ADVERTISEMENT

ವಿದ್ಯಾರ್ಥಿಗಳಲ್ಲಿ ಮೂಡಿತು ನಿರಾಳ ಭಾವ

​ಪ್ರಜಾವಾಣಿ ವಾರ್ತೆ
Published 19 ಮೇ 2017, 4:50 IST
Last Updated 19 ಮೇ 2017, 4:50 IST

ದಾವಣಗೆರೆ: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮುಗಿದಿದೆ. ಹೆಸರಾಂತ ಕಾಲೇಜುಗಳಲ್ಲಿ ಸೀಟು ಸಿಗುತ್ತೋ ಇಲ್ಲವೊ, ಸೀಟು ಹಂಚಿಕೆ ವಿಧಾನ ಹೇಗಿರುತ್ತೆ?. ದಾಖಲೆಗಳ ಪರಿಶೀಲನೆ ಹಾಗೂ ಉತ್ತಮ ಕಾಲೇಜು ಆಯ್ಕೆ ಹೇಗೆ ಮಾಡಿಕೊಳ್ಳಬೇಕು ಎನ್ನುವ ಸಂದೇಹದಿಂದ ಬಂದವರು ನೂರಾರು ವಿದ್ಯಾರ್ಥಿಗಳು. ಕೌನ್ಸೆಲಿಂಗ್‌ ಪೂರ್ವ ಮಾರ್ಗ
ದರ್ಶನ ಕಾರ್ಯಕ್ರಮದ ನಂತರ ನಿರಾಳ ಭಾವ ಅವರದಾಗಿತ್ತು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ಗುರುವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ಸಿಇಟಿ ಕೌನ್ಸೆಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರ’ದಲ್ಲಿ ಕಂಡ ಬಂದ ದೃಶ್ಯವಿದು. ಸಭಾಂಗಣ ವಿದ್ಯಾರ್ಥಿಗಳಿಂದ ಕಿಕ್ಕಿರಿದಿದ್ದು, ಒಳ್ಳೆಯ ಪತ್ರಿಕ್ರಿಯೆ ವ್ಯಕ್ತವಾಯಿತು.

ಕೌನ್ಸೆಲಿಂಗ್‌, ಸೀಟು ಹಂಚಿಕೆಯ ವಿಧಾನ, ಶೈಕ್ಷಣಿಕ ದಾಖಲೆಗಳ ಪರಿಶೀಲನೆ ಇವುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸ್ವಲ್ಪ ಗೊಂದಲಗಳು ಇದ್ದವು. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೋಡಲ್‌ ಅಧಿಕಾರಿ ನಿರಂಜನ್‌ ಅವರು ವಿವರವಾದ ಮಾಹಿತಿ ನೀಡಿ, ಅವುಗಳಿಗೆ ಪರಿಹಾರ ಒದಗಿಸಿದರು.

ADVERTISEMENT

‘ಮೆರಿಟ್‌ ಇದ್ದಲ್ಲಿ ಆಯ್ಕೆ ಮಾಡಿಕೊಂಡ ಕಾಲೇಜುಗಳಲ್ಲಿ ಇಷ್ಟಪಟ್ಟ ಕೋರ್ಸ್‌ಗಳ ಅಧ್ಯಯನ ನಡೆಸಬಹುದು. ಪೋಷಕರು, ವಿದ್ಯಾರ್ಥಿಗಳು ಆತಂಕಪಡುವ ಅಗತ್ಯ ಇಲ್ಲ’ ಎನ್ನುತ್ತ ನಿರಂಜನ್‌ ಅವರು, ಪೋಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವಿಶ್ವಾಸ ತುಂಬಿದರು.

ಸೀಟು ಹಂಚಿಕೆ ವಿಧಾನ ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಯುತ್ತದೆ. ಇದರಲ್ಲಿ ಯಾವುದೇ ಅಧಿಕಾರಿ ಅಥವಾ ರಾಜಕಾರಣಿಗಳ ಪ್ರಭಾವ ನಡೆಯುವುದಿಲ್ಲ. ಎಲ್ಲವೂ ಪಾರದರ್ಶಕವಾಗಿರುತ್ತದೆ. ಉತ್ತಮ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳು ಅವರು ಆಯ್ಕೆ ಮಾಡಿಕೊಂಡ ಪದವಿಯ ಕೋರ್ಸ್‌ ಹಾಗೂ ಕಾಲೇಜುಗಳಲ್ಲಿ ಅಧ್ಯಯನ ನಡೆಸಬಹುದು ಎಂದರು.

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಇದೇ 27ಕ್ಕೆ ಪ್ರಕಟವಾಗಲಿದೆ. ಜೂನ್‌ 5ರಿಂದ 20 ರವರೆಗೆ ದಾಖಲೆಗಳ ಪರಿಶೀಲನೆ ನಡೆಯಲಿದೆ. ಎಸ್ಸೆಸ್ಸೆಲ್ಸಿ ಮೂಲ ಪ್ರಮಾಣ ಪತ್ರ ಹಾಗೂ ಪಿಯು ಮತ್ತು ಸಿಇಟಿ ಪ್ರವೇಶ ಪತ್ರ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಪರೀಕ್ಷಾ ಪ್ರಾಧಿಕಾರ ಸೂಚಿಸಿದ ದಾಖಲೆಗಳ ಎರಡು ಪ್ರತಿಗಳೊಂದಿಗೆ ಸೂಚಿಸಿದ ದಿನಾಂಕ ಹಾಗೂ ಸಮಯದಲ್ಲಿ ಪ್ರಾಧಿಕಾರದಲ್ಲಿ ಹಾಜರಿರಬೇಕು.

ದಾಖಲೆಗಳ ಪರಿಶೀಲನೆ ವೇಳೆ ಪ್ರಾಧಿಕಾರದ ಅಧಿಕಾರಿಗಳು ನೀಡುವ ಪಾಸ್‌ವರ್ಡ್‌ನ್ನು ವಿದ್ಯಾರ್ಥಿಗಳು ರಹಸ್ಯವಾಗಿ ಇಟ್ಟುಕೊಳ್ಳಬೇಕು’ ಎಂದರು.‘ಕೋರ್ಸ್‌, ಕಾಲೇಜು ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ನೀಡಬೇಕು. ಯಾವುದೇ ಕಾರಣಕ್ಕೂ ಅವರ ಮೇಲೆ ಒತ್ತಡ ಹಾಕಬಾರದು. ಜತೆಗೆ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಕಾಲೇಜಿನ ಸೌಲಭ್ಯ ಹಾಗೂ ಜವಾಬ್ದಾರಿಯ ಬಗ್ಗೆಯೂ ಪರಿಶೀಲನೆ ನಡೆಸಬೇಕು’ ಎಂದು ಪೋಷಕರಿಗೆ ಸಲಹೆ ನೀಡಿದರು.

ಇಷ್ಟವಾದ ಕೋರ್ಸ್‌ ಆಯ್ಕೆ ಮಾಡಿ: ಎಂಜಿನಿಯರಿಂಗ್‌  ಹಾಗೂ ವೃತ್ತಿ ಶಿಕ್ಷಣ ಕೋರ್ಸ್‌ ಪ್ರವೇಶಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿದ ಜಿ.ಎಂ.ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಪ್ರಾಂಶುಪಾಲ ಡಾ.ಪ್ರಕಾಶ್‌, ಪ್ರತಿ ವೃತ್ತಿಪರ ಕೋರ್ಸ್‌ ಮಹತ್ವದ್ದಾಗಿರುತ್ತದೆ. ವಿದ್ಯಾರ್ಥಿಯಲ್ಲಿ ವೃತ್ತಿ ಕೌಶಲವನ್ನು ಹೆಚ್ಚಿಸುತ್ತದೆ. ನಿಮಗೆ ಇಷ್ಟವಾದ ಪದವಿ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಕಾಲೇಜು ಹಾಗೂ ಹಾಸ್ಟೆಲ್‌ಗಳ ಆಯ್ಕೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಜಾಗರೂಕತೆ ವಹಿಸಬೇಕು. ಜೊತೆಗೆ ಉತ್ತಮ ಕಾಲೇಜುಗಳ ಆಯ್ಕೆಯ ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈಗಿನ ಡಿಜಿಟಲ್‌ ಯುಗದಲ್ಲಿ ಸಿಇಟಿ ಆಕಾಂಕ್ಷಿಗಳು, ಯಾವುದೇ ಎಂಜಿನಿಯರಿಂಗ್‌ ಕಾಲೇಜಿನ ವಿವರಗಳನ್ನು ವೆಬ್‌ಸೈಟ್‌ಗಳ ಮೂಲಕ ಕಲೆಹಾಕಬಹುದು ಎಂದರು.
ಬೆಂಗಳೂರಿನ ಪ್ರೆಸಿಡೆನ್ಸಿ ಯುನಿವರ್ಸಿಟಿಯ ನಿರ್ದೇಶಕ (ಆಡಳಿತ, ಮಾರುಕಟ್ಟೆ) ಎಚ್‌.ಎನ್‌.ಅರುಣ್‌ಕುಮಾರ್‌ ತಮ್ಮ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಿಗೆ ಇರುವ ಕೋರ್ಸ್‌ ಹಾಗೂ ಸೌಲಭ್ಯಗಳ ಮಾಹಿತಿ ನೀಡಿದರು.

400 ವಿದ್ಯಾರ್ಥಿಗಳು

ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಹರಪನಹಳ್ಳಿ, ಜಗಳೂರು ತಾಲ್ಲೂಕು ಸೇರಿದಂತೆ ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳಿಂದಲೂ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಕೌನ್ಸೆಲಿಂಗ್‌ ಪೂರ್ವ ಮಾರ್ಗದರ್ಶನ ಶಿಬಿರದಲ್ಲಿ  ಭಾಗವಹಿಸಿದ್ದರು.

*

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಯಿತು. ಸೀಟು ಹಂಚಿಕೆ ಹಾಗೂ ದಾಖಲಾತಿಗಳ ಪರಿಶೀಲನೆಯ ವಿಧಾನದ ಮಾಹಿತಿ ಉಪಯುಕ್ತವಾಗಿತ್ತು.
ಮಲ್ಲಿಕಾರ್ಜುನಯ್ಯ, ಪೋಷಕ

*

ವಿದ್ಯಾರ್ಥಿಗಳ ದೃಷ್ಟಿಯಿಂದ ಸಿಇಟಿ ಕೌನ್ಸೆಲಿಂಗ್‌ ಪೂರ್ವ ಮಾರ್ಗದರ್ಶನ ಶಿಬಿರ ಉಪಯುಕ್ತವಾದುದ್ದು. ಗ್ರಾಮೀಣ ವಿದ್ಯಾರ್ಥಿಗಳಿಗೆ ತುಂಬಾ ಅಗತ್ಯವಿತ್                         ವೀಣಾ, ಪೋಷಕರು, ಹೊನ್ನಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.