ADVERTISEMENT

ಹೋಟೆಲ್‌ಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಕೊಠಡಿ

​ಪ್ರಜಾವಾಣಿ ವಾರ್ತೆ
Published 18 ಮೇ 2017, 9:41 IST
Last Updated 18 ಮೇ 2017, 9:41 IST

ದಾವಣಗೆರೆ: ಮೂವತ್ತಕ್ಕಿಂತ ಅಧಿಕ ಕುರ್ಚಿಗಳಿರುವ ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಒಂದು ಪ್ರತ್ಯೇಕ ಧೂಮಪಾನ ಕೊಠಡಿ ವ್ಯವಸ್ಥೆ ಮಾಡಲು ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ತಂಬಾಕು ನಿಯಂತ್ರಣ ಕೋಶದ ಸದಸ್ಯರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ 2ನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಆ ಕೊಠಡಿಗೆ ಇತರೆ ಯಾವುದೇ ಸೌಲಭ್ಯ ನೀಡಬಾರದು. ಸಿಗರೇಟು ಹೊಗೆ ಹೋಗಲು ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಅಂತಹ ಹೋಟೆಲ್‌ ಅಥವಾ ರೆಸ್ಟೊರೆಂಟ್‌ಗಳಿಗೆ ದಂಡ ವಿಧಿಸಬೇಕು ಎಂದು ಸೂಚಿಸಿದರು.

ADVERTISEMENT

ಎಲ್ಲ ಇಲಾಖೆಗಳು ತಾಲ್ಲೂಕುವಾರು ದಾಳಿ ನಡೆಸಿದ ವರದಿಯನ್ನು ನಿಯಮಿತವಾಗಿ ಕಚೇರಿಗೆ ಸಲ್ಲಿಸಬೇಕು. ತಹಶೀಲ್ದಾರರು ನಿಯಮಿತವಾಗಿ ದಾಳಿ ನಡೆಸಲು ದಿನಾಂಕ ನಿಗದಿಗೊಳಿಸಿ ಸದಸ್ಯರಿಗೆ ಸೂಚಿಸಿ, ವರದಿ ಸಲ್ಲಿಸಬೇಕೆಂದು ಹೇಳಿದರು.

ಶಾಲಾ–ಕಾಲೇಜುಗಳ 100 ಯಾರ್ಡ್ ವ್ಯಾಪ್ತಿ, ಮಹಾನಗರ ಪಾಲಿಕೆ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಲ್ಲಿ ಸಂಬಂಧಿಸಿದ ಸಂಸ್ಥೆಗಳು ತಂಬಾಕು ದುಷ್ಪರಿಣಾಮ ಮತ್ತು ಜಾಗೃತಿ ಕುರಿತು ಫಲಕ ಹಾಕಿಸಬೇಕು ಎಂದರು.

ನಗರ ಪ್ರದೇಶದಲ್ಲಿ ನಡೆದಷ್ಟು ಪ್ರಗತಿ ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿಲ್ಲ. ಈ ನಿಟ್ಟಿನಲ್ಲಿ ಕಡ್ಡಾಯವಾಗಿ ನಿಯಮಿತ ಜಾಗೃತಿ ಮತ್ತು ದಾಳಿ ಮೂಲಕ ಪ್ರಗತಿ ಸಾಧಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ವಿಶೇಷವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪ್ರೌಢಶಾಲೆ ಮತ್ತು ಪಿಯು ಮಕ್ಕಳಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ಪ್ರೊಜೆಕ್ಟರ್ ಇರುವಂತಹ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿ ತಂಬಾಕು ದುಷ್ಪರಿಣಾಮ ಕುರಿತ ಚಿತ್ರ ಮಾಹಿತಿಯನ್ನು ತೋರಿಸುವಂತೆ ಡಿಡಿಪಿಯು, ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಮೇ 31ರಂದು ಆಚರಿಸಲಾಗುವ ವಿಶ್ವ ತಂಬಾಕುರಹಿತ ದಿನಾಚರಣೆ ಅಂಗವಾಗಿ ಪ್ರಬಂಧ ಸ್ಪರ್ಧೆಯನ್ನು ಹಾಗೂ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಚಾರ ಸಂಕಿರಣವನ್ನು ನಗರದ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಆಯೋಜಿಸುವಂತೆ ಸೂಚಿಸಿದರು.

ರಾಜ್ಯ ತಂಬಾಕು ನಿಯಂತ್ರಣ ತಂಡದ ವಿಭಾಗೀಯ ಸಂಯೋಜಕ ಮಹಾಂತೇಶ್ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಂಗಾಧರ್, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ.ಸರೋಜಾ ಬಾಯಿ, ಡಾ.ನಂದಾ, ತಾಲ್ಲೂಕುಗಳ ವೈದ್ಯಾಧಿಕಾರಿಗಳು, ಕಾರ್ಮಿಕ ಇಲಾಖೆ ಮುಮ್ತಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ಆರೋಗ್ಯ ನಿರೀಕ್ಷಕರು, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.