ADVERTISEMENT

40ಲಕ್ಷ ಮೀನು ಮರಿಗಳ ಸಾಕಣೆ

ಮಲ್ಲಿಕಾರ್ಜುನ ಕನ್ನಿಹಳ್ಳಿ
Published 17 ನವೆಂಬರ್ 2017, 9:50 IST
Last Updated 17 ನವೆಂಬರ್ 2017, 9:50 IST

ಹರಪನಹಳ್ಳಿ: ಇತ್ತೀಚೆಗೆ ಸುರಿದ ಮಳೆಗೆ ತಾಲ್ಲೂಕಿನ ಕೆರೆಗಳು ಬಹುತೇಕ ಭರ್ತಿಯಾಗಿವೆ. 40 ಲಕ್ಷ ಮೀನು ಮರಿಗಳನ್ನು ಕೆರೆಗಳಿಗೆ ಬಿಡಲಾಗಿದೆ. ಮೀನುಗಾರಿಕೆ ಇಲಾಖೆ ಅಡಿಯಲ್ಲಿ 28 ಕೆರೆಗಳು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 36 ಕೆರೆಗಳು ಹೀಗೆ ಒಟ್ಟು ತಾಲ್ಲೂಕಿನಲ್ಲಿ 64 ಕೆರೆಗಳಿವೆ ಇವೆ. ಈ ಕೆರೆಗಳಿಗೆ ಕಾಟ್ಲ, ಮಿರಗಲ್‌, ರೋವು, ಗೌರಿ ಮೀನುಗಳನ್ನು ಬಿಡಲಾಗಿದೆ.

‘ಇಲಾಖೆ ತೊಟ್ಟಿಯಲ್ಲಿ ಬೆಳೆದ 60 ಸಾವಿರ ಗೌರಿ ಮೀನು ಮರಿಗಳನ್ನು ಮಾರಾಟ ಮಾಡಿದ್ದೇವೆ. ಪ್ರಸ್ತುತ ಒಂದು ಲಕ್ಷ ಮೀನು ಮರಿಗಳ ಸಂಗ್ರಹ ಇದೆ. ಒಂದು ಸಾವಿರ ಮರಿಗಳಿಗೆ ₹ 204ರಂತೆ ಮಾರಾಟ ಮಾಡಲಾಗುತ್ತಿದೆ. ಇನ್ನುಳಿದ ತಳಿಗಳನ್ನು ಹೊಸಪೇಟೆ, ಶಿವಮೊಗ್ಗ ಬಿಆರ್‌ ಪ್ರಾಜೆಕ್ಟ್‌ ಮತ್ತು ಹರಪನಹಳ್ಳಿ ದೇವೇಂದ್ರ ಮೀನು ಮರಿ ಮಾರಾಟ ಕೇಂದ್ರದಿಂದ ಖರೀದಿಸಲಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಕ್ಷೇತ್ರ ಸಹಾಯಕಿ ಬಿ.ಮಂಜುಳಾ ತಿಳಿಸಿದ್ದಾರೆ.

ಅತಿದೊಡ್ಡ ಕೆರೆ: ನೀಲಗುಂದ ಕೆರೆ ಅತ್ಯಂತ ದೊಡ್ಡದಾಗಿದ್ದು 145 ಹೆಕ್ಟೇರ್‌, ಯಡಿಹಳ್ಳಿ ಕೆರೆ 144, ಅರಸನಾಳ 140 ಹೆಕ್ಟೇರ್‌ ಜಲ ವಿಸ್ತೀರ್ಣ ಹೊಂದಿದೆ. ಅರಸೀಕೆರೆ, ಅಲಗಿಲವಾಡ ಕೆರೆ, ಅಲಮರಸಿ ಕೆರೆ, ಬಾಗಳಿ, ಹಿರೇಮೇಗಳಗೆರೆ, ರಾಗಿಮಸಲವಾಡ, ಮುತ್ತಿಗೆ ಕೆರೆಗಳು 100 ಹೆಕ್ಟೇರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿವೆ.

ADVERTISEMENT

ಇಲಾಖೆ ವ್ಯಾಪ್ತಿಯಲ್ಲಿ ಬರುವ 28 ಕೆರೆಗಳಿಂದ ಸರ್ಕಾರಕ್ಕೆ ವಾರ್ಷಿಕ ಒಟ್ಟು ₹ 19.67 ಲಕ್ಷ ಆದಾಯ ಬರುತ್ತಿದೆ. ಬರಗಾಲದಿಂದ ಮೀನುಗಾರರು ನಷ್ಟ ಅನುಭವಿಸಿದ್ದು, ಹರಾಜಿನ ಮೊತ್ತವನ್ನು ಸರ್ಕಾರ ಪ್ರಸ್ತುತ ಸಾಲಿಗೆ ಮನ್ನಾ ಮಾಡಿದೆ. 36ಕೆರೆಗಳನ್ನು ಗ್ರಾಮ ಪಂಚಾಯ್ತಿಗಳು ಹರಾಜು ಹಾಕುತ್ತಾರೆ. ಈ ಕೆರೆಗಳ ಅಚ್ಚುಕಟ್ಟು ಪ್ರದೇಶ ಕಡಿಮೆ ಇದ್ದರು ಜಲ ವಿಸ್ತೀರ್ಣ ಹೆಚ್ಚು ಇರುವುದರಿಂದ ಮುಂದಿನ ವರ್ಷದಲ್ಲಿ ಸಮೃದ್ಧ ಮೀನು ಕೃಷಿ ಮಾಡಬಹುದು ಎಂದು ಮಂಜುಳಾ ಹೇಳಿದ್ದಾರೆ.

ತಾಲ್ಲೂಕಿನಲ್ಲಿ 5 ಮೀನು ಸಾಕಣೆದಾರರ ಸಂಘಗಳು ಇದ್ದು ಒಂದು ಸಂಘಕ್ಕೆ 300 ಹೆಕ್ಟೇರ್‌ ಇಲ್ಲವೇ ಮೂರು ಕೆರೆಗಳನ್ನು ಗುತ್ತಿಗೆ ಪಡೆಯಲು ಅವಕಾಶವಿದೆ. ಈ ಬಾರಿ ನೂತನ ನಾಲ್ಕು ಸಂಘಗಳ ರಚನೆಗೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆರೆಗಳ ಹರಾಜಿನಿಂದ ಇಲಾಖೆ ಬೊಕ್ಕಸಕ್ಕೆ ಆದಾಯ ಬರಲಿದೆ. ಅಸ್ತಿತ್ವದಲ್ಲಿರುವ ಸಂಘಗಳಿಗೆ ನಿಗದಿತ ಅಚ್ಚುಕಟ್ಟು ಪ್ರದೇಶ ನೀಡಿ ಉಳಿದ ಕೆರೆಗಳನ್ನು ಸರ್ಕಾರ ಹಿಂಪಡೆಯಬೇಕು. ನೂತನ ಸಂಘಗಳ ರಚನೆಗೆ ಅವಕಾಶ ಮಾಡಿಕೊಡಬೇಕು. ಆಗ ರಾಜ್ಯದಾದ್ಯಂತ ಸಾವಿರಾರು ವೃತ್ತಿ ಮೀನುಗಾರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ನೂತನ ಸಂಘಗಳ ಹೋರಾಟಗಾರ ಎನ್‌.ರವಿ ತಿಳಿಸಿದ್ದಾರೆ.

ಸಂಘಗಳಿಗೆ ಕೆರೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ವಿಷ ಬೆರೆಸುವುದರಿಂದ ಹಾಗೂ ಹವಾಮಾನ ವೈಪರೀತ್ಯದಿಂದ ಮೀನು ಸಾಯುತ್ತವೆ. ನಿಗದಿತ ಪ್ರಮಾಣದಲ್ಲಿ ಮೀನು ಕೃಷಿ ಇಳುವರಿ ಬರುವುದಿಲ್ಲ. ಇದರಿಂದ ಸಂಘಗಳು ಪ್ರತಿ ವರ್ಷ ನಷ್ಟ ಅನುಭವಿಸುತ್ತಿವೆ ಎಂದು ಸಂಘದ ಅಧ್ಯಕ್ಷ ಗಂಗಪ್ಪ ತಿಳಿಸಿದ್ದಾರೆ. ಸರ್ಕಾರ ಮತ್ತು ಸಂಘಗಳ ನಡುವಿನ ತಿಕ್ಕಾಟ ಏನೇ ಇದ್ದರೂ ಮುಂದಿನ ದಿನಗಳಲ್ಲಿ ಸಮೃದ್ಧವಾಗಿ ಮೀನು ದೊರೆಯಲಿದೆ ಎಂಬುದು ಮೀನು ಪ್ರಿಯರ ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.