆರೋಪ.

ಕೈಗಾರಿಕಾ ವಸಹಾತು ಪ್ರದೇಶಗಳಲ್ಲಿ ಭಾರಿ ಸರಕು ವಾಹನಗಳ ಸಂಚಾರವೂ ಹೆಚ್ಚಾಗಿರುವ ಕಾರಣ ಇಲ್ಲಿ ನಡೆಸುವ ಕಾಮಗಾರಿ ಗುಣಮಟ್ಟದ್ದಾಗಿರಬೇಕು. ತಪ್ಪಿದ್ದರೆ, ರಸ್ತೆ ಕುಸಿದ ಅಪಘಾತಗಳಾಗುತ್ತವೆ ಎನ್ನುತ್ತಾರೆ ಕೈಗಾರಿಕೋದ್ಯಮಿ ಪ್ರಕಾಶ ಕೋಳೂರು.

ADVERTISEMENT

ನಾಲ್ಕೈದು ವರ್ಷಗಳಿಂದ ನಗರದಲ್ಲಿ ಪ್ರಗತಿಯಲ್ಲಿರುವ ಯುಜಿಡಿ ಕಾಮಗಾರಿ, ಕಳಪೆ ವಸ್ತುಗಳ ಬಳಕೆ, ಅವೈಜ್ಞಾನಿಕ ಕಾಮಗಾರಿಯಿಂದ ಹಲವಾರು ಬಾರಿ ಸುದ್ದಿಗೆ ಗ್ರಾಸವಾಗಿದೆ. ಕಾಮಗಾರಿ ಗುತ್ತಿಗೆ ಪಡೆದ ಕೆಲವು ಕಂಪೆನಿಗಳು ಕಪ್ಪುಪಟ್ಟಿಗೆ ಸೇರಿವೆ, ಹೊಸ ಸಂಸ್ಥೆಗಳು ಕಾಮಗಾರಿ ಆರಂಭಗೊಳಿಸಿದರೂ, ಕಾಮಗಾರಿಯ ನ್ಯೂನತೆ ಹಾಗೂ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ.

ಜುಲೈ 22ರಂದು ನಗರಸಭೆಗೆ ಭೇಟಿ ನೀಡಿದ ಕೆಯುಐಡಿಎಫ್‌ಸಿ ಚೇರ್ಮನ್ ಎಂ.ಡಿ. ಕೃಷ್ಣಮೂರ್ತಿ ಜನಪ್ರತಿನಿಧಿಗಳಿಂದ ಯುಜಿಡಿ ಕಾಮಗಾರಿ ಪ್ರಗತಿ ಹಾಗೂ ಜನನಿಧಿ ಯೋಜನೆ ಅನುಷ್ಠಾನ ಕುರಿತ ಸಮಾಲೋಚನೆ ಸಭೆ ಹಮ್ಮಿಕೊಂಡಿದ್ದರು. ಜನಪ್ರತಿನಿಧಿಗಳಿಂದ ಹರಿದು ಬಂದ ದೂರು ಹಾಗೂ ದುಮ್ಮಾನಗಳಿಂದ ಅವರು ದಂಗಾಗಿದ್ದರು.

ಒಳಚರಂಡಿ ಕಾಮಗಾರಿ ಗುಣಮಟ್ಟ ಹಾಗೂ ಕಡತಗಳ ಪುನರ್ ಪರಿಶೀಲನೆಗೆ ಮತ್ತು ತನಿಖೆಗೆ ಆದೇಶ ನೀಡಿದ್ದರು. ಆದರೂ, ಕಾಮಗಾರಿಯ ಗುಣಮಟ್ಟ ಸುಧಾರಿಸಿಲ್ಲ.
ಕಳೆಡೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಯುಜಿಡಿ ಕಳಪೆ ಕಾಮಗಾರಿಗಳು ಬೆಳಕಿಗೆ ಬಂದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿವೆ. ಗುಂಡಿಗಳಿಂದ ಅಪಘಾತಗಳು ಸಂಭವಿಸಿ ಜೀವಹಾನಿಯಾಗುವ ಮುನ್ನ ಒಳಚರಂಡಿ ಯೋಜನಾಧಿಕಾರಿಗಳು ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.