ADVERTISEMENT

ಮಹಿಳೆಯರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 8:32 IST
Last Updated 16 ಜುಲೈ 2017, 8:32 IST

ದಾವಣಗೆರೆ: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳನ್ನು ಆನ್‌ಲೈನ್‌ ಮೂಲಕ ನೇಮಕಾತಿ ಮಾಡಿಕೊಳ್ಳುವ ವ್ಯವಸ್ಥೆ ಶೀಘ್ರ  ಜಾರಿಗೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ದಾವಣಗೆರೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ ಶನಿವಾರ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೂ ಲಂಚ ತೆಗೆದು ಕೊಳ್ಳಲಾಗುತ್ತದೆ ಎಂಬ ಆರೋಪವಿದೆ. ಮುಖಂಡರು ಹಾಗೂ ರಾಜಕೀಯ ಪಕ್ಷಗಳ ನಾಯಕರು ತಮ್ಮ ಪರವಾದ ಅಭ್ಯರ್ಥಿಗೇ ಹುದ್ದೆ ನೀಡಬೇಕು ಎಂದು ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಾರೆ. ಇತರರು ಹುದ್ದೆಗೆ ಅರ್ಜಿ ಹಾಕದಂತೆ ಬೆದರಿಸುತ್ತಾರೆ. ಹಾಗಾಗಿ, ಅರ್ಹರಿಗೆ ನ್ಯಾಯ ದೊರಕಿಸಲು ಆನ್‌ಲೈನ್‌ ನೇಮಕಾತಿ ವ್ಯವಸ್ಥೆ ಜಾರಿಗೆ ಸರ್ಕಾರ ಮುಂದಾಗಿದೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳ ಪ್ರಮಾಣ ಶೇ 28.9ರಷ್ಟಿತ್ತು. ಪ್ರಸ್ತುತ ಶೇ 21.61ಕ್ಕೆ ಇಳಿದಿದೆ. ಅಂಗನವಾಡಿ ಮಕ್ಕಳಿಗೆ ವಾರಕ್ಕೆ 5 ದಿನ ಕೆನೆಭರಿತ ಹಾಲು ಪೂರೈಸಲಾಗುತ್ತಿದ್ದು ಅಪೌಷ್ಟಿಕತೆಯ ಪ್ರಮಾಣ ಮತ್ತಷ್ಟು ಇಳಿಮುಖವಾಗಲಿದೆ. ರಾಜ್ಯ ಸರ್ಕಾರ ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದು ಉಮಾಶ್ರೀ ತಿಳಿಸಿದರು.

‘ಹಿಂದೆ ಐಸಿಡಿಎಸ್‌ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರದ ಶೇ 90 ಹಾಗೂ ರಾಜ್ಯ ಸರ್ಕಾರದ ಶೇ 10ರ ಅನುದಾನದ ಪಾಲುದಾರಿಕೆ ಇತ್ತು. ಪ್ರಸ್ತುತ ಕೇಂದ್ರ ಸರ್ಕಾರ ತನ್ನ ಪಾಲುದಾರಿಕೆಯನ್ನು ಶೇ 60ಕ್ಕೆ ಇಳಿಸಿದೆ. ಇದರಿಂದ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆಬಿದ್ದರೂ ಮಹಿಳೆಯರ ಪರವಾಗಿ ನಿಂತಿದೆ’ ಎಂದರು.

‘ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಪ್ರತಿ ತಿಂಗಳು ಕೇವಲ ₹ 1,800 ಮಾತ್ರ ನೀಡುತ್ತಿದೆ. ಉಳಿದ ₹ 6,200 ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಹಾಗಾಗಿ, ನಿಮ್ಮ ಪಾಲು ಪಡೆಯಬೇಕಾದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಲೇ ಇದೆ. ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಿದ್ದರೂ ಹಲವು ಬಾರಿ ವೇತನ ಹೆಚ್ಚಳ ಮಾಡಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ 120 ಕಾರ್ಯ ಕರ್ತೆಯರಿಗೆ ಆಶ್ರಯ ಯೋಜನೆಯಡಿ ಹಕ್ಕುಪತ್ರ ವಿತರಿಸಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್‌ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ಆರಂಭದಲ್ಲಿ ₹ 150 ಇದ್ದ ಅಂಗನವಾಡಿ ಕಾರ್ಯಕರ್ತೆಯರ ವೇತನ ಪ್ರಸ್ತುತ ₹ 8 ಸಾವಿರಕ್ಕೆ ಏರಿಕೆ ಯಾಗಿದೆ. ಇದು ಕಾಂಗ್ರೆಸ್‌ ಸರ್ಕಾರದ ಸಾಧನೆಯ ಪ್ರತಿಫಲ. ಕೋಮು ವಾದಿಗಳಿಗೆ ಬುದ್ಧಿಕಲಿಸಲು ಮಹಿಳೆ ಯರು ಕಾಂಗ್ರೆಸ್‌ ಪರವಾಗಿ ನಿಲ್ಲಬೇಕು’ ಎಂದರು.

ಫೆಡರೇಷನ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ರಾಮಚಂದ್ರಪ್ಪ ಮಾತನಾಡಿ, ‘ಕೇಂದ್ರ ಸರ್ಕಾರ 3 ವರ್ಷದಿಂದ ವೇತನ ಹೆಚ್ಚಳ ಮಾಡಿಲ್ಲ. ಬದಲಾಗಿ ವ್ಯವಸ್ಥೆಯನ್ನೇ ಖಾಸಗೀಕರಣ ಮಾಡಲು ಹೊರಟಿದೆ.  ಈಚೆಗೆ ರಾಜ್ಯ ಸರ್ಕಾರ ವೇತನ ಹೆಚ್ಚಿಸಿರುವುದು ಸಂತಸದ ವಿಚಾರ. ಇದಕ್ಕೆ ಪ್ರತಿಯಾಗಿ ಫೆಡರೇಷನ್‌ ಅಭಿನಂದನೆ ಸಲ್ಲಿಸುತ್ತಿದೆ’ ಎಂದರು.

‘ಕನಿಷ್ಠ ಕೂಲಿ ಜಾರಿ ಮಾಡುವವರೆಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ಚಲೊ ಹಾಗೂ ನವೆಂಬರ್‌ನಲ್ಲಿ ಕೇಂದ್ರದ ವಿರುದ್ಧ ದೆಹಲಿ ಚಲೊ ನಡೆಸಲಿದ್ದೇವೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಚ್‌. ಓಬಳಪ್ಪ, ಫೆಡರೇಷನ್ ಕಾರ್ಯದರ್ಶಿ ಎನ್‌.ಶಿವಣ್ಣ, ಮುಖಂಡರಾದ ಆನಂದರಾಜ್, ಆವರಗೆರೆ ಚಂದ್ರು, ಎಚ್‌.ಜಿ.ಉಮೇಶ್‌, ಎಂ.ಬಿ.ಶಾರದಮ್ಮ, ವಿಶಾಲಾಕ್ಷಿ, ಎಸ್‌.ಎಸ್‌.ಮಲ್ಲಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯ್‌ ಕುಮಾರ್ ಅವರೂ ಇದ್ದರು.

* * 

ಯಾವ ವಸ್ತುವಿನ ಮೇಲೆ ಜಿಎಸ್‌ಟಿ ಹಾಕಬೇಕು ಎಂಬ ಸಾಮಾನ್ಯ ಜ್ಞಾನವೂ ಕೇಂದ್ರ ಸರ್ಕಾರಕ್ಕಿಲ್ಲ. ಸಂಸಾರ ನಡೆಸಿ ಅನುಭವ ಇಲ್ಲ ದವರಿಗೆ ಇದು ತಿಳಿಯುವುದಿಲ್ಲ.
–ಜಯಮ್ಮ,
ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.