ADVERTISEMENT

ಮಗು ಸಾವು: ವೈದ್ಯರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:37 IST
Last Updated 12 ಜನವರಿ 2017, 11:37 IST
ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ನಾಲ್ಕು ತಿಂಗಳ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಸಂಬಂಧಿಕರು ಜಿಲ್ಲಾ ಆಸ್ಪತ್ರೆಯ ತರಬೇತಿ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
 
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಡಾ.ಕಾರ್ತಿಕ್‌, ಡಾ.ಶಾಲಿನಿ, ಡಾ.ಹರ್ಷ ಹಲ್ಲೆಗೊಳಗಾದವರು.
 
ಆವರಗೆರೆಯ ನಿವಾಸಿ ಮಹಾಂತೇಶ್‌ ಎಂಬುವರು ಮಂಗಳವಾರ ಮಧ್ಯಾಹ್ನ ಅನಾರೋಗ್ಯ ದಿಂದ ಬಳಲುತ್ತಿದ್ದ ತಮ್ಮ 4 ತಿಂಗಳ ಮಗುವನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಗುವನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಬುಧವಾರ ಬೆಳಗಿನ ಜಾವ ಚಿಕಿತ್ಸೆಗೆ ಸ್ಪಂದಿಸದ ಮಗು ಮೃತಪಟ್ಟಿದೆ. ಇದರಿಂದ ರೊಚ್ಚಿಗೆದ್ದ ಮಗುವಿನ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
 
ಘಟನೆ ಬಳಿಕ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾ ಆಸ್ಪತ್ರೆಯ ಮುಂಭಾಗ ಕರ್ತವ್ಯ ನಿರತ ವೈದ್ಯರು ದಿಢೀರ್ ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಬೇಕು ಎಂದು ಘೋಷಣೆ ಕೂಗಿದರು. ಆಸ್ಪತ್ರೆಯ ಪ್ರವೇಶ ದ್ವಾರ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಬಾಪೂಜಿ ಹಾಗೂ ಜೆಜೆಎಂ ಮೆಡಿಕಲ್‌ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದರು.
 
ರಾಜ್ಯದ ಹಲವೆಡೆ ವೈದ್ಯರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದು, ವೈದ್ಯರಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ಬಡವರ ಸೇವೆ ಮಾಡುವ ವೈದ್ಯರ ಮೇಲೆ ಹಲ್ಲೆ ಮಾಡುವುದು ಅಮಾನವೀಯ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರಿಗೆ ಸೂಕ್ತ ರಕ್ಷಣೆ ಇಲ್ಲದಾಗಿದ್ದು, ಭದ್ರತಾ ಸಿಬ್ಬಂದಿಯ ಕೊರತೆ ಇದೆ. ಶೀಘ್ರವೇ ಜಿಲ್ಲಾಡಳಿತ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
 
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಹವಾಲು ಆಲಿಸಿ, ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
 
ಘಟನೆ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ, ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂಬ ಆರೋಪ ಸುಳ್ಳು. ಮಗು ಮೃತಪಟ್ಟಿದ್ದಕ್ಕೆ ಸಿಟ್ಟಿಗೆದ್ದು ಪೋಷಕರು ಹಾಗೂ ಸಂಬಂಧಿಗಳು ವೈದ್ಯರ ಮೇಲೆ ಹಲ್ಲೆ ನಡೆಸಿದ್ದು, ಬಡಾವಣೆ ಠಾಣೆಗೆ ದೂರು ನೀಡಲಾಗಿದೆ ಎಂದರು.
 
ದೂರು ದಾಖಲು: ವೈದ್ಯರ ಮೇಲಿನ ಹಲ್ಲೆ ಸಂಬಂಧ ಪೋಷಕರಾದ ಮಹಾಂತೇಶ್‌ ಸೇರಿದಂತೆ ಮೂವರು ಸಂಬಂಧಿಗಳ ವಿರುದ್ಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.