ADVERTISEMENT

‘ಜನಪರ್ಯಾಯ ಕಟ್ಟೋಣ’

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:37 IST
Last Updated 25 ಏಪ್ರಿಲ್ 2017, 5:37 IST
ಜನಾಂದೋಲನಗಳ ಮಹಾಮೈತ್ರಿ ಸೋಮವಾರ ಆಯೋಜಿಸಿದ್ದ ಜಾಥಾ ಧಾರವಾಡದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು
ಜನಾಂದೋಲನಗಳ ಮಹಾಮೈತ್ರಿ ಸೋಮವಾರ ಆಯೋಜಿಸಿದ್ದ ಜಾಥಾ ಧಾರವಾಡದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು   

ಧಾರವಾಡ: ‘ರಾಜಕೀಯ ವ್ಯವಸ್ಥೆ ಹದಗೆಟ್ಟಿರುವ ಸಂದರ್ಭದಲ್ಲಿ ನೈಜ ಪ್ರಜಾಪ್ರಭುತ್ವ ಸ್ಥಾಪಿಸಬಲ್ಲ ಪರ್ಯಾಯ ಜನಪರ ಸರ್ಕಾರದ ಅನಿವಾರ್ಯತೆ ಹೆಚ್ಚಾಗಿದೆ’ ಎಂದು ಜನಸಂಗ್ರಾಮ ಪರಿಷತ್‌ನ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಹೇಳಿದರು.ಜೆಸಿಬಿ (ಜನತಾದಳ, ಕಾಂಗ್ರೆಸ್ ಹಾಗೂ ಬಿಜೆಪಿ) ದುಷ್ಟ ರಾಜಕಾರಣದ ವಿರುದ್ಧ ಹೋರಾಟ ನಡೆಸಲಿದೆ ಎಂದರು.

‘ಜನಪರ್ಯಾಯ ಕಟ್ಟೋಣ ಜಾಥಾ’ದ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‘ದೇಶದಲ್ಲಿ ಇಂದು ಕೃಷಿ ಸಂಕಟ ಹೆಚ್ಚಾಗಿದೆ. ನಿರುದ್ಯೋಗ ಸಮಸ್ಯೆ ಉಲ್ಬಣಿಸುತ್ತಿದೆ ಹಾಗೂ ಭ್ರಷ್ಟಚಾರ ಎಲ್ಲೆ ಮೀರಿದೆ. ಸರ್ಕಾರದಿಂದ ವೇತನ ಪಡೆಯುವವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ನೈಜ ಪ್ರಜಾಪ್ರಭುತ್ವ ಸ್ಥಾಪನೆಗೆ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೇಶದ ಪ್ರತಿಯೊಬ್ಬ ಪ್ರಜೆಯೂ ಅಣಿಯಾಗಬೇಕಾಗಿದೆ’ ಎಂದರು.

‘ಜನರಿಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡುವ ಅಧಿಕಾರ ಜನರಿಗೆ ಇದೆ. ಆದರೆ ಈಗ ಅದು ದುಷ್ಟರ ಹಾಗೂ ಭ್ರಷ್ಟರ ಕೈಸೇರಿದೆ. ಇದನ್ನು ಬದಲು ಮಾಡಲು ರಾಜಕೀಯ ಪರಿವರ್ತನೆ ಅಗತ್ಯ’ ಎಂದರು.ರಾಜ್ಯ ರೈತ ಸಂಘದ ಮುಖಂಡರಾದ ಕೆ.ಟಿ. ಗಂಗಾಧರ ಮಾತನಾಡಿ, ‘ರೈತರ ಆತ್ಮಹತ್ಯೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸ್ಪಂದಿಸುತ್ತಿಲ್ಲ. ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಒದಗಿಸಲು ಸರ್ಕಾರ ವಿಫಲವಾಗಿದೆ. ಒಂದೆಡೆ ಪ್ರಧಾನಿ  ಭಾರತ ಮಾತೆ ಎಂದೆನ್ನುತ್ತಾರೆ. ಮತ್ತೊಂದೆಡೆ ದೇಶದ ಇಂಚಿಂಚು ಜಾಗವನ್ನು ವಿದೇಶಿ ಕಂಪೆನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದು ನಿಜವಾದ ದೇಶಭಕ್ತಿಯೇ’ ಎಂದರು.

ADVERTISEMENT

ಎಐಡಿವೈಓ ಯುವಜನ ಸಂಘಟನೆಯ ಅಖಿಲ ಭಾರತ ಅಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿದರು. ಬಹಿರಂಗ ಸಭೆಗೂ ಮೊದಲು ಜಾಥಾವನ್ನು ಸ್ವಾಗತಿಸಲಾಯಿತು.  ಜಿಲ್ಲೆಯ ವಿವಿಧೆಡೆಯಿಂದ ರೈತರು, ಕಾರ್ಮಿಕರು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಜಾಥಾದಲ್ಲಿ ಭಾಗವಹಿಸಿದ್ದರು. ಜಾಥಾ ಕಲಾಭವನದಿಂದ ಪ್ರಾರಂಭಗೊಂಡು ಸುಭಾಸ ರಸ್ತೆಯ ಮೂಲಕ ಹಾದು ಕೆಸಿಸಿ ಬ್ಯಾಂಕ್ ವೃತ್ತದಿಂದ ಜಕಣಿಬಾವಿ ವೃತ್ತದ ಮೂಲಕ ವಿವೇಕಾನಂದ ವೃತ್ತಕ್ಕೆ ಬಂದು ಸೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.