ADVERTISEMENT

ಬೀಡಿ ಕೂಲಿ ₹ 300 ನಿಗದಿಗೊಳಿಸಲು ಆಗ್ರಹ

ಬೀಡಿ ಕಾರ್ಮಿಕರ ಜಿಲ್ಲಾ ಸಮಾವೇಶದಲ್ಲಿ ನಿರ್ಣಯ ಮಂಡನೆ; ಸಾಮಾಜಿಕ ಭದ್ರತೆಗೂ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 7:47 IST
Last Updated 17 ಜನವರಿ 2017, 7:47 IST
ಬೀಡಿ ಕೂಲಿ ₹ 300 ನಿಗದಿಗೊಳಿಸಲು ಆಗ್ರಹ
ಬೀಡಿ ಕೂಲಿ ₹ 300 ನಿಗದಿಗೊಳಿಸಲು ಆಗ್ರಹ   

ದಾವಣಗೆರೆ: ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ಕೂಡಲೇ 1,000 ಬೀಡಿಗಳಿಗೆ ₹300 ನಿಗದಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲು ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ನಡೆದ ಬೀಡಿ ಕಾರ್ಮಿಕರ ಜಿಲ್ಲಾ ಸಮಾವೇಶ ನಿರ್ಣಯ ಕೈಗೊಂಡಿತು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಅವಶ್ಯಕತೆಗಳ ಆಧಾರಿತ ಕನಿಷ್ಠ ಕೂಲಿ ನಿಗದಿಪಡಿಸಬೇಕು ಸೇರಿದಂತೆ ಬೀಡಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಗುರುತಿನ ಚೀಟಿ, ಪಿ.ಎಫ್, ಬೋನಸ್ ನೀಡಬೇಕು ಎಂದು ಒತ್ತಾಯಿಸಲಾಯಿತು.

ಸಮಾವೇಶದಲ್ಲಿ ದಕ್ಷಿಣ ಭಾರತ ಟ್ರೇಡ್ ಯೂನಿಯನ್‌ಗಳ ಒಕ್ಕೂಟ (ಸಿಪ್ಪು) ಅಧ್ಯಕ್ಷ ಸೆಬಾಸ್ಟಿಯನ್ ದೇವರಾಜ ಮಾತನಾಡಿ, ‘ಗುತ್ತಿಗೆ ದಾರರು, ಕಾರ್ಮಿಕರ ಶ್ರಮ ಕದಿಯುವ ಕಳ್ಳರು’ ಎಂದು ಆರೋಪಿಸಿದರು.

‘ಲಾಭ, ಕಾರ್ಮಿಕರ ಶ್ರಮದ ಪಾಲಿನದು. ಅದರಲ್ಲಿ ಪಾಲು ಕೇಳುವುದು ಕಾರ್ಮಿಕನ ಹಕ್ಕು. ಆದರೆ, ಕನಿಷ್ಠ ಕೂಲಿ ದರವನ್ನೂ ನೀಡದೆ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಇದು ಗುತ್ತಿಗೆದಾರರು ನಡೆಸುವ ಹಗಲು ದರೋಡೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೂಲಿ ಭಿಕ್ಷೆ ಅಲ್ಲ. ಇದನ್ನು ಹೊಸದಾಗಿ ಅರ್ಥ ಮಾಡಿ ಕೊಳ್ಳಬೇಕಾಗಿದೆ. ಕಾರ್ಮಿಕನಿಗೆ ಕನಿಷ್ಠ ಅವಶ್ಯಕತೆಗಳನ್ನು ನೀಡಲು ಸಾಧ್ಯವಾಗದಿದ್ದರೆ ಕೆಲಸಕ್ಕೇ ಕರೆದು ಕೊಳ್ಳಬೇಡ ಎನ್ನುತ್ತದೆ ಸುಪ್ರೀಂ ಕೋರ್ಟ್‌; ಕೂಲಿಕಾರನಿಗೆ ಸಾಮಾಜಿಕ ಭದ್ರತೆ ನೀಡುವುದು ಗುತ್ತಿಗೆದಾರ ಅಥವಾ ಮಾಲೀಕನ ಜವಾಬ್ದಾರಿ’ ಎಂದು ಹೇಳಿದರು.

ಶ್ರಮಜೀವಿಗಳ ಒಂದು ಭಾಗ ಬೀಡಿ ಕಾರ್ಮಿಕರು. ಹಲವು ಸಮೀಕ್ಷೆಗಳ ಪ್ರಕಾರ ಅಸಂಘಟಿತ ಕಾರ್ಮಿಕ ವಲಯಗಳಿಂದ ದೇಶಕ್ಕೆ ಶೇ 63ರಷ್ಟು ಆದಾಯ ಬರುತ್ತಿದೆ ಎಂದು ಮಾಹಿತಿ ನೀಡಿದರು.

ಸಂಘಟನೆಯಿಂದ ಸಮಾನ ಕೂಲಿ: ಮಾನವ ಹಕ್ಕುಗಳ ಕಾರ್ಯಕರ್ತೆ ಉಷಾ ರವಿಕುಮಾರ್ ಮಾತನಾಡಿ, ಗುತ್ತಿಗೆದಾರರು ಹಾಗೂ ಸರ್ಕಾರದಿಂದ ವಂಚನೆಗೊಳಗಾಗುತ್ತಿರುವ ಬೀಡಿ ಕಾರ್ಮಿಕರು ಸಂಘಟನೆಗೊಂಡಾಗ ಮಾತ್ರ ಸಮಾನ ಕೂಲಿ ಸಿಗಲು ಸಾಧ್ಯವಾಗುತ್ತದೆ ಎಂದರು.
ಕಳೆದ ಕೆಲವು ವರ್ಷಗಳಿಂದ ಸಂಘಟನೆಯಾಗಿದ್ದರಿಂದ ಕೂಲಿ ದರದಲ್ಲಿ ಅಲ್ಪ ಹೆಚ್ಚಳ, ಇಲಾಖೆಯಿಂದ ಗುರುತಿಸುವ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ, ‘ಇಡೀ ದೇಶದಲ್ಲಿ 27 ಕೋಟಿ ಜನ ಧೂಮಪಾನಿಗಳಿದ್ದಾರೆ. ಅದರಲ್ಲಿ ಶೇ 90ರಷ್ಟು ಜನ ಬೀಡಿ ಸೇದುತ್ತಾರೆ. ಯಾವ ಬೀಡಿ ಕಂಪೆನಿಗಳೂ ನಷ್ಟದಲ್ಲಿ ಇಲ್ಲ. ಆದರೆ, ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ದರವೂ ಸಿಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.


‘ಬೀಡಿ ಕಟ್ಟುವುದು ಹವ್ಯಾಸ ಅಲ್ಲ; ಅದು ನಮ್ಮ ಬದುಕು. ಬದುಕಿಗಾಗಿ ಬೀಡಿ ಕಟ್ಟುತ್ತಿದ್ದೇವೆ. ಇಡೀ ರಾಜ್ಯದಲ್ಲಿ 10ಲಕ್ಷಕ್ಕೂ ಹೆಚ್ಚಿನ ಜನ ಬೀಡಿ ಕಾರ್ಮಿಕರಿದ್ದಾರೆ. ಅದರಲ್ಲಿ ಶೇ 99.9ರಷ್ಟು ಜನ ಮಹಿಳೆಯರಿದ್ದಾರೆ. ಈ ಬಗ್ಗೆ ಯಾವುದೇ ಕಾರ್ಮಿಕ ಇಲಾಖೆಯಲ್ಲಿ ದಾಖಲೆಗಳಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಇದು ಅಪಾಯಕಾರಿ ಕ್ಷೇತ್ರವೂ ಹೌದು. ಬೀಡಿ ಕಟ್ಟುವುದರಿಂದ ತಂಬಾಕಿನ ದೂಳು ಕುಡಿಯಬೇಕಾಗಿದೆ. ಭೀಕರ ಕಾಯಿಲೆಗಳಿಗೆ ತುತ್ತಾಗುವಂತಹ ಅಪಾಯ ಇದೆ. ಆದರೆ, ಯಾವುದೇ ರೀತಿಯ ಅವಶ್ಯಕ ರಕ್ಷಣೆಗಳು ಬೀಡಿ ಕಾರ್ಮಿಕರಿಗೆ ಇಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಮಾವೇಶವನ್ನು ಬೀಡಿ ಕಾರ್ಮಿ ಕರು ಬೀಡಿ ಕಟ್ಟುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಬೀಡಿ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು  ಸಾಂಕೇತಿಕವಾಗಿ ವಿತರಿಸಲಾಯಿತು. ಸಮಾವೇಶದ ಅಧ್ಯಕ್ಷತೆಯನ್ನು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಸದಸ್ಯೆ ಹಸೀನಾಬಾನು ಅವರು ವಹಿಸಿದ್ದರು. ಅಧ್ಯಕ್ಷರಾ  ಜಬೀನಾ ಖಾನಂ  ಕಾರ್ಯ ಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT