ADVERTISEMENT

‘ನುಡಿದಂತೆ ನಡೆದಿದ್ದೇವೆ..’ ಮುಂದಿನ ವಾರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 9:09 IST
Last Updated 1 ಡಿಸೆಂಬರ್ 2017, 9:09 IST

ಧಾರವಾಡ: ಇದೇ ತಿಂಗಳ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ನುಡಿದಂತೆ ನಡೆದಿದ್ದೇವೆ-ಸಾಧನಾ ಸಂಭ್ರಮ’ ಕಾರ್ಯಕ್ರಮ  ಜಿಲ್ಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನುಡಿದಂತೆ ನಡೆದಿದ್ದೇವೆ-ಸಾಧನಾ ಸಂಭ್ರಮ’ದ ಅಂಗವಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಮುಖ್ಯಮಂತ್ರಿ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸಲು ಇಲಾಖೆಗಳ ಅಭಿವೃದ್ಧಿಯ ಮಾಹಿತಿ ಒಳಗೊಂಡ ಕಿರು ಪುಸ್ತಕ ಪ್ರಕಟಿಸಲಾಗುತ್ತಿದೆ. ಹೀಗಾಗಿ ಎಲ್ಲ ಇಲಾಖಾವಾರು ಅಗತ್ಯವಿರುವ ಮಾಹಿತಿಯನ್ನು ಡಿ. 4 ರೂಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಪ್ರತಿ ತಾಲ್ಲೂಕಿನಿಂದ ತಮ್ಮ ಅಧೀನ ಅಧಿಕಾರಿಗಳಿಂದ 2013 ರಿಂದ ನ. 2017 ರವರೆಗೆ ತಮ್ಮ ಇಲಾಖೆಯಿಂದ ಸಾಧಿಸಿರುವ ಪ್ರಗತಿಯನ್ನು ಈಗಾಗಲೆ ತಮಗೆ ನೀಡಿರುವ ನಮೂನೆಯಲ್ಲಿ ದಾಖಲಿಸಿ ಸಲ್ಲಿಸಬೇಕು ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ ಮಾತನಾಡಿ, ‘ನುಡಿದಂತೆ ನಡೆದಿದ್ದೇವೆ-ಸಾಧನಾ ಸಂಭ್ರಮ’ ಕಾರ್ಯಕ್ರಮ ಬಹುಮುಖ್ಯವಾಗಿದ್ದು, ಜಿಲ್ಲಾಧಿಕಾರಿ ನೀಡಿರುವ ಸೂಚನೆಗಳನ್ನು ಎಲ್ಲ ಇಲಾಖೆಗಳು ಪಾಲಿಸಬೇಕು. ಜತೆಗೆ ನಿಗದಿತ ಸಮಯದೊಳಗೆ ಸೂಕ್ತ ಮಾಹಿತಿ ನೀಡಬೇಕು ಎಂದರು.

ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಚಟುವಟಿಕೆಗಳ ಕುರಿತು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಪ್ರಗತಿ ಪರಶೀಲನೆ ನಡೆಸಿದರು. ನಂತರ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ ಜರುಗಿತು. ಕಲಘಟಗಿಯ ಆಯುಷ್ ವೈದ್ಯಾಧಿಕಾರಿ ಡಾ.ಸಂಗಮೇಶ ಕಲಹಾಳ ಅವರು ಒತ್ತಡ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ಮಹೇಶ ಕರ್ಜಿಗಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ ಶಿಂತ್ರೆ ಹಾಗೂ ವಿವಿಧ ಇಲಾಖೆ, ನಿಗಮ-ಮಂಡಳಿಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.