ADVERTISEMENT

‘ಪಠ್ಯದೊಂದಿಗೆ ಸಮಕಾಲೀನ ಜ್ಞಾನ ಅನ್ವಯಿಸಿ’

ಬೋಧನೆ ಸಮಸ್ಯೆಗಳು, ದೃಷ್ಟಿಕೋನ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 10:52 IST
Last Updated 11 ಮಾರ್ಚ್ 2017, 10:52 IST
ಹುಬ್ಬಳ್ಳಿ:  ‘ಸಮಾಜ ವಿಜ್ಞಾನವನ್ನಾಗಲಿ, ಮೂಲ ವಿಜ್ಞಾನವನ್ನಾಗಲಿ ಬೋಧಿಸು­ವಾಗ ಅವುಗಳೊಂದಿಗೆ ಸಮಕಾಲೀನ ಪ್ರಜ್ಞೆ ಅನ್ವಯಿಸಬೇಕು. ಆ ಮೂಲಕ ಈ ವಿಷಯಗಳ ಪ್ರಸ್ತುತತೆಯನ್ನು ವಿದ್ಯಾರ್ಥಿ­ಗಳಿಗೆ ತಿಳಿಸಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೋದ ಗಾಯಿ ಸಲಹೆ ನೀಡಿದರು. 
 
ಇಲ್ಲಿನ ರಾಜನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ‘ಮಾನವಿಕ ವಿಜ್ಞಾನ, ಸಮಾಜ­ವಿಜ್ಞಾನ, ವಾಣಿಜ್ಯ ಹಾಗೂ ಮೂಲ ವಿಜ್ಞಾನಗಳ ಬೋಧನೆಯ ಸಮಸ್ಯೆಗಳು ಹಾಗೂ ದೃಷ್ಟಿಕೋನ’ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
‘ಸಮಾಜ ವಿಜ್ಞಾನಗಳ ಜ್ಞಾನ ವಿದ್ಯಾರ್ಥಿಗಳಲ್ಲಿ ನಾಗರಿಕ ಪ್ರಜ್ಞೆಯನ್ನು ಮೂಡಿಸುತ್ತದೆ. ಆದರೆ, ಆಧುನಿಕ ಯುಗದಲ್ಲಿ ಈ ವಿಷಯಗಳ ಬೋಧನೆಗೆ ಆದ್ಯತೆ ಕಡಿಮೆಯಾಗುತ್ತಿದೆ’ ಎಂದರು. 
 
‘ಯುನೆಸ್ಕೊ ವರದಿಯ ಪ್ರಕಾರ, ವಿಜ್ಞಾನ ಸಂಬಂಧಿತ ವಿಷಯಗಳ ಬೋಧನಾ ಪ್ರಮಾಣ ಶೇ 58.5ರಷ್ಟಿ­ದ್ದರೆ, ಸಮಾಜ ವಿಜ್ಞಾನಗಳ ಬೋಧನಾ ಪ್ರಮಾಣ ಶೇ 41.5ರಷ್ಟಿದೆ. ಅಂದರೆ, ಈ ವಿಷಯಗಳ ಸ್ವೀಕಾರ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು. 
 
‘ಯಾವುದೇ ಒಂದು ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಲು ಅಥವಾ ನಿರಾಸಕ್ತಿ ಮೂಡಲು ಬೋಧ­ಕರೇ ಕಾರಣ. ಶಿಕ್ಷಕರು ತಮಗೆ ಸಂಬಂಧಿಸಿದ ವಿಷಯವನ್ನು ಸೂಕ್ತ ಉದಾಹರಣೆಗಳ ಸಹಿತ ಬೋಧಿಸಿದರೆ, ವಿದ್ಯಾರ್ಥಿಗಳಿಗೆ ಸಹಜವಾಗಿಯೇ ಆಸಕ್ತಿ ಮೂಡುತ್ತದೆ’ ಎಂದರು. 
 
ಸ್ಪರ್ಧೆಯೇ ಉದ್ದೇಶ: ‘ನಮ್ಮ ಪಠ್ಯಕ್ರಮ­ವನ್ನು ಜ್ಞಾನವೃದ್ಧಿಯ ಉದ್ದೇಶದಿಂದ ರಚಿಸದೆ, ಕೇವಲ ಸ್ಪರ್ಧೆಯನ್ನು ಎದುರಿಸುವ ಉದ್ದೇಶದಿಂದ ರಚಿಸಿ­ದಂತಾ­ಗಿದೆ. ಈ ಕಾರಣದಿಂದ, ಎಲ್ಲ ವಿಷಯಗಳ ಮೇಲ್ಮೈ ಜ್ಞಾನವನ್ನು ವಿದ್ಯಾರ್ಥಿಗಳು ಪಡೆಯುತ್ತಾರೆಯೇ ವಿನಾ ಆಳವಾದ ಜ್ಞಾನ ಅವರಿಗೆ ದಕ್ಕುತ್ತಿಲ್ಲ’ ಎಂದು ಗಾಯಿ ಹೇಳಿದರು.
 
‘ಸಮಾಜ ವಿಜ್ಞಾನ ವಿಷಯಗಳ ಬಗ್ಗೆ ನಕಾರಾತ್ಮಕ ಕಲ್ಪನೆ ಇದೆ. ಈ ವಿಷಯ ಬೋಧಕರಿಗೆ ಈ ವಿಷಯವೇ ದೊಡ್ಡ ಸವಾಲು. ಅಲ್ಲದೆ, ಮಾನವಿಕ ವಿಜ್ಞಾನ ಬೋಧನೆಯಲ್ಲಿ ಬೋಧಕರ ಆಸಕ್ತಿಯು ಮಧ್ಯಮ ಮಟ್ಟದಲ್ಲಿದೆ ಎಂದು ಅನೇಕ ವರದಿಗಳು ಹೇಳಿವೆ’ ಎಂದು ತಿಳಿಸಿದರು. 
 
‘ನೀವು ನಿಮ್ಮ ವಿಷಯವನ್ನು ಪ್ರೀತಿಸುತ್ತೀರಾ ? ನಿಮ್ಮ ವೃತ್ತಿಯನ್ನು ಇಷ್ಟಪಡುತ್ತೀರಾ? ಎಂಬ ಪ್ರಶ್ನೆಗಳಿಗೆ ನಿಮ್ಮ ಉತ್ತರ ‘ಹೌದು’ ಎನ್ನುವುದಾದರೆ, ನೀವೊಬ್ಬ ಯಶಸ್ವಿ ಶಿಕ್ಷಕರಾಗುತ್ತೀರಿ’ ಎಂದು ಉಪನ್ಯಾಸಕರಿಗೆ ಹೇಳಿದರು. 
 
ಪ್ರಾಚಾರ್ಯರಾದ ಡಾ. ಎಚ್‌.ಜಿ. ಗೀತಾ ಮಾತನಾಡಿ, ‘ಶಿಕ್ಷಕ ವೃತ್ತಿಯು ಅಧ್ಯಾತ್ಮಕ್ಕೆ ಸಮನಾದುದು. ಈ ವೃತ್ತಿ­ಯಲ್ಲಿ ಸಿಗುವ ಆತ್ಮತೃಪ್ತಿ ದೊಡ್ಡದು’ ಎಂದರು. ‘ತಾನು ತೆಗೆದುಕೊಳ್ಳುವ ಪ್ರತಿ ತರಗತಿಯಲ್ಲಿಯೂ ಬೋಧಕನೂ ಬೆಳವಣಿಗೆ ಕಾಣುತ್ತಾನೆ. ಈ ಕಾರಣ­ದಿಂದ, ವೈಯಕ್ತಿಕ ಸಮಸ್ಯೆಗಳನ್ನು ಮರೆತು, ಖುಷಿಯಿಂದ ತರಗತಿ ಪ್ರವೇಶಿ­ಸಬೇಕು’ ಎಂದು ಅವರು ಸಲಹೆ ನೀಡಿದರು. 
 
‘ಶಿಕ್ಷಕರಾದವರಿಗೆ ಸ್ವಯಂ ಶಿಸ್ತು, ಧೈರ್ಯ ಹಾಗೂ ಆತ್ಮವಿಶ್ವಾಸವಿರಬೇಕು’ ಎಂದು ಅವರು ಹೇಳಿದರು. ಸಂಘಟನಾ ಕಾರ್ಯದರ್ಶಿ ಡಾ. ವೈ.ಎಂ. ಭಜಂತ್ರಿ ಮಾತನಾಡಿ, ‘ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಡಾ. ಬರಗೂರ ರಾಮಚಂದ್ರಪ್ಪ ಅವರು, ‘ಭೂತಾಯಿ’ ಎನ್ನುವ ಪದದಲ್ಲಿ ‘ತಾಯಿ’ಎನ್ನುವ ಪದ ತೆಗೆದು, ‘ಭೂಮಿ’ ಎನ್ನುವ ಪದವನ್ನು ಮಾತ್ರ ಉಳಿಸಿದ್ದಾರೆ. ಇದು ಸರಿಯಲ್ಲ. ತಾಯಿಯನ್ನು ಪ್ರತ್ಯೇಕಿಸಿ ಬೋಧಿಸಲಾಗುವ ಯಾವುದೇ ಪಾಠ­ಗಳು ತಮ್ಮ ಆಶಯದಲ್ಲಿ, ಉದ್ದೇಶ­ದಲ್ಲಿ ಸಫಲವಾಗಲಾರವು’ ಎಂದರು.
 
ಕರ್ನಾಟಕ ರಾಜ್ಯ ಮಹಾವಿ­ದ್ಯಾಲಯ ಶಿಕ್ಷಕ ಸಂಘದ ಅಧ್ಯಕ್ಷ ಡಾ. ರಘು ಅಕಮಂಚಿ, ವಿಶ್ವನಾಥ ಪಾಟೀಲ, ಪ್ರೇಮಾ ಭಟ್‌ ಹಾಜರಿದ್ದರು. 
ಉದ್ಘಾಟನಾ ಕಾರ್ಯಕ್ರಮ ನಂತರ, ವಿಚಾರಗೋಷ್ಠಿಗಳು ನಡೆದವು. ವಿದ್ಯಾರ್ಥಿಗಳು ಹಾಗೂ ವಿಷಯ ತಜ್ಞರು ವಿಷಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.