ADVERTISEMENT

ಮೂವರು ಬಾಲಕರ ರಕ್ಷಣೆ: ಇಬ್ಬರ ಬಂಧನ

ಹುಬ್ಬಳ್ಳಿ ರೈಲು ನಿಲ್ದಾಣದ ಬಳಿ ಘಟನೆ; ಒಡಿಶಾದಿಂದ ಕಳ್ಳಸಾಗಣೆ ಆರೋಪ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2015, 4:43 IST
Last Updated 9 ಏಪ್ರಿಲ್ 2015, 4:43 IST

ಹುಬ್ಬಳ್ಳಿ: ಒಡಿಶಾದಿಂದ ಹುಬ್ಬಳ್ಳಿಗೆ ಮಕ್ಕಳ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮೂವರು ಬಾಲಕರನ್ನು ರಕ್ಷಣೆ ಮಾಡಿದ್ದಾರೆ.

ಸುಮಾರು 15–16 ವಯಸ್ಸಿನ ಈ ಹುಡುಗರನ್ನು ಒಡಿಶಾದವರೇ ಆದ ಶ್ರೀಕಾಂತಕುಮಾರ ನಾಹಕ್‌ ಹಾಗೂ ಜಿತೇಂದ್ರಕುಮಾರ್‌ ನಾಹಕ್ ಎಂಬುವರು ರೈಲಿನ ಮೂಲಕ ಬುಧವಾರ ಬೆಳಿಗ್ಗೆ ಹುಬ್ಬಳ್ಳಿಗೆ ಕರೆತಂದಿದ್ದು, ಇಲ್ಲಿನ ರೈಲು ನಿಲ್ದಾಣದ ಮುಂಭಾಗ ಅನುಮಾನಾ­ಸ್ಪದವಾಗಿ ಓಡಾಡುತ್ತಿದ್ದರು.

ಸ್ಥಳದಲ್ಲೇ ಇದ್ದ ರೈಲ್ವೆ ಪೊಲೀಸರು ವಿಚಾರಣೆಗೆ ನಡೆಸಿದಾಗ ಸತ್ಯಸಂಗತಿ ಹೊರಬಂದಿದೆ. ಕೂಲಿ ಕೆಲಸಕ್ಕೆ ಬಳಸಿಕೊಳ್ಳುವ ಸಲುವಾಗಿ ಈ ಹುಡುಗರನ್ನು ಸಾಗಿಸಲಾಗುತಿತ್ತು ಎಂದು ತಿಳಿದುಬಂದಿದೆ.

‘ಹುಬ್ಬಳ್ಳಿಯಲ್ಲಿ ಜನಾರ್ದನ ಎಂಬುವ ವ್ಯಕ್ತಿ ಗುತ್ತಿಗೆ ಕಾರ್ಯ ನಿರ್ವಹಿಸುತ್ತಿದ್ದಾನೆ. ಆ ವ್ಯಕ್ತಿಯ ಬಳಿ ಈ ಮಕ್ಕಳನ್ನು ಬಿಡುವಂತೆ ನನಗೆ ಸೂಚಿಸಲಾಗಿತ್ತು. ಆತನ ಮೊಬೈಲ್ ಸಂಖ್ಯೆ ಬಿಟ್ಟರೆ ನನ್ನ ಬಳಿ ಬೇರೆ ಏನೂ ಇಲ್ಲ’ ಎಂದು ಆರೋಪಿ ಶ್ರೀಕಾಂತ ಪೊಲೀಸರಿಗೆ ವಿವರಿಸಿದ್ದಾಗಿ ಮೂಲಗಳು ತಿಳಿಸಿವೆ.

ಆದರೆ ಮತ್ತೊಬ್ಬ ಆರೋಪಿ ಜಿತೇಂದ್ರ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ‘ನಾನು ನನ್ನ ಬ್ಯಾಗ್‌ ಹಿಡಿದುಕೊಳ್ಳಲು ಅವರಿಗೆ ಕೊಟ್ಟಿದ್ದೆ. ನನಗೂ ಅವರಿಗೂ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕ­ಳನ್ನು ಬಾಲಕರ ಸರ್ಕಾರಿ ಬಾಲಮಂದಿ­ರದ ವಶಕ್ಕೆ ನೀಡಲಾಗಿದೆ.   ಈ ಮಕ್ಕಳನ್ನು ಮುಂದೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗುವುದು. ಸಮಿತಿಯು ಹುಡುಗರ ಹೇಳಿಕೆಯನ್ನು ಪಡೆದು, ಅವರ ಪೋಷಕರನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳು­ವುದು’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸದಸ್ಯ ನಿಂಗಪ್ಪ ಮಡಿವಾಳರ ‘ಪ್ರಜಾವಾಣಿ’ಗೆ ತಿಳಿಸಿದರು.

ವೇಶ್ಯಾವಾಟಿಕೆ: 12 ಯುವತಿಯರ ರಕ್ಷಣೆ
ನಗರದ ಎರಡು ವಸತಿಗೃಹಗಳಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ 12 ಯುವತಿಯರನ್ನು ಬುಧವಾರ ಪೊಲೀಸರು ರಕ್ಷಿಸಿದ್ದಾರೆ. ಇವರಲ್ಲಿ ವಿದೇಶಿ ಮಹಿಳೆಯರೂ ಸೇರಿದ್ದಾರೆ. ರಕ್ಷಿಸಲ್ಪಟ್ಟ ಯುವತಿಯರು ಬಾಂಗ್ಲಾ­ದೇಶ, ನೇಪಾಳ. ಮುಂಬೈ, ಕೊಲ್ಕತ್ತಾ ಮೂಲದವರಾಗಿದ್ದು, ವೇಶ್ಯಾ­ವಾಟಿ­ಕೆಗೆಂದು ಅವರನ್ನು ಇಲ್ಲಿಗೆ ಕರೆತರ­ಲಾಗಿತ್ತು ಎನ್ನಲಾಗಿದೆ.

ದೂರದ ಊರು­ಗಳಿಂದ ಮಹಿಳೆಯರನ್ನು ಕರೆತಂದು, ನಗರದ ವಸತಿಗೃಹಗಳಲ್ಲಿ ವೇಶ್ಯಾವಾಟಿ­ಕೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರು ಸಿಐಡಿ ಪೊಲೀಸರು ಹಾಗೂ ಮಾನವ ಕಳ್ಳ ಸಾಗಣೆ ಪತ್ತೆ ಘಟಕದ ಸದಸ್ಯರು ದಾಳಿ ಕೈಗೊಂಡು ರಕ್ಷಿಸಿದ್ದಾರೆ. ಪ್ರಕರಣದ ಸಂಬಂಧ 9 ಪುರುಷ­ರನ್ನು ಪೊಲೀಸರು ಬಂಧಿಸಿ­ದ್ದಾರೆ. ಶಹರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ನಿವೃತ್ತ ಡಿವೈಎಸ್‌ಪಿ ಮನೆಯಲ್ಲಿ ಕಳವು
ನಿವೃತ್ತ ಡಿವೈಎಸ್‌ಪಿ ಚಂದ್ರಕಾಂತ ಭಟ್‌ ಅವರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳುವಾದ ಘಟನೆ ಬುಧವಾರ ಕೇಶ್ವಾಪುರದಲ್ಲಿ ನಡೆದಿದೆ.

ಲಕ್ಷಾಂತರ ಮೌಲ್ಯದ ವಸ್ತುಗಳು ಕಳುವಾದ ಬಗ್ಗೆ ದೂರು ದಾಖಲಾಗಿದ್ದು, ಪ್ರಾಥಮಿಕ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಮೇಲೆ ಹಲ್ಲೆ
ಹಳೇ ದ್ವೇಷದ ಕಾರಣ ಗುಂಪೊಂದು ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ದಾದಾಪೀರ್‌ ಬೇಪಾರಿ ಎಂಬುವರ ಭುಜ, ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆಗೆಂದು ಕಿಮ್ಸ್‌ಗೆ ದಾಖಲಾಗಿದ್ದಾರೆ. ‘ಸಮೀರ್‌ ಬಳ್ಳಾರಿ ಸೇರಿದಂತೆ 6–7 ಮಂದಿಯ ತಂಡ ತಮ್ಮ ಮೇಲೆ ಹಲ್ಲೆ ನಡೆಸಿತು’ ಎಂದು ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ಲೀಲ ಚಿತ್ರ ಡೌನ್‌ಲೋಡ್‌: ಇಬ್ಬರ ಬಂಧನ
ಹಳೇ ಬಸ್‌ ನಿಲ್ದಾಣ ಸಮೀಪ ಮೊಬೈಲ್‌ ಅಂಗಡಿ ಮೇಲೆ ಬುಧವಾರ ದಾಳಿ ನಡೆಸಿದ ಪೊಲೀಸರು ಬಾಲಕರ ಮೊಬೈಲ್‌ಗಳಿಗೆ ಬ್ಲೂಫಿಲ್ಮ್‌ ಹಾಕಿಕೊಡು­ತ್ತಿದ್ದ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ.

ಸಂಜಯ್‌ ಹಬೀಬ್‌, ರಾಜು ನಿರಂಜನ ಬಂಧಿತರು. ಇವರಿಂದ ಮೊಬೈಲ್‌, ಕಂಪ್ಯೂಟರ್‌ ವಶಪಡಿಸಿ­ಕೊಳ್ಳ­ಲಾಗಿದೆ. ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಮನ ಬೇರೆಡೆಗೆ ಸೆಳೆದು ಹಣ ಕಳವು
ವ್ಯಕ್ತಿಯೊಬ್ಬರ ಗಮನ ಬೇರೆಡೆಗೆ ಸೆಳೆದು ₨18 ಸಾವಿರ ನಗದು ಕಳವು ಮಾಡಿದ ಘಟನೆ ಬಸವೇಶ್ವರ ನಗರದ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ನಡೆದಿದೆ.

ಮೂಲತಃ ರಾಂಚಿಯವರಾದ, ಪ್ರಸ್ತುತ ಗೋಕುಲ ರಸ್ತೆ ಸಮೀಪದ ಮನೆಯೊಂದರಲ್ಲಿ ವಾಸವಿರುವ ಕೇದಾರ­ನಾಥ ಮಹಾತು ಹಣ ಕಳೆದುಕೊಂಡವರು. ಇವರು ಬ್ಯಾಂಕಿಗೆಂದು ಬಂದ ಸಂದರ್ಭ ಇಬ್ಬರು ಅಪರಿಚಿತರು ಚಲನ್‌ ತುಂಬಿಸಿಕೊಳ್ಳುವ ನೆಪದಲ್ಲಿ ಗಮನ ಬೇರೆ ಕಡೆ ಸೆಳೆದು ಹಣ ಕದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.