ADVERTISEMENT

ಜನವರಿಯಿಂದ ನೆಲಮಹಡಿ ಅಂಗಡಿ ತೆರವು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 4:13 IST
Last Updated 31 ಡಿಸೆಂಬರ್ 2016, 4:13 IST
ಧಾರವಾಡದಲ್ಲಿ ಶುಕ್ರವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಒತ್ತುವರಿ ತೆರವು ಕುರಿತು ಸಭೆಗೆ ಮಾಹಿತಿ ನೀಡಿದರು
ಧಾರವಾಡದಲ್ಲಿ ಶುಕ್ರವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಒತ್ತುವರಿ ತೆರವು ಕುರಿತು ಸಭೆಗೆ ಮಾಹಿತಿ ನೀಡಿದರು   

ಧಾರವಾಡ: ವಾಣಿಜ್ಯ ಕಟ್ಟಡಗಳಲ್ಲಿನ ವಾಹನ ನಿಲುಗಡೆ ಜಾಗದಲ್ಲೂ (ನೆಲ­ಮಹಡಿ) ಅಂಗಡಿಗಳು ಇದ್ದು, ಅವು­ಗಳನ್ನು ತೆರವುಗೊಳಿಸುವ ಕಾರ್ಯಾ­­ಚ­ರಣೆ­ಯನ್ನು ಜನವರಿ ತಿಂಗ­ಳಿಂದ ಆರಂ ಭಿ­­ಸಲಾಗುವುದು ಎಂದು ಹುಬ್ಬಳ್ಳಿ–­ಧಾರವಾಡ ಮಹಾನ­ಗರ ಪಾಲಿಕೆ ಆಯುಕ್ತ ಮೇಜರ್ ಸಿದ್ಧ­ಲಿಂಗಯ್ಯ ಹಿರೇಮಠ ಶುಕ್ರವಾರ ಹೇಳಿದರು.

ಇಲ್ಲಿನ ಪಾಲಿಕೆ ಕಚೇರಿಯ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೊದಲ ಹಂತದಲ್ಲಿ ಜನದಟ್ಟಣೆ ಪ್ರದೇಶಗಳ ವಾಣಿಜ್ಯ ಕಟ್ಟಡಗಳಲ್ಲಿನ ವಾಹನ ನಿಲುಗಡೆ ಜಾಗದಲ್ಲಿನ ಅಂಗಡಿಗಳನ್ನು ತೆರವುಗೊಳಿಸಲಾಗುವುದು’ ಎಂದರು.

ಇದರ ಜತೆಗೆ ಪಾದಚಾರಿ ಮಾರ್ಗ­ವನ್ನೂ ಒತ್ತುವರಿ ಮಾಡಿದ್ದು, ಅದರ ತೆರವು ಕಾರ್ಯಾಚರಣೆ ಕೂಡ ನಡೆ­ಯಲಿದೆ ಎಂದು ಅವರು ವಿವರಿಸಿದರು. ‘ಹೊಸ ವರ್ಷದ ಆರಂಭದಲ್ಲಿ ಧಾರ­ವಾಡದ ಸುಭಾಷ ರಸ್ತೆ ಮತ್ತು ಜಕಣಿಭಾವಿ ರಸ್ತೆ, ಹುಬ್ಬಳ್ಳಿಯ ನಿಲಿಜಿನ್‌ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ. ನಂತರ ಉಳಿದ ಬಡಾ­ವಣೆಗಳತ್ತ ಗಮನಹರಿಸಲಾ­ಗುವುದು. ಯಾವುದೇ ಕಾರಣಕ್ಕೂ ತೆರವು ಕಾರ್ಯಾ­ಚ­ರಣೆಯಿಂದ ಹಿಂದೆ ಸರಿ­ಯುವು­ದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು ಕಾಂಗ್ರೆಸ್‌ ಸದಸ್ಯ ಗಣೇಶ ಟಗರಗುಂಟಿ ಮಾತನಾಡಿ, ‘ಅವಳಿ ನಗರದಲ್ಲಿ ಸಮರ್ಪಕ ವಾಹನ ನಿಲುಗಡೆಗೆ ಜಾಗ ಇಲ್ಲದೆ, ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿದೆ. ದೇಶಪಾಂಡೆ ನಗರದ ಮುಖ್ಯ ರಸ್ತೆಯಲ್ಲಿರುವ ಕೆಲ ವಸತಿ ಸಮುಚ್ಚಯಗಳಲ್ಲಿ ವಾಹನ ನಿಲುಗಡಗೆ ಸ್ಥಳವೇ ಇಲ್ಲದೆ, ಎಲ್ಲಾ ವಾಹನಗಳು ರಸ್ತೆ ಮೇಲೆ ನಿಲ್ಲಿಸ­ಲಾಗುತ್ತಿದೆ. ಈ ಹಿಂದೆ ತೆರವುಗೊಳಿಸ­ಲಾದ ಹಲವು ಕಟ್ಟಡಗಳಲ್ಲಿ ಮತ್ತೆ ಪಾರ್ಕಿಂಗ್‌ ಜಾಗವನ್ನು ಇತರ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಒಮ್ಮೆ ತೆರವುಗೊಳಿಸಿದ ನಂತರ ಮತ್ತೆ ಅಲ್ಲಿ ಅಕ್ರಮ ನಡೆದಿದೆಯೇ ಎಂದು ಅಧಿಕಾ­ರಿಗಳು ಏಕೆ ನೋಡುತ್ತಿಲ್ಲ? ಹಾಗಿದ್ದರೆ ದಾಳಿಯ ಹಿಂದಿನ ಉದ್ದೇಶವಾದರೂ ಏನು’ ಎಂದು ಪ್ರಶ್ನಿಸಿದರು.

ಇದಕ್ಕೆ ಧನಿಗೂಡಿಸಿದ ಬಿಜೆಪಿಯ ವೀರಣ್ಣ ಸವಡಿ, ‘ಈ ಹಿಂದಿನ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್‌ ಹಾಗೂ ಹಿಂದಿನ ಪಾಲಿಕೆ ಆಯುಕ್ತ ನೂರ್‌ ಮನ್ಸೂರ್‌ ಅವರು ಆರಂಭದಲ್ಲಿ ತೆರವು ಕಾರ್ಯಾಚರಣೆಯನ್ನು ಚುರು­ಕಾಗಿ ನಡೆಸಿದರು. ಸೂಟು ಹಾಕಿಕೊಂಡು ಮಾಧ್ಯಮಗಳಿಗೆ ಪೋಸು ನೀಡಿದರು. ಇದರಿಂದ ಅಕ್ರಮ ಎಸಗಿದ ಭಾರೀ ಕುಳಗಳಿಗೆ ಯಾವುದೇ ಹಾನಿಯಾಗಲಿಲ್ಲ. ನೆಪ ಮಾತ್ರಕ್ಕೆ ಒಂದಷ್ಟು ಕಟ್ಟಡಗಳನ್ನು ಕೆಡವಿ ನಂತರ ತಣ್ಣಗಾದರು. ಹಾಗಿದ್ದರೆ ಈ ತೆರವು ಕಾರ್ಯಾಚರಣೆಗೆ ಪಾಲಿಕೆ ಮಾಡಿದ ಖರ್ಚು ಎಷ್ಟು? ದಂಡದಿಂದ ಪಾಲಿಕೆಗೆ ಬಂದ ಆದಾಯವೆಷ್ಟು? ಎಂಬುದನ್ನು ಸದನಕ್ಕೆ ಮಾಹಿತಿ ನೀಡಬೇಕು’ ಎಂದು ಪಟ್ಟು ಹಿಡಿದರು.

ವಿರೋಧ ಪಕ್ಷದ ನಾಯಕ ಯಾಸೀನ್‌ ಹಾವೇರಿಪೇಟ ಮಾತನಾಡಿ, ‘ವ್ಯಾಪಾರಸ್ಥರು ನಮ್ಮವರೇ. ಅವರನ್ನು ತೆರವುಗೊಳಿಸಿ ಕಳುಹಿಸುವುದಾದರೂ ಎಲ್ಲಿಗೆ? ಹೀಗಾಗಿ ಅವರಿಗೂ ವ್ಯಾಪಾರ ನಡೆಸಲು ಸೂಕ್ತ ಸ್ಥಳಾವಕಾಶವನ್ನು ಪಾಲಿಕೆ ಕಲ್ಪಿಸಬೇಕು. ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಮೊದಲು ತೆರವುಗೊಳಿಸಿ’ ಎಂದರು.

ಇದೇ ವಿಷಯಕ್ಕೆ ಶಿವು ಹಿರೇಮಠ, ರಾಮಣ್ಣ ಬಡಿಗೇರ, ಶಿವಾನಂದ ಮುತ್ತ­ಣ್ಣವರ, ಪೂರ್ಣಾ ಪಾಟೀಲ, ಅಲ್ತಾಫ್‌ ಕಿತ್ತೂರು ಮತ್ತಿತರರು ಧನಿಗೂಡಿಸಿದರು. ಜತೆಗೆ ತೆರವು ಕಾರ್ಯಾಚರಣೆಗೆ ಪಕ್ಷಾತೀತವಾಗಿ ಬೆಂಬಲ ನೀಡುವುದಾಗಿ ಆಯುಕ್ತರಿಗೆ ಭರವಸೆ ನೀಡಿದರು.

ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಆಯುಕ್ತ ಹಿರೇಮಠ, ‘ಹುಬ್ಬಳ್ಳಿಯ ಚನ್ನಮ್ಮ ವೃತ್ತಕ್ಕೆ ಹೊಂದಿಕೊಂಡಿರುವ ಎಲ್ಲಾ ರಸ್ತೆಗಳಲ್ಲೂ ಹಂತ ಹಂತವಾಗಿ ಕಾರ್ಯಾಚರಣೆ ನಡೆಸಲಾಗುವುದು. ಈ ಹಿಂದೆ 289 ಕಟ್ಟಡಗಳಲ್ಲಿ 243 ವಾಣಿಜ್ಯ ಕಟ್ಟಡಗಳ ಮಾಲೀಕರು ಸ್ವಯಂ ಪ್ರೇರಣೆ­ಯಿಂದ ಪಾರ್ಕಿಂಗ್‌ ಜಾಗವನ್ನು ತೆರವು­ಗೊಳಿಸಿಕೊಂಡಿದ್ದರು.

ಇವುಗಳ ಮರುಸಮೀಕ್ಷೆಯೂ ನಡೆಸಲಾಗುವುದು. ಪಾಲಿಕೆ ಜಾಗದಲ್ಲಿ ಹಾಕಿಕೊಂಡಿದ್ದ ಡಬ್ಬಾ ಅಂಗಡಿಗಳು ಹಾಗೂ ಇನ್ನಿತರ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಸಾಕಷ್ಟು ಒತ್ತಡಗಳು ಬಂದವು. ಆದರೆ ಅವುಗಳನ್ನು ಕಾನೂನು ರೀತಿಯಲ್ಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಲಾ­ಗಿದೆ’ ಎಂದರು. ಇದಕ್ಕೆ ಎಲ್ಲಾ ಪಕ್ಷದ ಸದಸ್ಯರು ‘ಒತ್ತಡ ಹೇರಿದವರ ಹೆಸರು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು. ಸದಸ್ಯರ ಒತ್ತಡಕ್ಕೆ ಪ್ರತಿಕ್ರಿಯಿಸಿದ ಹಿರೇಮಠ, ‘ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಮುಂದೆಯೂ ಒತ್ತಡವಿದ್ದರೆ ಸಭೆಗೆ ತಿಳಿಸುತ್ತೇನೆ’ ಎಂದರು.

ಸಭೆಗೆ ಮೇಯರ್‌ ಗೈರು ಆಗಿದ್ದರಿಂದ ಉಪಮೇಯರ್‌ ಲಕ್ಷ್ಮೀ ಉಪ್ಪಾರ ಅವರು ತೆರವು ಕಾರ್ಯಾಚರಣೆ ಆರಂಭಿಸಲು ಠರಾವು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.