ADVERTISEMENT

ಕೇಂದ್ರದ ಕೊಡುಗೆ ನೆನೆಯಿರಿ: ಜೋಶಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 5:21 IST
Last Updated 2 ಸೆಪ್ಟೆಂಬರ್ 2017, 5:21 IST

ದಾರವಾಡ: ‘ರಾಜ್ಯದಲ್ಲಿ ಕೈಗೊಳ್ಳುವ ಬಹುತೇಕ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವೂ ಅನುದಾನ ನೀಡುತ್ತದೆ. ಅದನ್ನು ನೆನೆಯುವ ಔದಾರ್ಯ ರಾಜ್ಯ ಸರ್ಕಾರಕ್ಕೆ ಇರಬೇಕು’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಸಂಸದರ ನಿಧಿಯಡಿ ಸಬ್‌ಜೈಲ್‌ನಿಂದ ಕಲ್ಮೇಶ್ವ ಗುಡಿವರೆಗೆ ಹಾಗೂ ಶಾಂತಿನಿಕೇತನ ನಗರದಲ್ಲಿ ತಲಾ ₹ 20ಲಕ್ಷ ವೆಚ್ಚದ ಎರಡು ಪ್ರತ್ಯೇಕ ಕಾಂಕ್ರೀಟ್‌ ರಸ್ತೆ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಅಮೃತ್‌ ಯೋಜನೆಯಲ್ಲಿ ರಾಜ್ಯದ ಪಾಲಿಗಿಂತ ಕೇಂದ್ರದ ಪಾಲೇ ಹೆಚ್ಚು. ಹೀಗಿದ್ದೂ ಅದನ್ನು ತಮ್ಮ ಯೋಜನೆ ಎಂದು ಬಿಂಬಿಸಲು ಹೊರಟಿರುವುದು ಸರಿಯಲ್ಲ. ಜಿಲ್ಲೆಗೆ ಅಮೃತ್‌ ಯೋಜನೆ ಅಡಿ ₹ 183 ಕೋಟಿ ಅನುದಾನ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರದ ಪಾಲು ₹ 20 ಕೋಟಿಯೂ ಇಲ್ಲ. ಹೀಗಿರುವಾಗ ಅದನ್ನು ತಮ್ಮದೇ ಯೋಜನೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿರುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ADVERTISEMENT

‘ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಪ್ರತಿ ಕೆ.ಜಿ. ಅಕ್ಕಿಗೆ ₹ 29 ನೀಡುತ್ತಿದೆ. ಎಲ್‌ಇಡಿ ಬಲ್ಬ್‌ ವಿತರಣೆ  ಸೇರಿದಂತೆ  ಪಟ್ಟಿ ಮಾಡುತ್ತಾ ಹೋದಲ್ಲಿ ಅದು ಬೆಳೆಯುತ್ತಲೇ ಹೋಗುತ್ತದೆ. ರಾಜ್ಯ ಸರ್ಕಾರದವರು ತಮ್ಮದೇ ಎಂಬಂತೆ ಪ್ರಚಾರ ಪಡೆಯುತ್ತಿದ್ದಾರೆ. ಹೀಗಿರುವಾಗ ಹೆಚ್ಚು ಹಣ ನೀಡಿ ಪ್ರಚಾರ ಪಡೆಯುವುದರಲ್ಲಿ ಕೇಂದ್ರದ ತಪ್ಪೇನಿದೆ?’ ಎಂದು ಜೋಶಿ ಕೇಳಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಮೋದಿ ಸರ್ಕಾರ ಬಂದ ನಂತರ 14ನೇ ಹಣಕಾಸು ಬಿಡುಗಡೆಯಾದಾಗ ಕೇಂದ್ರದ ಪಾಲು ಮೂರು ಪಟ್ಟು ಹೆಚ್ಚಾಗಿದೆ. ಇದನ್ನು ರಾಜ್ಯ ಸರ್ಕಾರ ಮನಗಾಣಬೇಕು’ ಎಂದರು.

ನನಗೇ ಗೊತ್ತಿಲ್ಲ: ‘ನನ್ನ ಹೆಸರು ಇದ್ದಿದ್ದರೆ ನಾನು ಇಷ್ಟು ಹೊತ್ತಿಗೆ ದೆಹಲಿಯಲ್ಲಿ ಇರುತ್ತಿದ್ದೆ. ಕೆಲವೊಂದು ಮಾಧ್ಯಮಗಳು ನನ್ನ ಹೆಸರು  ಪ್ರಕಟಿಸಿವೆ. ಆದರೆ, ಈವರೆಗೂ ಅಂಥ ಯಾವುದೇ ವಿಷಯ ಅಧಿಕೃತವಾಗಿ ನನಗೆ ಗೊತ್ತಿಲ್ಲ’ ಎಂದು ಸಂಸದ ಪ್ರಹ್ಲಾದ ಜೋಶಿ ಅವರು ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಹೆಸರು ಇರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.