ADVERTISEMENT

ಅಭಿವೃದ್ಧಿ ನೆಪದಲ್ಲಿ ಪ್ರಕೃತಿ ನಿರ್ಲಕ್ಷ್ಯ ಸಲ್ಲದು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 8:41 IST
Last Updated 26 ನವೆಂಬರ್ 2017, 8:41 IST
ಧಾರವಾಡದ ಕರ್ನಾಟಕ ಕಾಲೇಜಿನ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಜಾರ್ಜ್‌ ಲಾಯ್ಡ್‌ 1917ರಲ್ಲಿ ಇರಿಸಿದ್ದ ಅಡಿಗಲ್ಲಿಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಡಾ. ಪ್ರಮೋದ ಗಾಯಿ, ಎಚ್‌.ಕೆ.ಪಾಟೀಲ, ಎ.ಎಸ್.ಕಿರಣ್‌ ಕುಮಾರ್, ನ್ಯಾಯಮೂರ್ತಿ ಮೋಹನ ಶಾಂತನಗೌಡರ, ಬಸವರಾಜ ರಾಯರಡ್ಡಿ, ಡಾ. ಚೆನ್ನವೀರ ಕಣವಿ, ಪ್ರೊ.ಐ.ಜಿ.ಸನದಿ ಇದ್ದಾರೆ
ಧಾರವಾಡದ ಕರ್ನಾಟಕ ಕಾಲೇಜಿನ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಜಾರ್ಜ್‌ ಲಾಯ್ಡ್‌ 1917ರಲ್ಲಿ ಇರಿಸಿದ್ದ ಅಡಿಗಲ್ಲಿಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಡಾ. ಪ್ರಮೋದ ಗಾಯಿ, ಎಚ್‌.ಕೆ.ಪಾಟೀಲ, ಎ.ಎಸ್.ಕಿರಣ್‌ ಕುಮಾರ್, ನ್ಯಾಯಮೂರ್ತಿ ಮೋಹನ ಶಾಂತನಗೌಡರ, ಬಸವರಾಜ ರಾಯರಡ್ಡಿ, ಡಾ. ಚೆನ್ನವೀರ ಕಣವಿ, ಪ್ರೊ.ಐ.ಜಿ.ಸನದಿ ಇದ್ದಾರೆ   

ಧಾರವಾಡ: ‘ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ, ಅಭಿವೃದ್ಧಿಯನ್ನೇ ನೆಪವಾಗಿಟ್ಟುಕೊಂಡು ಪ್ರಕೃತಿ ಹಾಗೂ ಪರಂಪರೆಯನ್ನು ನಿರ್ಲಕ್ಷಿಸಬಾರದು’ ಎಂದು ಇಸ್ರೊ ಅಧ್ಯಕ್ಷ ಎ.ಎಸ್‌.ಕಿರಣ್ ಕುಮಾರ್ ಹೇಳಿದರು. ಕರ್ನಾಟಕ ಕಾಲೇಜಿನ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.

‘ಜನ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಅವರ ಅತಿ ಅವಶ್ಯಕ ಬೇಡಿಕೆಗಳೂ ಹೆಚ್ಚಾಗಲಿವೆ. ಈ ಅಗತ್ಯಗಳನ್ನು ಪೂರೈಸಲು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮಾತ್ರ ಸಾಧ್ಯ. ಆದರೆ, ಇವುಗಳನ್ನು ಬಳಸುವ ಸಂದರ್ಭದಲ್ಲಿ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಅವರು ಹೇಳಿದರು.

‘ಇನ್ನು ಕೆಲವೇ ವರ್ಷಗಳಲ್ಲಿ ದೇಶದಲ್ಲಿ ಯುವ ಸಮುದಾಯದ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ಇಂಥ ಸಂದರ್ಭದಲ್ಲಿ ಯುವ ಸಮುದಾಯ ದೇಶ ಕಟ್ಟುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ತೀರಾ ಅಗತ್ಯವಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸರಿಯಾಗಿ ಬಳಸಿ ಶ್ರೇಷ್ಠ ಜ್ಞಾನವನ್ನು ಸಂಪಾದಿಸಬೇಕು’ ಎಂದು ಹೇಳಿದರು.

ADVERTISEMENT

‘ಪಾಶ್ಚಾತ್ಯ ರಾಷ್ಟ್ರಗಳಿಗೆ ಕೆಲಸಕ್ಕೆ ಹೋಗಲು ಭಾರತೀಯರು ತೀರಾ ಉತ್ಸುಕತೆ ತೋರುತ್ತಾರೆ. ಅಮೆರಿಕ ಹಾಗೂ ಯುರೋಪ್‌ನಂಥ ಮುಂದುವರಿದ ರಾಷ್ಟ್ರಗಳಲ್ಲಿ ಇತರ ರಾಷ್ಟ್ರದವರು ಬಂದು ಕೆಲಸ ಮಾಡುವಂಥ ಪೂರಕ ವಾತಾವರಣವನ್ನು ನಿರ್ಮಿಸಿದ್ದಾರೆ. ನಮ್ಮದು ಅತಿ ಪುರಾತನ ಇತಿಹಾಸವಿರುವ ರಾಷ್ಟ್ರ. ಋಷಿಮುನಿಗಳು ತಮ್ಮ ಸಾತ್ವಿಕ ಬದುಕಿನ ಮೂಲಕ ಆದರ್ಶ ಬದುಕನ್ನು ಕಲಿಸಿದ್ದಾರೆ. ಹೀಗಿರುವಾಗ ಅಂಥ ವಾತಾವರಣವನ್ನು ನಾವೂ ಇಲ್ಲಿ ಸೃಷ್ಟಿಸುವ ಅಗತ್ಯವಿದೆ’ ಎಂದು ಕಿರಣ್‌ ಕುಮಾರ್ ಹೇಳಿದರು.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಮೋಹನಶಾಂತನಗೌಡರ ಮಾತನಾಡಿ, ‘ಅಧ್ಯಯನದಲ್ಲಿ ಕಠಿಣ ಪರಿಶ್ರಮ, ಕಲಿಕೆಯಲ್ಲಿ ಪ್ರಾಮಾಣಿಕತೆ ಹಾಗೂ ವಿನಯತೆ ಇದ್ದಲ್ಲಿ ಯಶಸ್ಸು ತಾನಾಗಿಯೇ ಸಿಗಲಿದೆ’ ಎಂದರು.

‘ಮಳೆ ಹನಿ ಎಲ್ಲಿ ಬೀಳುತ್ತದೆ ಎಂಬುದರ ಮೇಲೆ ಅದರ ಭವಿಷ್ಯ ನಿರ್ಧಾರವಾಗಲಿದೆ. ಕಾದ ಕಬ್ಬಿಣದ ಮೇಲೋ, ಗಿಡಗಳ ಮೇಲೋ ಅಥವಾ ಸಮುದ್ರದ ಆಳದಲ್ಲಿ ಮುತ್ತು ಉತ್ಪಾದಿಸುವ ಕಪ್ಪೆಚಿಪ್ಪಿನ ಮೇಲೋ ಎಂಬುದನ್ನು ಅದು ಅವಲಂಬಿಸಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ಅನುಗುಣವಾಗಿ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದರು.

‘ನನ್ನ ಕಾಲೇಜಿನ ಶತಮಾನೋತ್ಸವ ಸಂದರ್ಭದಲ್ಲಿ ನಾನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಂಬುದನ್ನು ಮರೆತು ಕ್ಷಣಕಾಲ ವಿದ್ಯಾರ್ಥಿಯಾಗಿದ್ದೇನೆ’ ಎಂದಾಗ ಸಭಿಕರು ಚಪ್ಪಾಳೆಯ ಮಳೆಗರೆದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಡಾ.ಪ್ರಮೋದ ಗಾಯಿ ವಹಿಸಿದ್ದರು. ಡಾ.ಪಾಟೀಲ ಪುಟ್ಟಪ್ಪ, ಡಾ.ಚೆನ್ನವೀರ ಕಣವಿ, ಡಾ. ಗಿರಡ್ಡಿ ಗೋವಿಂದರಾಜ, ಡಾ. ಎಂ.ಐ.ಸವದತ್ತಿ, ಅರವಿಂದ ಬೆಲ್ಲದ, ವಿ.ಎಸ್.ಸಂಕನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.