ADVERTISEMENT

ಪೂರಕ ವರದಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಅಳ್ನಾವರ ತಾಲ್ಲೂಕು ವ್ಯಾಪ್ತಿಗೆ ಸೇರಿಸಲು ವಿರೋಧ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 8:55 IST
Last Updated 20 ಜುಲೈ 2017, 8:55 IST
ತಾಲ್ಲೂಕಿನ 54 ಗ್ರಾಮಗಳನ್ನು ನೂತನ ಅಳ್ನಾವರ ತಾಲ್ಲೂಕಿಗೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ‘ಧಾರವಾಡ ತಾಲ್ಲೂಕಿನಲ್ಲಿ ಉಳಿಸಿ ಹೋರಾಟ ಸಮಿತಿ’ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಚಕ್ಕಡಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು
ತಾಲ್ಲೂಕಿನ 54 ಗ್ರಾಮಗಳನ್ನು ನೂತನ ಅಳ್ನಾವರ ತಾಲ್ಲೂಕಿಗೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ‘ಧಾರವಾಡ ತಾಲ್ಲೂಕಿನಲ್ಲಿ ಉಳಿಸಿ ಹೋರಾಟ ಸಮಿತಿ’ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಚಕ್ಕಡಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು   

ಧಾರವಾಡ: ‘ತಾಲ್ಲೂಕಿನ 13 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 54ಕ್ಕೂ ಅಧಿಕ ಗ್ರಾಮಗಳನ್ನು ನೂತನ ಅಳ್ನಾವರ ತಾಲ್ಲೂಕಿಗೆ ಸೇರಿಸುವುದನ್ನು ಕೈಬಿಟ್ಟು ಧಾರವಾಡ ತಾಲ್ಲೂಕಿನಲ್ಲೇ ಉಳಿಸುವ ನಿಟ್ಟಿನಲ್ಲಿ ಪೂರಕ ವರದಿ ನೀಡಲು ಜಿಲ್ಲಾಧಿಕಾರಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿ ‘ಧಾರವಾಡ ತಾಲ್ಲೂಕಿನಲ್ಲಿ ಉಳಿಸಿ ಹೋರಾಟ ಸಮಿತಿ’ ಕಾರ್ಯಕರ್ತರು ಹಾಗೂ ವಿವಿಧ ಗ್ರಾಮಸ್ಥರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದರು ಬುಧವಾರ ಪ್ರತಿಭಟನೆ ನಡೆಸಿದರು.

ಸಮಿತಿ ಕಾರ್ಯಾಧ್ಯಕ್ಷ ಮಲ್ಲನಗೌಡ ಪಾಟೀಲ ನೇತೃತ್ವದಲ್ಲಿ ಸುಮಾರು 15ಕ್ಕೂ ಅಧಿಕ ಚಕ್ಕಡಿಗಳ ಮೂಲಕ ಬಂದ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಗೊಂಡು ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದರು.

‘ಧಾರವಾಡ ತಾಲ್ಲೂಕಿನಲ್ಲಿರುವ 13 ಗ್ರಾಮ ಪಂಚಾಯ್ತಿಗಳನ್ನು ಯಾವುದೇ ಕಾರಣಕ್ಕೂ ಸರ್ಕಾರ ನೂತನ ಅಳ್ನಾವರ ತಾಲ್ಲೂಕಿಗೆ ಸೇರಿಸಬಾರದು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

‘ಹೊಸ ತಾಲ್ಲೂಕು ರಚನೆ ಕುರಿತಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಅದರಲ್ಲಿ ಜಿಲ್ಲಾಧಿಕಾರಿಗೆ ತಾಲ್ಲೂಕು ರಚನೆಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಜವಾಬ್ದಾರಿ ನೀಡಲಾಗಿದೆ. ಅಲ್ಲದೇ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ವರದಿ ಸಲ್ಲಿಸಲು ಕೋರಲಾಗಿದೆ. ಹೀಗಾಗಿ ತಾಲ್ಲೂಕಿನ 13 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರು ನೂತನ ಅಳ್ನಾವರ ತಾಲ್ಲೂಕಿಗೆ ಸೇರ್ಪಡೆ ಮಾಡದಂತೆ ಒತ್ತಾಯಿಸಿ ನೀಡಿರುವ ಮನವಿಯನ್ನು ಪರಿಗಣಿಸಿ ಕೂಡಲೇ ಸರ್ಕಾರಕ್ಕೆ ಪೂರಕ ವರದಿ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನ ಯರಿಕೊಪ್ಪ, ಮನಗುಂಡಿ, ಮನಸೂರು, ಬೆಳ್ಳಿಗಟ್ಟಿ, ನಿಗದಿ, ಮುಗದ, ಚಿಕ್ಕಮಲ್ಲಿಗವಾಡ, ಹಳ್ಳಿಗೇರಿ, ದೇವರಹುಬ್ಬಳ್ಳಿ, ಕಲಕೇರಿ, ಮಂಡ್ಯಾಳ, ಕ್ಯಾರಕೊಪ್ಪ, ರಾಮಾಪುರ, ಮುಮ್ಮಿಗಟ್ಟಿ ಸೇರಿದಂತೆ ಸುಮಾರು 54ಕ್ಕೂ ಹೆಚ್ಚು ಗ್ರಾಮಗಳು ಧಾರವಾಡದಿಂದ 10–15 ಕಿ.ಮೀ ಅಂತರದಲ್ಲಿವೆ. ಇದು ಕೇವಲ 20 ನಿಮಿಷ ದಾರಿಯಾದ್ದರಿಂದ ಬಸ್ಸಿನ ಸೌಯರ್ಕವೂ ಸಾಕಷ್ಟಿದೆ. ಹೀಗಾಗಿ ಈ ಗ್ರಾಮಗಳನ್ನು ಮೊದಲಿನಂತೆ ಧಾರವಾಡ ತಾಲ್ಲೂಕಿನಲ್ಲೇ ಮುಂದುವರಿಸಬೇಕು’ ಎಂದು ಒತ್ತಾಯಿಸಲಾಗಿದೆ. 

‘ಇದುವರೆಗೆ ರಾಜ್ಯದಲ್ಲಿ ವಾಸುದೇವ ಆಚಾರ್ಯ ಆಯೋಗ ಸೇರಿದಂತೆ ನಾಲ್ಕು ತಾಲ್ಲೂಕು ರಚನಾ ಸಮಿತಿಗಳನ್ನು ರಚಿಸಲಾಗಿದೆ. ಅಳ್ನಾವರ ಕೇಂದ್ರ ಸ್ಥಾನವಾಗಲು ಯೋಗ್ಯವಲ್ಲ ಎಂದು ಈ ಸಮಿತಿಗಳು ಸ್ಪಷ್ಟವಾಗಿ ತಿಳಿಸಿವೆ. ಆದರೂ ರಾಜ್ಯ ಸರ್ಕಾರ ಹೊಸದಾಗಿ ಅಳ್ನಾವರ ತಾಲ್ಲೂಕು ರಚನೆಗೆ ಮುಂದಾಗಿರುವುದು ಸರಿಯಲ್ಲ.

ರ್ಕಾರ ಈ ಗ್ರಾಮಗಳನ್ನು ನೂತನ ತಾಲ್ಲೂಕಿಗೆ ಸೇರಿಸುವ ಕುರಿತು 15 ದಿನಗಳೊಳಗೆ ಸೂಕ್ತ ವರದಿ ನೀಡುವಂತೆ ಆದೇಶಿಸಿದೆ. ಆದರೆ ಜಿಲ್ಲಾಧಿಕಾರಿ ಮಾತ್ರ ಈವರೆಗೂ ವರದಿ ನೀಡಿಲ್ಲ. ಇದಕ್ಕೆ ಸಂಬಂಧಿಸಿ ಸಾರ್ವಜನಿಕರ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು. 

ಹೋರಾಟ ಸಮಿತಿ ಗೌರವಾಧ್ಯಕ್ಷ ಮಹಾದೇವಪ್ಪ ನೀರಲಗಿ, ಅಧ್ಯಕ್ಷ ಮಲ್ಲನಗೌಡ ಗೌಡರ, ಡಾ.ಕಲ್ಮೇಶ ಹಾವೇರಿಪೇಟ, ಗಂಗಾಧರ ನಿಸ್ಸಿಮಣ್ಣವರ, ಕರಿಯಪ್ಪ ಅಮ್ಮಿನಭಾವಿ, ಬಸವರಾಜ ಭಾವಿ,  ಯಲ್ಲಪ್ಪ ಕದಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.