ADVERTISEMENT

38 ಕೆರೆ ನೀರು ತುಂಬಿಸಲು ಬಜೆಟ್‌ನಲ್ಲಿ ಅನುದಾನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 9:26 IST
Last Updated 27 ಡಿಸೆಂಬರ್ 2017, 9:26 IST
ಹೊನ್ನಾಳಿಯಲ್ಲಿ ನಡೆದ ‘ಸಾಧನಾ ಸಂಭ್ರಮ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು.
ಹೊನ್ನಾಳಿಯಲ್ಲಿ ನಡೆದ ‘ಸಾಧನಾ ಸಂಭ್ರಮ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು.   

ದಾವಣಗೆರೆ/ಹೊನ್ನಾಳಿ: ನ್ಯಾಮತಿ ವ್ಯಾಪ್ತಿಯಲ್ಲಿನ 32 ಗ್ರಾಮಗಳಲ್ಲಿನ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಂಬರುವ ಬಜೆಟ್‌ನಲ್ಲಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಹೊನ್ನಾಳಿಯ ಎಲ್‌ಐಸಿ ಕಚೇರಿ ಪಕ್ಕದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಒಳಗೊಂಡಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ₹ 672 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾಡಿದ ಮನವಿಗೆ ಸಿ.ಎಂ ಪ್ರತಿಕ್ರಿಯಿಸಿದರು.

ಕೆರೆ ತುಂಬಿಸುವುದು ಅತ್ಯಂತ ಅವಶ್ಯ. ಇದಕ್ಕೆ ಎಷ್ಟು ಹಣ ಬೇಕಾದರೂ ಕೊಡಲು ಸಿದ್ಧ. ಕೆರೆ ತುಂಬಿಸುವ ಯೋಜನೆಗಳಿಗಾಗಿಯೇ ಇದುವರೆಗೂ ₹ 7 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಕರ್ನಾಟಕ, ದೇಶದಲ್ಲಿ ರಾಜಸ್ಥಾನ ಬಿಟ್ಟರೆ ಹೆಚ್ಚು ಒಣ ಭೂಮಿ ಪ್ರದೇಶ ಹೊಂದಿದ ರಾಜ್ಯ. 16 ವರ್ಷಗಳಲ್ಲಿ 13 ವರ್ಷ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿ ನೀರಾವರಿಗೆ ಪೂರಕವಾದ ಕಾಮಗಾರಿ ಕೈಗೊಳ್ಳಲು ಸರ್ಕಾರ ಬದ್ಧ ಎಂದರು.

ಹೊನ್ನಾಳಿ ತಾಲ್ಲೂಕಿಗೆ ₹ 2,313 ಕೋಟಿ ಅನುದಾನ: ‘ತಾಲ್ಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 2,313 ಕೋಟಿ ಅನುದಾನ ನೀಡಿದ್ದು, ತಾಲ್ಲೂಕನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಶ್ರಮಪಟ್ಟಿದ್ದೇನೆ’ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

‘ಜಿಲ್ಲೆಯಲ್ಲಿ ಬಯಲು ಶೌಚ ಮುಕ್ತ ತಾಲ್ಲೂಕಾಗಿ ಘೋಷಣೆಯಾಗಿದ್ದು ಹೊನ್ನಾಳಿ. ತಾಲ್ಲೂಕಿನ 175 ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ತಾಲ್ಲೂಕಿಗೆ ಇಂಧನ ಇಲಾಖೆಯಡಿ ₹ 150 ಕೋಟಿ ಬಿಡುಗಡೆಯಾಗಿದ್ದು, ನಿರಂತರ ಜ್ಯೋತಿ ಯೋಜನೆಯಡಿ ದಿನದ 24 ಗಂಟೆಗಳ ಕಾಲವೂ ಸತತವಾಗಿ ವಿದ್ಯುತ್ ನೀಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ತಮ್ಮ ಅವಧಿಯಲ್ಲಿ 10,800 ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಇನ್ನು 2,650 ಮನೆಗಳನ್ನು ನಿರ್ಮಿಸಿಕೊಟ್ಟರೆ ಇಡೀ ತಾಲ್ಲೂಕು ಗುಡಿಸಲು ಮುಕ್ತವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಗಮನಹರಿಸಬೇಕು ಎಂದು ಮನವಿ ಮಾಡಿದರು.

ತುಂಗಾ ನಾಲೆ ಆಧುನೀಕರಣಕ್ಕೆ ₹ 143 ಕೋಟಿ ಮಂಜೂರು ಮಾಡಿದ್ದು, ಮುಂದಿನ ಮಳೆಗಾಲ ಆರಂಭವಾಗುವುದರೊಳಗೆ ಕಾಮಗಾರಿ ಮುಗಿಸಲಾಗುವುದು. ತಾಲ್ಲೂಕಿನ 49 ಗ್ರಾಮಗಳನ್ನು ಪೋಡಿಮುಕ್ತ ಮಾಡಲಾಗಿದೆ ಎಂದರು.

ಜ.1ರಂದು ನ್ಯಾಮತಿ ತಾಲ್ಲೂಕು : ಜನವರಿ 1 ರಂದು ನ್ಯಾಮತಿ ತಾಲ್ಲೂಕು ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು. ಸಮಾರಂಭದಲ್ಲಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಮಾತನಾಡಿದರು. ಸಚಿವ ರುದ್ರಪ್ಪ ಲಮಾಣಿ, ‘ಕಾಡಾ’ ಅಧ್ಯಕ್ಷ ಎಚ್.ಎಸ್.ಸುಂದರೇಶ್, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಆರ್.ಪ್ರಸನ್ನಕುಮಾರ್, ಮೋಹನ್‌ಕುಮಾರ್ ಕೊಂಡಜ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಜಲಜಾನಾಯ್ಕ, ಜಿ.ಪಂ. ಸದಸ್ಯ ಡಿ.ಜಿ.ವಿಶ್ವನಾಥ್, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಪ.ಪಂ. ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ, ಎಪಿಎಂಸಿ ಅಧ್ಯಕ್ಷ ಎ.ಜಿ.ಪ್ರಕಾಶ್, ತಾ.ಪಂ.ಸದಸ್ಯರಾದ ಅಬೀದ್ ಅಲಿಖಾನ್, ಪಿರ್ಯಾನಾಯ್ಕ ಅವರೂ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ಸ್ವಾಗತಿಸಿದರು.

ಶಾಂತನಗೌಡರನ್ನು ಪ್ರಶಂಸಿಸಿದ ಸಿ.ಎಂ,

‘ಸಭ್ಯ ರಾಜಕಾರಣಿ, ಹೆಚ್ಚು ಮಾತನಾಡಲ್ಲ, ಹೆಚ್ಚು ಕೆಲಸ ಮಾಡುತ್ತಾರೆ. ಯಾವಾಗಲು ಮಾತನಾಡುವವರು ಕೆಲಸ ಮಾಡಲ್ಲ’ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಟೀಕಿಸಿದರು.

‘ಎಲ್ಲವೂ ನಾನೇ ಮಾಡಿದ್ದು’

‘ಕ್ಷೇತ್ರದಲ್ಲಿ ಯಾವುದೇ ಕೆಲಸ ಆರಂಭಿಸಿದರೂ ಈ ಕ್ಷೇತ್ರದ ಹಿಂದಿನ ಶಾಸಕರೊಬ್ಬರು ಎಲ್ಲವೂ ನಾನೇ ಮಾಡಿದ್ದು, ನಾನೇ ಆರಂಭಿಸಿದ್ದು ಎಂದು ಹೇಳಿಕೊಳ್ಳುತ್ತಾರೆ’ ಎಂದು ಕಥೆ ಹೇಳುವ ಮೂಲಕ ಎಂ.ಪಿ.ರೇಣುಕಾಚಾರ್ಯ ಅವರನ್ನು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.