ADVERTISEMENT

ಕಲಬುರ್ಗಿ ಹತ್ಯೆ ಸಹಿಷ್ಣುತೆಗಾದ ಆಘಾತ: ಡಾ. ಮುಂಗೇಕರ್

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 6:28 IST
Last Updated 14 ನವೆಂಬರ್ 2017, 6:28 IST

ಧಾರವಾಡ: ಮುಂಬೈ ಹಾಗೂ ಪುಣೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಾಲಚಂದ್ರ ಎಲ್‌.ಮುಂಗೇಕರ್‌ ಸೋಮವಾರ ಡಾ. ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ಭೇಟಿ ನೀಡಿ, ಉಮಾದೇವಿ ಕಲಬುರ್ಗಿ ಅವರಿಗೆ ಸಾಂತ್ವನ ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಭೇಟಿ ನೀಡಿದ್ದ ಅವರು ಸೋಮವಾರ ಸಂಜೆ ಇಲ್ಲಿನ ಕಲ್ಯಾಣ ನಗರದಲ್ಲಿರುವ ಡಾ.ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿದರು. ಇವರೊಂದಿಗೆ ಭಾಷಾ ತಜ್ಞ ಡಾ. ಗಣೇಶ ಎನ್‌.ದೇವಿ ದಂಪತಿ, ಡಾ. ಶಶಿಧರ ತೋಡ್ಕರ್‌ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಬಾಲಚಂದ್ರ, ‘ಕಲಬುರ್ಗಿ ಅವರ ಹತ್ಯೆ ಭಾರತದ ಪ್ರಜಾಪ್ರಭುತ್ವ, ಸಾಂಸ್ಕೃತಿಕ ಕ್ಷೇತ್ರ ಹಾಗೂ ಸಹಿಷ್ಣುತೆಗೆ ಆದ ದೊಡ್ಡ ಆಘಾತ. ಸತ್ಯಾನ್ವೇಷಣೆಯಲ್ಲೇ ಸದಾ ತೊಡಗಿರುವ ವ್ಯಕ್ತಿಯನ್ನೇ ಹತ್ಯೆ ಮಾಡುವ ಮೂಲಕ ಸತ್ಯದ ಬಾಯಿ ಮುಚ್ಚಿಸುವಂಥ ಹೀನ ಕೃತ್ಯ ಎಸಗಿದವರ ಪ್ರಯತ್ನ ಸಫಲವಾಗದು’ ಎಂದರು.

ADVERTISEMENT

‘ಈ ಹತ್ಯೆ ಕುರಿತಂತೆ ಕರ್ನಾಟಕ ಸರ್ಕಾರ ತ್ವರಿತ ಗತಿಯಲ್ಲಿ ತನಿಖೆ ಕೈಗೊಂಡು ತಾರ್ಕಿಕ ಅಂತ್ಯ ಕಾಣಿಸಬೇಕು. ಅಪರಾಧಿಗಳನ್ನು ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸುವ ಮೂಲಕ ಇಂಥ ಮಾನವತಾ ದ್ವೇಷಿ ಹಾಗೂ ಪ್ರಜಾಪ್ರಭುತ್ವ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು. ಆ ಮೂಲಕ ಇಂಥ ಕೃತ್ಯಗಳಿಗೆ ಕೊನೆ ಹಾಡಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಉಮಾದೇವಿ ಕಲಬುರ್ಗಿ ಮಾತನಾಡಿ, ‘ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ. ಶೀಘ್ರದಲ್ಲಿ ಕೊಲೆಗಾರರನ್ನು ಪತ್ತೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಆದರೆ, ಕೊಲೆಯ ರಹಸ್ಯ ಬಯಲಾಗಬೇಕು, ಸತ್ಯ ನಮ್ಮ ಕುಟುಂಬಕ್ಕೆ ಹಾಗೂ ಸರ್ ಅಭಿಮಾನಿಗಳಿಗೆ ತಿಳಿಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.