ADVERTISEMENT

ಹೋಳಿ ಹುಣ್ಣಿಮೆ: ಹಲವೆಡೆ ಕಾಮದಹನ

ಇಂದು ಓಕುಳಿಯಾಟದ ಸಂಭ್ರಮ; ಬಲವಂತದಿಂದ ಬಣ್ಣ ಹಚ್ಚಬೇಡಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 5:37 IST
Last Updated 13 ಮಾರ್ಚ್ 2017, 5:37 IST
ಹೋಳಿ ಹಬ್ಬದ ಅಂಗವಾಗಿ ದಾವಣಗೆರೆ ನಗರದಲ್ಲಿ ಭಾನುವಾರ ರಾತ್ರಿ ಕಾಮದಹನ ಮಾಡಲಾಯಿತು.
ಹೋಳಿ ಹಬ್ಬದ ಅಂಗವಾಗಿ ದಾವಣಗೆರೆ ನಗರದಲ್ಲಿ ಭಾನುವಾರ ರಾತ್ರಿ ಕಾಮದಹನ ಮಾಡಲಾಯಿತು.   

ದಾವಣಗೆರೆ: ರಂಗಿನ ಹಬ್ಬ ಹೋಳಿ ಆಚರಣೆಗೆ ನಗರ ಸಜ್ಜಾಗಿದ್ದು, ಜನರು ಭಾನುವಾರ ಬಣ್ಣಗಳ ಖರೀದಿಗೆ ಮುಗಿಬಿದ್ದಿದ್ದರು. ರಾಂ ಅಂಡ್‌ ಕೋ ವೃತ್ತ, ಮಂಡಿಪೇಟೆ ಸೇರಿದಂತೆ ನಗರದ ಹಲವೆಡೆ ಬಣ್ಣಗಳ ಮಾರಾಟಕ್ಕೆ ಪ್ರತ್ಯೇಕ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ಕಾಮದಹನ: ಹುಣ್ಣಿಮೆಯ ದಿನ ಕಾಮನನ್ನು ಸುಡುವುದು ಸಂಪ್ರದಾಯ. ಅದರಂತೆ, ನಗರದ ಹಲವು ಬಡಾವಣೆಗಳಲ್ಲಿ ಬೆಳಿಗ್ಗಿನಿಂದಲೇ ಯುವಕರು ಒಟ್ಟುಗೂಡಿ ಮನೆಮನೆಗೆ ತೆರಳಿ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಒಂದೆಡೆ ರಾಶಿ ಹಾಕಿದರು. ರಾತ್ರಿ ಕಾಮನ ಪ್ರತಿಕೃತಿ ನಿರ್ಮಿಸಿ, ದಹನ ಮಾಡಿದರು.

ರಾಂ ಅಂಡ್‌ ಕೊ ವೃತ್ತ, ಪಿಸಾಳೆ ಕಾಂಪೌಂಡ್‌, ವಿನೋಬ ನಗರ, ಪೊಲೀಸ್ ಕ್ವಾಟ್ರಸ್‌, ಎಂಸಿಸಿ ‘ಎ’ ಬ್ಲಾಕ್‌ ಸೇರಿದಂತೆ ಹಲವೆಡೆ ಕಾಮನನ್ನು ದಹಿಸ ಲಾಯಿತು. ಬಳಿಕ ಸ್ಥಳೀಯರು ಒಟ್ಟು ಗೂಡಿ ನೃತ್ಯಮಾಡಿ ಕೇಕೆ ಹಾಕಿದರು.

ಸೋಮವಾರ ಹೋಳಿ ಆಚರಣೆ ಹಿನ್ನೆಲೆಯಲ್ಲಿ ಬಣ್ಣದ ಪಾಕೆಟ್‌ಗಳ ಮಾರಾಟ ನಡೆಯಿತು. ಮಕ್ಕಳು ಪಿಚಕಾರಿ ಖರೀದಿಸಿ ಸಂಭ್ರಮಿಸಿದರು.

ಪೊಲೀಸರ ಕಿವಿಮಾತು: ಹೋಳಿ ಆಚರಣೆ ವೇಳೆ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ನಡೆದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಮಧ್ಯಾಹ್ನ 12ರೊಳಗೆ ಹೋಳಿ ಆಚರಣೆ ಅಂತ್ಯಗೊಳಿಸಬೇಕು. ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಬಾರದು. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಮಿತವಾಗಿ ನೀರಿನ ಬಳಕೆ ಮಾಡಬೇಕು ಎಂದು ಎಸ್‌ಪಿ ಡಾ.ಭೀಮಾಶಂಕರ ಎಸ್‌.ಗುಳೇದ ಮನವಿ ಮಾಡಿದ್ದಾರೆ.

ತ್ರಿಬಲ್ ರೈಡಿಂಗ್, ವೇಗವಾಗಿ ಸವಾರಿ, ಕರ್ಕಶ ಹಾರ್ನ್‌ ಬಳಕೆ ನಿಷೇದಿಸಲಾಗಿದ್ದು, ಯುವಕರು ಅಸಭ್ಯವಾಗಿ ವರ್ತಿಸಬಾರದು. ಬಲವಂತವಾಗಿ ಬಣ್ಣ ಎರಚಬಾರದು ಎಂದು ಎಸ್‌ಪಿ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.