ADVERTISEMENT

ನೀರ ಧ್ಯಾನದಲ್ಲಿ ಕೃಷಿ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 6:27 IST
Last Updated 22 ಸೆಪ್ಟೆಂಬರ್ 2017, 6:27 IST
ಧಾರವಾಡದ ಕೃಷಿ ವಿಶ್ವವಿದ್ಯಾಲದಲ್ಲಿ ಶುಕ್ರವಾರದಿಂದ ಆರಂಭಗೊಳ್ಳಲಿರುವ ಕೃಷಿ ಮೇಳದ ಸ್ವಾಗತ ಕಮಾನು
ಧಾರವಾಡದ ಕೃಷಿ ವಿಶ್ವವಿದ್ಯಾಲದಲ್ಲಿ ಶುಕ್ರವಾರದಿಂದ ಆರಂಭಗೊಳ್ಳಲಿರುವ ಕೃಷಿ ಮೇಳದ ಸ್ವಾಗತ ಕಮಾನು   

ಧಾರವಾಡ: ‘ಜಲ ವೃದ್ಧಿ–ಕೃಷಿ ಅಭಿವೃದ್ಧಿ’ ಎಂಬ ಧ್ಯೇಯವಾಕ್ಯದೊಂದಿಗೆ ನಾಲ್ಕು ದಿನಗಳ ಧಾರವಾಡ ಕೃಷಿ ಮೇಳ ಶುಕ್ರವಾರದಿಂದ (ಸೆ.22) ಆರಂಭವಾಗುತ್ತಿದೆ.
ಸತತ ಬರಗಾಲದಿಂದ ಕಂಗೆಟ್ಟಿರುವ ರೈತ ಸಮುದಾಯದಲ್ಲಿ ಇದೀಗ ಸುರಿಯುತ್ತಿರುವ ಮಳೆಯು ಕೊಂಚ ಹರ್ಷ ಮೂಡಿಸಿದೆ.

ಅಸಮರ್ಪಕವಾಗಿ ಸುರಿಯು ಮಳೆಯ ನೀರನ್ನೇ ಹಿಡಿದಿಟ್ಟುಕೊಂಡು ಅಂತರ್ಜಲ ವೃದ್ಧಿ, ಕೃಷಿ ಚಟುವಟಿಕೆ ನಡೆಸಬೇಕಾದ ತಂತ್ರಗಳ ಕುರಿತು ಈ ಬಾರಿ ಮೇಳದಲ್ಲಿ ವಿಜ್ಞಾನಿಗಳು ರೈತರಿಗೆ ತಿಳಿಸಲು ಸಜ್ಜಾಗಿದ್ದಾರೆ.

ಇದರೊಂದಿಗೆ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಅಧಿಕ ಇಳುವರಿ ಮತ್ತು ನೀರಿನ ಉಳಿತಾಯಕ್ಕಾಗಿ ಸುಧಾರಿತ ನೀರಾವರಿ ಪದ್ಧತಿ, ಸಂಪನ್ಮೂಲ ಸಂರಕ್ಷಣೆಗಾಗಿ ಸಮಗ್ರ ಜಲಾನಯನ ಅಭಿವೃದ್ಧಿ, ರೈತರ ಸಬಲೀಕರಣಕ್ಕೆ ಸಮಗ್ರ ಕೃಷಿ ಪದ್ಧತಿ, ಒಣ ಬೇಸಾಯ ತಾಂತ್ರಿಕತೆ, ಸಮಗ್ರ ಬೆಳೆ, ಪೋಷಕಾಂಶ ಹಾಗೂ ಪೀಡೆಗಳ ನಿರ್ವಹಣೆ, ಕೃಷಿಯಲ್ಲಿ ಜೈವಿಕ ಹಾಗೂ ನ್ಯಾನೋ ತಂತ್ರಜ್ಞಾನಗಳ ಬಳಕೆ, ಸಾವಯವ ಕೃಷಿ, ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕ, ದ್ವಿದಳ ಧಾನ್ಯಗಳ ಉತ್ಪಾದನೆ ಹಾಗೂ ಮೌಲ್ಯವರ್ಧನೆ ಇತ್ಯಾದಿ ಕುರಿತು ಮಳಿಗೆಗಳು, ಕ್ಷೇತ್ರ ವೀಕ್ಷಣೆ ತಾಕುಗಳ ಭೇಟಿಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

ADVERTISEMENT

ಸದ್ಯ ಬಿದ್ದ ಮಳೆಯಿಂದ ಚೇತರಿಕೆ ಕಂಡಿರುವ ಕೃಷಿ ವಲಯ, ಹಿಂಗಾರಿನಲ್ಲಿ ಒಂದಷ್ಟು ಬೆಳೆ ಬೆಳೆಯಲು ಸಜ್ಜಾಗಿದೆ. ಇವರಿಂದಾಗಿ ತಳಿ ಬೀಜ, ಸಸಿಗಳ ಮಾರಾಟ, ಸುಧಾರಿತ ಯಂತ್ರೋಪಕರಣ ಹಾಗೂ ಸಲಕರಣೆಗಳ ಮಾರಾಟ, ರೈತರ ಆವಿಷ್ಕಾರಗಳು ಹಾಗೂ ಕೃಷಿ ತಜ್ಞರೊಂದಿಗೆ ಸಮಾಲೋಚನೆ, ಹೈಟೆಕ್ ತೋಟಗಾರಿಕೆ, ಮಣ್ಣು ರಹಿತ ಬೇಸಾಯ, ಸುಗಂಧ ಹಾಗೂ ಔಷಧ ಬೆಳೆಗಳು, ಫಲ, ಪುಷ್ಪ, ಮೀನು, ಆಲಂಕಾರಿಕ ಮೀನು ಸಾಕಾಣಿಕೆ, ಪಶು ಹಾಗೂ ಪಕ್ಷಿ ಪ್ರದರ್ಶನವೂ ಇರಲಿದೆ.

ಕೃಷಿ ಮೇಳಕ್ಕೆ ಕೃಷಿ ವಿವಿ ವಧುವಿನಂತೆ ಸಜ್ಜಾಗಿದೆ. 800ಕ್ಕೂ ಅಧಿಕ ಮಳಿಗೆಗಳು ಸಜ್ಜುಗೊಂಡಿವೆ. ಮೇಳದಲ್ಲಿ ಭಾಗವಹಿಸುವವರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಮೇಳದಲ್ಲೇ ಚೌಕಿಯನ್ನು ಆರಂಭಿಸಿದೆ. ಸಲಹೆ ಸೂಚನೆಗೆ ಕೃಷಿ ವಿವಿ ಸಮಾಲೋಚನಾ ಕೇಂದ್ರ ತೆರೆದಿದೆ. ರೈತರಿಂದ ರೈತರಿಗಾಗಿ ಎಂಬ ಕಾರ್ಯಕ್ರಮ ನಾಲ್ಕೂ ದಿನಗಳ ಕಾಲ ನಡೆಯಲಿದೆ.

ಕೃಷಿ ವಿವಿ ವ್ಯಾಪ್ತಿಯ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಕೃಷಿ ಸಾಧಕರಿಗೆ ಶ್ರೇಷ್ಠ ಕೃಷಿಕ, ಶ್ರೇಷ್ಠ ಕೃಷಿ ಮಹಿಳೆ ಹಾಗೂ ಯುವ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತಿದಿನ ಮಧ್ಯಾಹ್ನ ಮುಖ್ಯ ವೇದಿಕೆಯಲ್ಲಿ ಜರುಗಲಿದೆ. ಕೃಷಿ ಕ್ಷೇತ್ರ ಆಯ್ಕೆ ಮಾಡಿಕೊಂಡ ಮಾಜಿ ಸೈನಿಕರಿಗೂ ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ವಿದೇಶಗಳಲ್ಲಿರುವ ಪ್ರಮುಖ ಕೃಷಿ ಪದ್ಧತಿಗಳ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಜತೆಗೆ ಸರಳ ಕೃಷಿ ಕುರಿತು ಚಂದ್ರಶೇಖರ ಗುರೂಜಿ, ನಾಗತಿಹಳ್ಳಿ ಚಂದ್ರಶೇಖರ್‌, ವಿದೇಶಗಳಿಂದ ಬಂದ ಕೃಷಿ ತಜ್ಞರು, ಜಲ ನಿರ್ವಹಣೆ ಕುರಿತು ತಜ್ಞರಿಂದ ಸಂವಾದಗಳೂ ಆಯೋಜನೆಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.