ADVERTISEMENT

ಇಲಾಖೆಗಳು ಸ್ವಯಂ ಮಾಹಿತಿ ನೀಡುವುದು ಒಳಿತು

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಆಯೋಗದ ಆಯುಕ್ತರ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 11:27 IST
Last Updated 16 ಫೆಬ್ರುವರಿ 2017, 11:27 IST
ಹುಬ್ಬಳ್ಳಿ: ಸರ್ಕಾರಿ ಇಲಾಖೆಗಳು ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ಪ್ರಕಟಿಸಿ, ಕಾಲ ಕಾಲಕ್ಕೆ ಅಪ್‌ಡೇಟ್ ಮಾಡುತ್ತಿದ್ದರೆ ಮಾಹಿತಿ ಹಕ್ಕು ಕಾರ್ಯಕರ್ತರ ಕೆಲಸ ಸುಲಭವಾಗಲಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಶಂಕರ ಪಾಟೀಲ ಅಭಿಪ್ರಾಯಪಟ್ಟರು.
 
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
 
‘ಮಾಹಿತಿ ಹಕ್ಕು ಆಯೋಗದಲ್ಲಿ ಸ್ವಯಂ ಮಾಹಿತಿ ನೀಡಲು ಅವಕಾಶವಿದೆ. ಇದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ವೆಬ್‌ಸೈಟ್‌ನಲ್ಲೇ ಮಾಹಿತಿ ಒದಗಿಸಿದ ಪ್ರಸಂಗ ಇತ್ತೀಚೆಗೆ ನಡೆದಿತ್ತು’ ಎಂದರು.
 
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ : ‘ಆನ್‌ಲೈನ್ ಮೂಲಕ ಆಯೋಗಕ್ಕೆ ಅಥವಾ ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರ ರೂಪುರೇಷೆ ಸಿದ್ಧವಾಗುತ್ತಿದ್ದು ಕೆಲವೇ ದಿನಗಳಲ್ಲಿ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಇದರ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ’ ಎಂದು ಶಂಕರ ಪಾಟೀಲ ಮಾಹಿತಿ ನೀಡಿದರು.
 
‘ಆಯೋಗದಲ್ಲಿ ಐದು ಮಂದಿ ಆಯುಕ್ತರು ಇದ್ದಾರೆ. ಮುಖ್ಯ ಮಾಹಿತಿ ಅಧಿಕಾರಿ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ’ ಎಂದು ಅವರು ವಿವರಿಸಿದರು.
 
‘ಆಯೋಗದಲ್ಲಿ ಸದ್ಯ 30,000 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಜನರು ಈ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಜಾಗೃತರಾಗಿರುವುದೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಲು ಕಾರಣ. ಪ್ರತಿದಿನ 30ರಿಂದ 35ರಷ್ಟು ಅರ್ಜಿಗಳ ವಿಚಾರಣೆ ನಾನು ನಡೆಸುತ್ತಿದ್ದು ದಿನವೂ ಸುಮಾರು 25ರಷ್ಟು ಅರ್ಜಿಗಳಿಗೆ ಮಾಹಿತಿ ಒದಗಿಸಲಾಗುತ್ತಿದೆ’ ಎಂದು ಅವರು ಹೇಳಿದರು.
 
‘ಅರ್ಜಿ ಸಲ್ಲಿಕೆಯಾದ 30 ದಿನಗಳೊಳಗೆ ಉತ್ತರ ಒದಗಿಸಬೇಕು ಎಂಬುದು ಕಾಯ್ದೆಯಲ್ಲಿ ಕಡ್ಡಾಯ. ಇದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಗ್ರಾಮೀಣಾಭಿವೃದ್ಧರಿ ಮತ್ತು ಪಂಚಾಯ್ತಿ ರಾಜ್ ಇಲಾಖೆ, ಬಿಬಿಎಂಪಿ, ಬುಡಾ, ಕಂದಾಯ ಇಲಾಖೆ, ನಗರಾಡಳಿತ ಸಂಸ್ಥೆಗಳು ಮತ್ತು ಸರ್ವೆ ಇಲಾಖೆಗೆ ಹೆಚ್ಚು ಅರ್ಜಿಗಳು ಬರುತ್ತಿವೆ’ ಎಂದು ಅವರು ಮಾಹಿತಿ ನೀಡಿದರು.
 
ಅಧಿಕಾರಿಗಳೇ ಇಲ್ಲದೆ ಸಭೆ: ಧಾರವಾಡದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯುತ್ತಿದ್ದ ಕಾರಣ ಮಾಹಿತಿ ಆಯುಕ್ತರ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಪ್ರಮುಖರು ಇರಲಿಲ್ಲ. ಆಯುಕ್ತರು ಬರುವ ವಿಷಯ ಗೊತ್ತಿಲ್ಲದ ಕಾರಣ ಮಾಹಿತಿ ಹಕ್ಕು ಕಾರ್ಯಕರ್ತರು ಮತ್ತು ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ.
 
ಸಾರ್ವಜನಿಕರ ಪ್ರಶ್ನೆಗಳಿಗೆ ಮಾಹಿತಿ ನೀಡಲು ತಂತ್ರಜ್ಞಾನದ ನೆರವು
ಧಾರವಾಡ:  ‘ಸರ್ಕಾರದ ಪ್ರತಿಯೊಂದು ಇಲಾಖೆಗಳು ತಮಗೆ ಸಂಬಂಧಿಸಿದ ಮಾಹಿತಿಗಳನ್ನು ಇಲಾಖೆಯ ಅಂತರಜಾಲದಲ್ಲಿ ಪ್ರಕಟಿಸುವ ಮೂಲಕ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ’ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಶಂಕರ ಪಾಟೀಲ ಹೇಳಿದರು. 
 
ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮಾಹಿತಿ ಹಕ್ಕು ಕಾಯ್ದೆ ಕಲಂ 4 (1)(ಎ) ಮತ್ತು (ಬಿ) ಅಡಿಯಲ್ಲಿ ಬಹುತೇಕ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಸ್ವಯಂ ಪ್ರೇರಿತ ಮಾಹಿತಿ ಪ್ರಕಟಣೆ ಮೂಲಕ ಆರಂಭಿಕ ಹಂತದಲ್ಲಿಯೇ ಇಂಥ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಿದೆ. ಮಾಹಿತಿ ಕೇಳಿ ಅರ್ಜಿ ಸಲ್ಲಿಕೆಯಾದರೆ, ಅಂತರಜಾಲ ವೀಕ್ಷಿಸಿ ಮಾಹಿತಿ ಪಡೆಯುವಂತೆ ಸೂಚಿಸಬಹುದು’ ಎಂದರು. 
 
‘ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ದೊರೆಯಬೇಕು ಎನ್ನುವ ಉದ್ದೇಶದಿಂದ ಕಾಯ್ದೆ ಜಾರಿಗೆ ತರಲಾಗಿದೆ. ಅದರ ಪರಿಣಾಮಕಾರಿ ಅನುಷ್ಠಾನ ಅಧಿಕಾರಿಗಳ ಬಳಿ ಇದೆ. ಪ್ರತಿಯೊಂದು ಇಲಾಖೆಯಲ್ಲೂ ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಮಾಹಿತಿ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗುತ್ತದೆ. ಇಂಥವರನ್ನೇ ನೇಮಕ ಮಾಡಬೇಕು ಎಂದು ಹೇಳುವ ಅಧಿಕಾರ ಆಯೋಗ ವ್ಯಾಪ್ತಿಗಿಲ್ಲ. ಆದರೆ ಕಾಯ್ದೆ ಅನುಷ್ಠಾನದ ಜವಾಬ್ದಾರಿ ಆಯೋಗದ ಮೇಲಿದೆ’ ಎಂದರು. 
 
‘ಈ ಕಾಯ್ದೆಯಡಿ ಕೆಲಸ ಮಾಡುವ ಅಧಿಕಾರಿಗಳು ಕಾಯ್ದೆ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸಬೇಕು. ಯಾವುದೇ ಒತ್ತಡಕ್ಕೆ ಒಳಗಾಗಿ ಮಾಹಿತಿ ನೀಡುವುದಾಗಲಿ ಅಥವಾ ಮಾಹಿತಿ ನಿರಾಕರಿಸುವುದಾಗಲಿ ಮಾಡಬಾರದು. ನಿಯಮಗಳನ್ನು ಉಲ್ಲಂಘಿಸಿದರೆ ಯಾರೂ ರಕ್ಷಣೆಗೆ ಬರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಯಾವುದಕ್ಕೂ ಅಂಜುವ ಕಾರಣವಿಲ್ಲ. ಈ ಕಾಯ್ದೆಯಡಿ ಅರ್ಜಿಗಳ ಸಲ್ಲಿಕೆಯಾದರೆ ಅವುಗಳನ್ನು 120 ದಿನಗಳಲ್ಲಿ ವಿಲೇವಾರಿ ಮಾಡಬೇಕು ಎನ್ನುವುದು ಕಾನೂನು. ಹಲವು ಬಾರಿ ಈ ಕಾನೂನಿನ ಉಲ್ಲಂಘನೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಅರ್ಜಿದಾರರ ಅನಿವಾರ್ಯವಾಗಿ ಮೇಲ್ಮನವಿ ಪ್ರಾಧಿಕಾರ ಮೆಟ್ಟಿಲು ತುಳಿಯುತ್ತಾರೆ’ ಎಂದು ಹೇಳಿದರು. 
 
‘ಕಾಯ್ದೆಯ ಉಲ್ಲಂಘನೆ ಗಂಭೀರ ಅಪರಾಧ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗ ಸೂಚಿಸಬೇಕಾಗುತ್ತದೆ. ಕಾಯ್ದೆಯಡಿ ಎಲ್ಲ ಮಾಹಿತಿ ನೀಡಲೇಬೇಕು ಎನ್ನುವ ನಿಯಮವಿಲ್ಲ. ನಿಯಮಾನುಸಾರ ಯಾವ ಮಾಹಿತ ನೀಡಬೇಕೋ ಅದನ್ನು ನಿರಾಕರಿಸುವಂತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾಯ್ದೆಯನ್ನು ಸರಿಯಾಗಿ ಅರಿತುಕೊಂಡು ಕಾರ್ಯ ನಿರ್ವಹಿಸಬೇಕು’ ಎಂದರು.   ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌. ಸ್ನೇಹಲ್, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪ ವಿಭಾಗಾಧಿಕಾರಿ ಮಹೇಶ ಕರ್ಜಗಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. 
 
ಅಧಿಕಾರಿ ವಿರುದ್ಧ ಕ್ರಮದ ಭರವಸೆ
ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ನೀಡಿದ ದೂರನ್ನು ಪರಿಶೀಲಿಸಿದ ಶಂಕರ ಪಾಟೀಲ ತನಿಖೆ ನಡೆಸಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

‘ಆಶ್ರಯ ನಿವೇಶನಗಳಿಗೆ ಸಂಬಂಧಿಸಿ 2014ರಲ್ಲಿ ಮಾಹಿತಿ ಕೋರಲಾಗಿತ್ತು. ಇದಕ್ಕೆ ಆಯೋಗ ಸ್ಪಂದಿಸಿದರೂ ಪಾಲಿಕೆ ಅಧಿಕಾರಿಯಿಂದ ಇನ್ನೂ ಮಾಹಿತಿ ಸಿಗಲಿಲ್ಲ’ ಎಂದು ಪ್ರೇಮನಾಥ ದೂರಿದರು.  ಇದಕ್ಕೆ ಉತ್ತರಿಸಿದ ಶಂಕರ ‘ಬೆಳಗಾವಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿದ್ದು ಎರಡು ವರ್ಷ ಮಾಹಿತಿ ನೀಡದೇ ಇದ್ದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.