ADVERTISEMENT

ವೃತ್ತಿಯಲ್ಲಿ ತ್ವರಿತಗತಿ, ನಿಖರತೆ ಇರಲಿ: ಡಿಡಿಪಿಐ

ಲಿಪಿಕ ನೌಕರರಿಗೆ ಪ್ರೌಢಶಾಲಾ ಹಂತದಲ್ಲಿನ ದಾಖಲೆಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:58 IST
Last Updated 19 ಜನವರಿ 2017, 5:58 IST
ವೃತ್ತಿಯಲ್ಲಿ ತ್ವರಿತಗತಿ, ನಿಖರತೆ ಇರಲಿ: ಡಿಡಿಪಿಐ
ವೃತ್ತಿಯಲ್ಲಿ ತ್ವರಿತಗತಿ, ನಿಖರತೆ ಇರಲಿ: ಡಿಡಿಪಿಐ   

ದಾವಣಗೆರೆ: ‘ತ್ವರಿತಗತಿ ಹಾಗೂ ನಿಖರತೆಯ ಕೆಲಸವಾಗಬೇಕಾದರೆ ಸೂಕ್ತ ತರಬೇತಿ ತುಂಬಾ ಅವಶ್ಯ’ ಎಂದು ಡಿಡಿಪಿಐ ಎಚ್‌.ಎಂ.ಪ್ರೇಮಾ ಹೇಳಿದರು.

ನಗರದ ಡಯೆಟ್‌ ಸಭಾಂಗಣದಲ್ಲಿ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ ವಾಹನ ಚಾಲಕರ ಮತ್ತು ಗ್ರೂಪ್‌ ‘ಡಿ’ ನೌಕರರ ಸಂಘ ಬುಧವಾರ ಹಮ್ಮಿಕೊಂಡಿದ್ದ ಸಂಘದ ಕ್ಯಾಲೆಂಡರ್‌ ಲೋಕಾರ್ಪಣೆ ಮತ್ತು ಸರ್ಕಾರಿ ಪ್ರೌಢಶಾಲೆಗಳ ಲಿಪಿಕ ನೌಕರರಿಗೆ ಪ್ರೌಢಶಾಲಾ ಹಂತದಲ್ಲಿನ ದಾಖಲೆಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಅನುಕಂಪದ ಆಧಾರದ ಮೇಲೆ ನೇಮಕವಾಗುವ ನೌಕರರಿಗೆ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಸಾಮಾನ್ಯ ಜ್ಞಾನ ಇರುವುದಿಲ್ಲ. ಆ ಸಮಯದಲ್ಲಿ ತಪ್ಪುಗಳಾಗುವುದು ಸಹಜ. ಅಂಥವರಿಗೆ ತರಬೇತಿ ನೀಡಿ, ಆಯಾ ಇಲಾಖೆ ಕಾರ್ಯಕ್ಕೆ ಸಜ್ಜುಗೊಳಿಸುವಂತಹ ಕಾರ್ಯ ಶ್ಲಾಘನೀಯ’ ಎಂದರು.

‘ವಿದ್ಯಾರ್ಥಿಗಳಿಗೆ ಶಾಲಾ ದಾಖಲಾತಿಗಳನ್ನು ತುಂಬಾ ಎಚ್ಚರವಾಗಿ ನಿರ್ವಹಣೆ ಮಾಡಬೇಕು. ತರಾತುರಿ ಹಾಗೂ ನಿರ್ಲಕ್ಷದಿಂದ ಮಾಡಬಾರದು. ಸ್ವಲ್ಪ ಎಚ್ಚರ ತಪ್ಪಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದ್ದು, ನ್ಯಾಯಾಲಯದ ಮೆಟ್ಟಿಲು ಏರುವ ಸಾಧ್ಯತೆಯೂ ಇರುತ್ತದೆ’ ಎಂದು ಕಿವಿಮಾತು ಹೇಳಿದರು.

‘ಶಿಕ್ಷಣ ಇಲಾಖೆಯಲ್ಲಿ ಲಿಪಿಕ ನೌಕರರ ಕೊರತೆ ಇದೆ. ಇರುವ ಸಿಬ್ಬಂದಿಗಳೇ ಜಾಣ್ಮೆಯಿಂದ  ಶಾಲಾ ಕಡತಗಳನ್ನು ನಿರ್ವಹಣೆ ಮಾಡಬೇಕು. ಗೊಂದಲವಿದ್ದಲ್ಲಿ ಹಿರಿಯ ನೌಕರರಿಂದ ಸಲಹೆ, ಮಾರ್ಗದರ್ಶನ ಪಡೆಯಬೇಕು. ಆಗ ಕಲಿಯುವ ಆಸಕ್ತಿ ಹೆಚ್ಚುತ್ತದೆ. ಜೊತೆಗೆ ಸಹೋದ್ಯೋಗಿಗಳಿಂದ ಗೌರವವೂ ಸಿಗುತ್ತದೆ’ ಎಂದು ಅವರು ಸಲಹೆ ನೀಡಿದರು.

‘ಇತ್ತೀಚಿನ ದಿನಗಳಲ್ಲಿ ಇಲಾಖೆಯ ದಾಖಲೆ/ ಕಡತಗಳನ್ನು ಕಂಪ್ಯೂಟರ್‌ ಗಳಲ್ಲಿ ಸಂಗ್ರಹಿಸಿಡುವುದು ಹೆಚ್ಚಾಗು ತ್ತಿದೆ. ಎಲ್ಲರಿಗೂ ಕಂಪ್ಯೂಟರ್‌ ಜ್ಞಾನ ತುಂಬಾ ಅಗತ್ಯ. ಇದರಿಂದ ಸ್ವಾವಲಂಬಿಯಾಗಿ ಕೆಲಸ ಮಾಡಬಹುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಶತಮಾನ ಪೂರೈಸಿದ ಶಾಲೆಗಳು ತುಂಬಾ ಇವೆ. ಆ ಶಾಲೆಗಳ ಸ್ಥಿರ ಹಾಗೂ ಚರ ಆಸ್ತಿಗಳು ಆ ಶಾಲೆಯ ಶಾಶ್ವತ ಆಸ್ತಿಗಳಾಗಿ ಇರುತ್ತವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲ್ಯಾಮಿನೇಷನ್‌ ಮಾಡಿ ಜೋಪಾನವಾಗಿಡಬೇಕು’ ಎಂದು ಹೇಳಿದರು.

‘ಸಾರ್ವಜನಿಕರ ಸೇವೆಯನ್ನು ಸಕಾಲದಲ್ಲಿ ಪ್ರಾಮಾಣಿಕವಾಗಿ ಮಾಡಿ, ಹಿಂಬರಹ ನೀಡುವಾಗಲೂ ಸ್ಪಷ್ಟ ಕಾರಣ ನೀಡಬೇಕು. ಸರ್ಕಾರದಿಂದ ನಾವು ಹೇಗೆ ಸೌಲಭ್ಯಗಳನ್ನು ನಿರೀಕ್ಷೆ ಮಾಡು ತ್ತೇವೆಯೋ ಅದೇ ರೀತಿಯಲ್ಲಿ ನಮ್ಮ ಕೆಲಸದಲ್ಲಿಯೂ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇರಬೇಕು’ ಎಂದು ಹೇಳಿದರು.

‘ಡಯೆಟ್‌ ಪ್ರಾಂಶುಪಾಲ ಎಚ್‌.ಮಂಜುನಾಥ ಮಾತನಾಡಿ, ‘ನೌಕರರ ತರಬೇತಿ ಕಾರ್ಯಾಗಾರ ಆಯೋಜನೆಗೆ ಸಂಬಂಧಿಸಿದಂತೆ ಸಂಘದ ಸದಸ್ಯರು ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದಲ್ಲಿ ಇಲಾಖೆಯಿಂದಲೇ ನೌಕರರಿಗೆ ತರಬೇತಿ ನೀಡಲು ಹೆಚ್ಚು ಅನುಕೂಲವಾಗುತ್ತದೆ. ಈ ಬಗ್ಗೆ ಸಂಘದ ಸದಸ್ಯರು ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ಪತ್ರಾಂಕಿತ ಸಹಾಯಕ ಎಚ್‌.ಪಾತಲಿಂಗಪ್ಪ, ಜಿ.ಮಹಾದೇವಪ್ಪ ಮಾತನಾಡಿದರು. ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ ನಾಯಕ, ಬಿ.ಸುರೇಂದ್ರನಾಯ್ಕ, ಕೆ.ಆರ್‌. ವಿಶ್ವನಾಥ, ಕೆ.ಸುಬ್ಬರಾವ್‌, ಎನ್‌.ಇ. ನಟರಾಜ್‌, ಜಿ.ಬಿ.ಶಿವಕುಮಾರ್, ತೌಫಿಕ್‌ ಅಹಮ್ಮದ್‌ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಗಿರಿಧರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಮಯದಲ್ಲಿ ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.