ADVERTISEMENT

‘ದುಡಿಯುವ ರೈತರ ಶ್ರಮಕ್ಕೆ ಪ್ರತಿಫಲ ದೊರಕಿಲ್ಲ’

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್‌

​ಪ್ರಜಾವಾಣಿ ವಾರ್ತೆ
Published 31 ಮೇ 2016, 9:38 IST
Last Updated 31 ಮೇ 2016, 9:38 IST

ಮಾಯಕೊಂಡ: ‘ಇಲಾಖೆಯ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕು’ ಎಂದು  ಜಿಲ್ಲಾ ಪಂಚಾಯ್ತಿ  ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್‌  ರೈತರಿಗೆ ಸಲಹೆ ನೀಡಿದರು.

ಸಮೀಪದ ಹುಚ್ಚವ್ವನಹಳ್ಳಿಯಲ್ಲಿ ಸೋಮವಾರ ದೇವನಗರಿ ತೋಟಗಾರಿಕೆ ರೈತ ಉತ್ಪಾದಕರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಬಹುಪಾಲು ಜನ ಇಂದಿಗೂ ಕೃಷಿ ಅವಲಂಬಿತರಾಗಿದ್ದಾರೆ. ರೈತರು ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬು. ಹಗಲಿರುಳು ದುಡಿಯುವ ರೈತರಿಗೆ ಇಂದಿಗೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದಿರುವುದು ದುರಂತ. ರೈತರು ಇಲಾಖೆಯ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದು ಅವರು ಕರೆ ನೀಡಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಿದ್ದಪ್ಪ ಮಾತನಾಡಿ, ‘ಮಳೆ ಕೊರತೆ, ಸಾಲಬಾಧೆಯಿಂದ ರೈತರು ನೊಂದಿದ್ದಾರೆ. ಹಿಂದಿನ ಕಾಲದ ಕೃಷಿ ಪದ್ಧತಿಗಳನ್ನು ಕೈಬಿಟ್ಟು ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡು ಬೇಸಾಯ ಮಾಡಬೇಕು. ಅಧಿಕಾರಿಗಳು ರೈತರೊಂದಿಗೆ ಸಹಕರಿಸಿ, ರೈತರ ಬದುಕು ಹಸನು ಮಾಡಬೇಕು’ ಎಂದರು.

ರೈತ ಉತ್ಪಾದಕರ ಸಂಘಗಳು ಖರೀದಿಸುವ ಎಲ್ಲಾ ಯಂತ್ರೋಪಕರಣಗಳಿಗೆ ಸರ್ಕಾರದಿಂದ ಸಹಾಯಧನ ದೊರೆಯಲಿದೆ. ಸಂಘದ ಸದಸ್ಯರು ಬೆಳೆವಿಮೆ ಮಾಡಿಕೊಳ್ಳುವ ಅವಕಾಶವಿದೆ. ರೈತ ಉತ್ಪಾದಕರ ಸಂಘಗಳು  ಬಿತ್ತನೆ ಬೀಜ, ಗೊಬ್ಬರ ಮಾರಾಟ ಮಾಬಹುದು. ಹನಿ ನೀರಾವರಿ ಸೇರಿದಂತೆ ಯಾವುದೇ ಕೃಷಿ ಸಲಕರಣೆಗಳನ್ನು ತಯಾರಿಸಿ, ಖರೀದಿಸಿ ಮಾರಾಟ ಮಾಡಲು ಸಹಾಯಧನ ನೀಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಮಾಹಿತಿ ನೀಡಿದರು.

ಒಂದೇ ಬೆಳೆ ಬೆಳೆಯುವ ಆಸಕ್ತ ರೈತರು, ರೈತ ಉತ್ಪಾದಕ ಸಂಘ ರಚಿಸಿಕೊಳ್ಳಬಹುದು. ಸಂಘಗಳ ಸದಸ್ಯ ರೈತರು ತಮ್ಮಲ್ಲಿರುವ ಕೃಷಿ ಯಂತ್ರೋಪಕರಣಗಳನ್ನು ಸಂಘದಿಂದ ಬಾಡಿಗೆ ನೀಡಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಹೇಳಿದರು.
ಸಂಘದ ಅಧ್ಯಕ್ಷ ಹೆದ್ನೆ ಮುರಿಗೇಶಪ್ಪ, ತಾ.ಪಂ.ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಉಪಾಧ್ಯಕ್ಷ ಪರಮೇಶ್ವರಪ್ಪ,  ಗ್ರಾ.ಪಂ.ಅಧ್ಯಕ್ಷೆ ಮಮತಾ ರವಿ, ಎಪಿಎಂಸಿ ಉಪಾಧ್ಯಕ್ಷ  ರಾಜೇಂದ್ರ, ಹೊನ್ನಾನಾಯ್ಕನಹಳ್ಳಿ ಮುರಿಗೇಂದ್ರಪ್ಪ, ಮಾತನಾಡಿದರು.  ಸಂಘದ ವಾರ್ಷಿಕ ವರದಿ ಮಂಡಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಉಮೇಶ್‌ ನಾಯ್ಕ, ನಾಗರಾಜ್‌, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಕಮಲಮ್ಮ ಮತ್ತು ಸದಸ್ಯರು, ಸಂಘದ ಉಪಾಧ್ಯಕ್ಷ ಶಿವಮೂರ್ತಿ ಮತ್ತು ನಿರ್ದೇಶಕರು, ಕೆನರಾಬ್ಯಾಂಕ್‌ ಮ್ಯಾನೇಜರ್‌ ಕೃಷ್ಣಪ್ಪ, ಕೃಷಿಕ ಸಮಾಜದ ಉಪಾಧ್ಯಕ್ಷ ರುದ್ರೇಶ್‌,  ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.