ADVERTISEMENT

ಮೊದಲ ‘ಟೆಂಡರ್‌ ಶ್ಯೂರ್‌’ ರಸ್ತೆಗೆ ಧಾರವಾಡ ಸಜ್ಜು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 6:26 IST
Last Updated 6 ನವೆಂಬರ್ 2017, 6:26 IST
ಧಾರವಾಡದ ಹಳೇ ಡಿಎಸ್‌ಪಿ ವೃತ್ತದಿಂದ ಮುರುಘಾಮಠವರೆಗೂ ನಿರ್ಮಾಣವಾಗಲಿರುವ ಟೆಂಡರ್ ಶೂರ್ ರಸ್ತೆಯ ವಿನ್ಯಾಸ ಕಲಾವಿದರ ಕಲ್ಪನೆಯಲ್ಲಿ
ಧಾರವಾಡದ ಹಳೇ ಡಿಎಸ್‌ಪಿ ವೃತ್ತದಿಂದ ಮುರುಘಾಮಠವರೆಗೂ ನಿರ್ಮಾಣವಾಗಲಿರುವ ಟೆಂಡರ್ ಶೂರ್ ರಸ್ತೆಯ ವಿನ್ಯಾಸ ಕಲಾವಿದರ ಕಲ್ಪನೆಯಲ್ಲಿ   

ಇವರಿಗೆ ಹೇಳೋರೂ ಕೇಳೋರೂ ಯಾರೂ ಇಲ್ಲವೇನ್ರೀ? ರಸ್ತೆಗೆ ಟಾರ್ ಹಾಕ್ತಿದ್ರ ಮತ್ತೊಬ್ಬರು ಬಂದು ಅದೇ ರಸ್ತಿ ಅಗೀತಾರಲ್ರೀ... ಇಲಾಖೆಗಳ ನಡುವೆ ಸಮನ್ವಯತೆಯೇ ಇಲ್ಲದಂತಾಗೈತಲ್ರೀ...’ ಇದು ಅವಳಿ ನಗರದ ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆ. ಇಲ್ಲಿ ಯಾವ ರಸ್ತೆಯೂ ಸುಸ್ಥಿತಿಯಲ್ಲಿಲ್ಲ. ನಿರಂತರ ನೀರು, ಅಡುಗೆ ಅನಿಲ, ಬಿಆರ್‌ಟಿಎಸ್‌, ಹೆಸ್ಕಾಂ, ಮೊಬೈಲ್‌ ಕಂಪೆನಿಗಳಿಂದ ಕೇಬಲ್ ಅಳವಡಿಕೆ, ಮ್ಯಾನ್ ಹೋಲ್‌ ನಿರ್ಮಾಣ, ಅಮೃತ್ ಯೋಜನೆ ಇತ್ಯಾದಿ ಇತ್ಯಾದಿಯಂತೆ ಕಾಮಗಾರಿಗಳು ಮುಗಿಯುತ್ತಲೇ ಇಲ್ಲ.

ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಈ ಅವಳಿ ನಗರದಲ್ಲಿ ಒಂದಿಲ್ಲೊಂದು ನೆಪದಿಂದಲಾದರೂ ರಸ್ತೆಗಳಲ್ಲಿ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಇದು ಮುಗಿಯುವುದಾದರೂ ಎಂದು ಎಂಬ ಜನರ ಪ್ರಶ್ನೆಗಳಿಗೆ ಮೊದಲ ಆಶಾಕಿರಣ ಎಂಬಂತೆ ಎಲ್ಲ ಇಲಾಖೆಗಳ ಸಂಪರ್ಕ ಜಾಲ ನೆಲದಡಿಯಲ್ಲೇ ಏಕಗವಾಕ್ಷಿ ವ್ಯವಸ್ಥೆಯಂತಿರುವ ‘ಟೆಂಡರ್‌ ಶ್ಯೂರ್‌ ರಸ್ತೆ’.

ಧಾರವಾಡದ ಸವದತ್ತಿ ರಸ್ತೆಯ 2.4ಕಿ.ಮೀ. ರಸ್ತೆ ಹಾಗೂ ಹುಬ್ಬಳ್ಳಿಯ ಶಿರೂರ ಪಾರ್ಕ್ ರಸ್ತೆ ಕೂಡ ಇದೇ ಮಾದರಿಯ ರಸ್ತೆ ನಿರ್ಮಾಣಕ್ಕೆ ಆಯ್ಕೆಯಾಗಿದ್ದವು. ಇದೀಗ ಧಾರವಾಡದ ಸವದತ್ತಿ ರಸ್ತೆ ಅತ್ಯಾಧುನಿಕ ರಸ್ತೆಗೆ ಸಾಕ್ಷಿಯಾಗಲಿದೆ. ಬೆಂಗಳೂರಿನ ಜನ ಅರ್ಬನ್‌ ಸ್ಪೇಸ್‌ ಇದರ ಜವಾಬ್ದಾರಿ ಹೊತ್ತಿದ್ದು, ಕೆ-ಶಿಪ್‌ ಮೂಲಕ ಇದು ಕಾರ್ಯರೂಪಕ್ಕೆ ಬರುತ್ತಿದೆ. ಒಂದೊಮ್ಮೆ ನಿಗದಿಯಂತೆ ಈ ಯೋಜನೆ ಜಾರಿಗೆ ಬಂದಲ್ಲಿ ಮುಂದಿನ 18 ತಿಂಗಳಿನಲ್ಲಿ ಇಲ್ಲಿನ ರಸ್ತೆಗಳು ಹೊಸ ರೂಪ ಪಡೆದುಕೊಳ್ಳಲಿವೆ.

ADVERTISEMENT

ಕಳೆದ ಹಲವು ವರ್ಷಗಳಿಂದ ಸತತವಾಗಿ ರಸ್ತೆ ಗುಂಡಿ, ದೂಳಿನಿಂದಲೇ ಮುಚ್ಚಿದ್ದ ಈ ರಸ್ತೆಗೆ ಶಾಶ್ವತ ಪರಿಹಾರವೇ ಇಲ್ಲ ಎಂದು ಭ್ರಮನಿರಸನಗೊಂಡಿದ್ದ ಈ ರಸ್ತೆ ನಿವಾಸಿಗಳು ಹಾಗೂ ಮರಾಠಾ ಕಾಲೊನಿ ಸೇರಿದಂತೆ ಅಕ್ಕಪಕ್ಕದ ಬಡಾವಣೆಯವರು ಬಹಳಷ್ಟು ಬಾರಿ ಬೀದಿಗಿಳಿದು ಹೋರಾಟ ನಡೆಸಿದ್ದರು.

ಇದೇ ರಸ್ತೆಯಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ರಾಜು ಅಂಬೋರೆ ಅವರ ನಿವಾಸಗಳೂ ಇವೆ. ಆದರೆ ದೂಳಿನಿಂದಾಗಿ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಈ ಭಾಗದ ಜನರಿಗೆ ಪರಿಹಾರ ಈವರೆಗೂ ಸಿಕ್ಕಿರಲಿಲ್ಲ. ಆದರೆ 2016 ಆರಂಭದಲ್ಲಿ ಇಂಥದ್ದೊಂದು ಯೋಜನೆಗೆ ಚಾಲನೆ ದೊರೆಯಿತು.

ಹಳೇ ಡಿಎಸ್‌ಪಿ ವೃತ್ತದಿಂದ ಮುರುಘಾಮಠದವರೆಗಿನ 2.4ಕಿ.ಮೀ. ರಸ್ತೆಯನ್ನೇ ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಶಾಸಕ ಅರವಿಂದ ಬೆಲ್ಲದ ಅವರು ಬೆಂಗಳೂರಿನ ‘ಜನ ಅರ್ಬನ್ ಸ್ಪೇಸ್’ ಸಂಸ್ಥೆಯ ಮುಖ್ಯಸ್ಥೆ ಸ್ವಾತಿ ರಾಮನಾಥನ್ ಅವರನ್ನು ಸ್ವತಃ ಇಲ್ಲಿಗೆ ಕರೆಯಿಸಿ ರಸ್ತೆ ತೋರಿಸಿದರು. ಟೆಂಡರ್‌ ಶೂರ್ ರಸ್ತೆ ಕಾಮಗಾರಿಗೆ ಇರುವ ಅಡೆತಡೆಗಳು, ಸಾಧ್ಯತೆಗಳು ಇತ್ಯಾದಿ ಕುರಿತು ಚರ್ಚಿಸಿದರು. ಅಲ್ಲಿಂದ ಸ್ತಬ್ಧವಾಗಿದ್ದ ಈ ಯೋಜನೆಯ ಕಾಮಗಾರಿಗೆ ಈಗ ಹಸಿರು ನಿಶಾನೆ ದೊರೆತಿರುವುದರಿಂದ ಬೆಂಗಳೂರಿನ ಸೆಂಟ್‌ ಮಾರ್ಕ್ಸ್‌ ರಸ್ತೆ , ವಿಠಲಮಲ್ಯ ರಸ್ತೆಯಂತೆಯೇ ಆಗಲಿದೆ ಎಂಬುದನ್ನು ಜನಪ್ರತಿನಿಧಿಗಳು ಹೇಳುತ್ತಿದ್ದರೂ, ಈ ಭಾಗದ ಜನರು ದೂಳಿನ ಸಮಸ್ಯೆ ನಿವಾರಣೆಯಾದರೆ ಸಾಕು ಎಂಬ ಆಶಾಭಾವದಲ್ಲಿರುವುದು ಇಲ್ಲಿನ ಜ್ವಲಂತ ಸಮಸ್ಯೆ ಹಿಡಿದ ಕನ್ನಡಿಯಾಗಿದೆ.

ಈ ಕುರಿತು ಮಾತನಾಡಿದ ಮರಾಠಾ ಕಾಲೊನಿಯ ನಿವಾಸಿ ಚಂದ್ರಕಾಂತ ಶಿಂಧೆ, ’2006ರಿಂದ ಇಲ್ಲಿಯವರೆಗೂ ಈ ರಸ್ತೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಸೂಪಾ–ಅಣ್ಣಿಗೇರಿ ರಸ್ತೆ ಎಂದು ಮೊದಲು ಘೋಷಣೆಯಾಗಿತ್ತು. ನಂತರ ಅದು ರದ್ದಾಯಿತು. ಈ ರಸ್ತೆಗೆ ಹೊಂದಿಕೊಂಡಂತೆ ಪಾಲಿಕೆ ವ್ಯಾಪ್ತಿಯ ಮೂರು ವಾರ್ಡ್‌ಗಳು ಸೇರುತ್ತವೆ. ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಈ ಭಾಗದ ಜನರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ವ್ಯಾಪಾರಿಗಳಿಗೆ ಸುಸಜ್ಜಿತ ರಸ್ತೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಸಮಸ್ಯೆಯನ್ನು ಬಿಚ್ಚಿಟ್ಟರು.

‘ಇನ್ನು ಈ ರಸ್ತೆಯಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಭಾರಿ ವಾಹನಗಳು ಸಂಚರಿಸಬಾರದು ಎಂಬ ಕಾನೂನು ಇದೆ. ಆದರೆ ನಗರಕ್ಕೆ ಹೊರ ವರ್ತುಲ ರಸ್ತೆ ಇಲ್ಲದಿರುವುದರಿಂದ ಎಲ್ಲ ವಾಹನಗಳೂ ಇದೇ ಮಾರ್ಗವಾಗಿ ಸಂಚರಿಸಬೇಕಾದ್ದು ಅನಿವಾರ್ಯ. ಹೀಗಾದರೆ ರಸ್ತೆ ಗುಣಮಟ್ಟ ಕಾಯ್ದುಕೊಳ್ಳುವುದಾದರೂ ಹೇಗೆ?’ ಎಂಬುದು ಅವರ ಪ್ರಶ್ನೆ.

ಈ ರಸ್ತೆಯೇ ಏಕೆ?
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಜತೆಗೆ ಅವರ ಮೂಲ ಮನೆಯೂ ಇದೇ ರಸ್ತೆಯಲ್ಲಿದೆ. ಟೆಂಡರ್‌ ಶ್ಯೂರ್‌ ರಸ್ತೆಗೆ ಸವದತ್ತಿ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿರುವ ಕುರಿತು ಅವರು ಹೇಳುವುದು ಹೀಗೆ...

‘ಹಳೆಯ ಹಾಗೂ ಹೊಸ ಧಾರವಾಡವನ್ನು ಸಂಪರ್ಕಿಸುವ ಪ್ರಮುಖ ಕೊಂಡಿ ಈ ರಸ್ತೆ. ಈ ರಸ್ತೆಯಲ್ಲಿ ಶ್ರೀಮಂತರೂ ಇದ್ದಾರೆ. ಬಡವರೂ ಇದ್ದಾರೆ. ಹಾಗೆಯೇ ಆಧುನಿಕ ಶೈಲಿಯ ಮನೆಗಳೂ ಇವೆ, ಹಿಂದಿನ ಕಾಲದ ಮನೆಗಳೂ ಇವೆ. ಹಾಗೆಂದ ಮಾತ್ರಕ್ಕೆ ಟೆಂಡರ್‌ ಶ್ಯೂರ್‌’ ಎಂಬ ಆಧುನಿಕ ತಲೆಮಾರಿನ ರಸ್ತೆ ಕೇವಲ ಶ್ರೀಮಂತರು ಇರುವ ಬಡಾವಣೆಗಳಿಗೆ ಮಾತ್ರ ಸೀಮಿತವಲ್ಲ. ಇಂಥ ರಸ್ತೆಗೂ ಅದು ಹೊಂದುತ್ತದೆ ಎಂಬುದು ಈ ಯೋಜನೆ ಮೂಲಕ ಸಾಬೀತಾಗಲಿದೆ’ ಎನ್ನುತ್ತಾರೆ.

‘ಸುಭಾಸ ರಸ್ತೆ, ಕಾಲೇಜು ರಸ್ತೆಗಳು ಈಗಾಗಲೇ ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆಗೊಂಡಿವೆ. ಆದರೆ ಉಳಿದಿದ್ದ ಈ ರಸ್ತೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸುವುದು ಒಂದೆಡೆಯಾದರೆ, ಶಾಶ್ವತ ಪರಿಹಾರ ಕಲ್ಪಿಸುವುದು ಮತ್ತೊಂದು ಉದ್ದೇಶವಾಗಿತ್ತು. ಇಲ್ಲಿನ ಅಗತ್ಯಗಳಿಗೆ ತಕ್ಕಂತ ಜನ ಅರ್ಬನ್ ಸ್ಪೇಸ್ ಸಂಸ್ಥೆ ಯೋಜನೆಯ ವಿನ್ಯಾಸವನ್ನು ಸಿದ್ಧಪಡಿಸಿದರು. ಅದಕ್ಕೆ ವಿಶ್ವಬ್ಯಾಂಕ್‌ನ ನೆರವೂ ಲಭಿಸಿದೆ. ಒಟ್ಟು ₹23ಕೋಟಿ ವೆಚ್ಚದ ಈ ಕಾಮಗಾರಿಗೆ ₹18ಕೋಟಿ ವಿಶ್ವಬ್ಯಾಂಕ್‌ ಆರ್ಥಿಕ ಸಹಕಾರ ನೀಡಿದೆ. ಶೇ 25ರಷ್ಟು ಹಣವನ್ನು ಕೆಶಿಪ್‌ ನೀಡಲಿದೆ’ ಎಂದರು.

‘ಈ ರಸ್ತೆ ಒಂದೊಂದು ಹಂತದಲ್ಲಿ ಒಂದೊಂದು ಅಳತೆಯಲ್ಲಿದೆ. ಹೀಗಾಗಿ ಬೆಂಗಳೂರಿಗಿಂತ ಭಿನ್ನ ಪರಿಸ್ಥಿತಿಯ ಈ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಒಂದು ಸವಾಲಿನ ಕೆಲಸ. ಜತೆಗೆ ಲಭ್ಯವಿರುವ ಸ್ಥಳಾವಕಾಶ ಹಾಗೂ ಇಲ್ಲಿನ ಭೌಗೋಳಿಕ ವಿಶೇಷತೆಗಳನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆ ವಿನ್ಯಾಸ ಸಿದ್ಧಪಡಿಸಲಾಗಿದೆ. ರಸ್ತೆ ಹೆಚ್ಚು ಅಗಲ ಇಲ್ಲದ ಕಾರಣ ಸೈಕಲ್ ಟ್ರ್ಯಾಕ್ ಇರುವುದಿಲ್ಲ. ಉಳಿದಂತೆ ಮತ್ತೆಲ್ಲವೂ ಟೆಂಡರ್‌ ಶ್ಯೂರ್‌ ಮಾದರಿಯಲ್ಲೇ ಇರುತ್ತದೆ’ ಎಂದು ಅರವಿಂದ ಹೇಳಿದರು.

‘ಬೆಂಗಳೂರಿನಲ್ಲಿರುವಂತೆಯೇ ಅವಳಿ ನಗರದ ರಸ್ತೆಗಳನ್ನೂ ಮೇಲ್ದರ್ಜೆಗೆ ಏರಿಸುವ ದೃಷ್ಟಿಯಿಂದ 14 ರಸ್ತೆಗಳ ಅಭಿವೃದ್ಧಿಗೆ ಈ ಹಿಂದಿನ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಅದರಂತೆಯೇ ಧಾರವಾಡದಲ್ಲಿರುವ ಟೋಲ್‌ನಾಕಾದಿಂದ ನುಗ್ಗಿಕೇರಿವರೆಗಿನ ರಸ್ತೆ, ನವನಗರದಲ್ಲಿನ ರಸ್ತೆಗಳನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯೂ ಇದೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.