ADVERTISEMENT

ದಲಿತರ ಮೇಲೆ ಹಲ್ಲೆ ಖಂಡಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 5:51 IST
Last Updated 23 ಏಪ್ರಿಲ್ 2017, 5:51 IST

ಕುಂದಗೋಳ: ನವಲಗುಂದ ತಾಲ್ಲೂಕಿನ ಮಣಕವಾಡ ಗ್ರಾಮದಲ್ಲಿ ಅಂಬೇಡ್ಕರ್‌ ಜಯಂತಿಯ ಮೆರವಣಿಗೆಗೆ ಅಡ್ಡಿಪಡಿಸಿದ್ದನ್ನು ವಿರೋಧಿಸಿ ಇಲ್ಲಿನ ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು.ಮೆರವಣಿಗೆ ಸಂದರ್ಭದಲ್ಲಿ ದಲಿತ ಸಮುದಾಯದ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಿದ ಪದಾಧಿಕಾರಿಗಳು, ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಡಿ.ಎಸ್.ಎಸ್. ಕಾರ್ಯದರ್ಶಿ ಷರೀಫ್ ಜೋಗಮ್ಮನವರ ‘ಕಳೆದ ಭಾನುವಾರ ಬಾಬಾಸಾಹೇಬ ಅಂಬೇಡ್ಕರ್‌ರ 126 ನೇ ಜಯಂತಿ ಕಾರ್ಯಕ್ರಮ ನಡೆಯಿತು. ಆಗ ಗ್ರಾಮದ ಸುವರ್ಣೀಯರು ಏಕಾಏಕಿ ನುಗ್ಗಿ ಜಯಂತಿಗೆ ಅಡ್ಡಿಪಡಿಸಿ ದಲಿತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಈ ಘಟನೆಗೆ ಸಂಬಂಧಿಸಿದಂತೆತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಂಡು ದಲಿತರಿಗೆ  ಸೂಕ್ತರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಮಹದೇವ ಬಣಸಿ, ಅದನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಿ ಸೂಕ್ತಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಡಿ.ಎಸ್.ಎಸ್. ಪದಾಧಿಕಾರಿಗಳಾದ ಸಿದ್ದಪ್ಪ ಚೂರಿ, ಮಂಜುನಾಥ ಕಾಲವಾಡ, ಹಾಲೇಶ ಬೇಲಾಳ, ಕಿರಣ ಜೋಗಮ್ಮನವರ, ಅಕ್ಷಯ ಚಲವಾದಿ, ಕೊಟ್ರೇಶ ಮೂಲಿಮನಿ, ಮಹಾಂತೇಶ ಮುಂಗೂಣಿ, ಮಾರುತಿ ಕಾಗಿ, ಅವಿನಾಶ ಚಲವಾದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.