ADVERTISEMENT

ವೈರಸ್ ಆತಂಕ: ಎಟಿಎಂಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:13 IST
Last Updated 17 ಮೇ 2017, 5:13 IST
ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಎಟಿಎಂ ಕೇಂದ್ರ ಕಾರ್ಯ ಸ್ಥಗಿತಗೊಳಿಸಿದ್ದ ದೃಶ್ಯ
ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಎಟಿಎಂ ಕೇಂದ್ರ ಕಾರ್ಯ ಸ್ಥಗಿತಗೊಳಿಸಿದ್ದ ದೃಶ್ಯ   

ದಾವಣಗೆರೆ: ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಸೈಬರ್ ದಾಳಿ ನಡೆಯುವ ಸಾಧ್ಯತೆಯಿದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಬಹುತೇಕ ಎಟಿಎಂ ಕೇಂದ್ರಗಳಲ್ಲಿ ಸೇವೆ ಸ್ಥಗಿತಗೊಂಡಿತ್ತು. ಪರಿಣಾಮ, ಹಣಸಿಗದೆ ಗ್ರಾಹಕರು ಪರದಾಡುವಂತಾಯಿತು.

ಹದಡಿ ರಸ್ತೆ ಬಳಿಯ ವಿದ್ಯಾರ್ಥಿಭವನ ವೃತ್ತದಲ್ಲಿರುವ ಎಟಿಎಂಗಳಲ್ಲಿ ಹಣ ಇರಲಿಲ್ಲ. ಡೆಂಟಲ್‌ ಕಾಲೇಜು ರಸ್ತೆ, ರಾಮ್‌ ಅಂಡ್‌ ಕೋ ವೃತ್ತ, ಎಂಸಿಸಿ ‘ಎ’ ಮತ್ತು ‘ಬಿ’ ಬ್ಲಾಕ್‌, ವಿದ್ಯಾನಗರ, ಮಂಡಿಪೇಟೆ ಸೇರಿದಂತೆ ಪ್ರಮುಖ ವಾಣಿಜ್ಯ ವಹಿವಾಟು ಪ್ರದೇಶವಾದ ಹಳೆಯ ದಾವಣಗೆರೆ ಭಾಗದಲ್ಲಿರುವ ಎಟಿಎಂಗಳಲ್ಲಿ ‘ನೋ ಕ್ಯಾಷ್‌’ ಬೋರ್ಡ್‌ ಎದ್ದು ಕಾಣುತ್ತಿತ್ತು.

ದಿನಸಿ ಹಾಗೂ ಅಗತ್ಯವಸ್ತುಗಳ ಖರೀದಿಗಾಗಿ ನಗರಕ್ಕೆ ಬಂದವರಿಗೆ ಹಣಬಿಡಿಸಿಕೊಳ್ಳಲು ಸಮಸ್ಯೆ ಎದುರಾಯಿತು. ಒಂದು ಎಟಿಎಂನಿಂದ ಮತ್ತೊಂದು ಎಟಿಎಂಗೆ ಅಲೆದಾಡ
ಬೇಕಾಯಿತು. ಬಹುತೇಕ ಎಟಿಎಂಗಳಲ್ಲಿ ಹಣ ಸಿಗದ ಪರಿಣಾಮ, ಖರೀದಿ ಸಾಧ್ಯವಾಗದೆ ಬರಿಗೈಲಿ ಊರಿಗೆ ಮರಳಬೇಕಾಯಿತು.

ADVERTISEMENT

ನಗದು ಸಮಸ್ಯೆ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಲೀಡ್‌ ಬ್ಯಾಂಕ್‌ ಮ್ಯಾನೇಜರ್ ಎನ್‌.ಟಿ.ಯರ್ರಿಸ್ವಾಮಿ, ‘ವನ್ನಾಕ್ರೈ’ ಕುತಂತ್ರಾಂಶದ ದಾಳಿಯಿಂದ ರಕ್ಷಣೆ ಪಡೆಯಲು ಎಟಿಎಂಗಳ ಸಾಫ್ಟ್‌ವೇರ್‌ಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಆರ್‌ಬಿಐ ಸೂಚನೆ ನೀಡಿದೆ. ಹಾಗಾಗಿ, ಎಟಿಎಂಗಳ ಸೇವೆಯಲ್ಲಿ ವ್ಯತ್ಯಯವಾಗಿದೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಹೆಚ್ಚಿನ ಎಟಿಎಂ ಕೇಂದ್ರಗಳು ಆಧುನಿಕ ತಂತ್ರಾಂಶ ಒಳಗೊಂಡಿದ್ದರೂ, ಸೈಬರ್ ದಾಳಿ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದೆರಡು ದಿನ ಎಟಿಎಂಗಳ ಸೇವೆಯಲ್ಲಿ ತೊಂದರೆ ಆಗಬಹುದು. ತಂತ್ರಾಂಶ ಬದಲಾವಣೆ ಕಾರ್ಯ ನಡೆಯುತ್ತಿದ್ದು, ಗ್ರಾಹಕರು ಸಹಕರಿಸಬೇಕು. ಬ್ಯಾಂಕ್‌ಗಳಲ್ಲಿ ವ್ಯವಹಾರ ಎಂದಿನಂತೆ ನಡೆಯುತ್ತಿದೆ ಎಂದು  ಅವರು ಹೇಳಿದರು.

‘ಕರ್ನಾಟಕ ಹಾಗೂ ತಮಿಳುನಾಡು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಸೈಬರ್ ದಾಳಿ ಸಂಭವ ಹೆಚ್ಚಾಗಿದೆ ಎಂದು ಆರ್‌ಬಿಐ ಎಚ್ಚರಿಕೆ ನೀಡಿದೆ. ಬ್ಯಾಂಕ್‌ ಮಾತ್ರವಲ್ಲ, ಗ್ರಾಹಕರು ಅನಾಮಧೇಯ ಇಮೇಲ್‌ಗಳ ಬಗ್ಗೆ, ಅಟ್ಯಾಚ್‌ಮೆಂಟ್‌ಗಳನ್ನು ತೆರೆಯುವ ಮುನ್ನ, ಇತರ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಕಾರ್ಡ್‌ ಬೇಡ, ಕ್ಯಾಷ್‌ ಕೊಡಿ’
ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಹಾರದ ಮೇಲೂ ಸೈಬರ್ ದಾಳಿ ನಡೆಯುವ ಆತಂಕದ ಹಿನ್ನೆಲೆಯಲ್ಲಿ ನಗರದ ಹಲವು ವ್ಯಾಪಾರ ಕೇಂದ್ರಗಳು ಹಣ ಪಾವತಿಗೆ ಡೆಬಿಟ್ ಹಾಗೂ ಕ್ರೆಡಿಟ್‌ ಕಾರ್ಡ್‌ಗಳನ್ನು ಸ್ವೀಕರಿಸಲಿಲ್ಲ. ಹಣವಿದ್ದರೆ ಮಾತ್ರ ಖರೀದಿ ಮಾಡಿ ಎಂದು ಅಂಗಡಿ ಮಾಲೀಕರು ಗ್ರಾಹಕರಿಗೆ ಸೂಚನೆ ನೀಡುತ್ತಿದ್ದ ಪ್ರಕರಣಗಳು ಎದುರಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.