ADVERTISEMENT

ರೈಲಿನಲ್ಲಿ ಮಹಿಳಾ ಶಕ್ತಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 10:50 IST
Last Updated 9 ಮಾರ್ಚ್ 2017, 10:50 IST
ರೈಲಿನಲ್ಲಿ ಮಹಿಳಾ ಶಕ್ತಿ ಪ್ರದರ್ಶನ
ರೈಲಿನಲ್ಲಿ ಮಹಿಳಾ ಶಕ್ತಿ ಪ್ರದರ್ಶನ   
ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಹುಬ್ಬಳ್ಳಿ–ಪ್ಯಾಸೆಂಜರ್‌ ರೈಲಿನಲ್ಲಿ ಒಂಬತ್ತು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಇದೇ ಪ್ರಥಮ ಬಾರಿಗೆ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು.
 
ಪ್ಯಾಸೆಂಜರ್‌ ರೈಲು ಸಂಖ್ಯೆ (56907) ಹುಬ್ಬಳ್ಳಿಯಿಂದ ಸಂಜೆ 6.55ಕ್ಕೆ ಧಾರವಾಡಕ್ಕೆ ಪ್ರಯಾಣ ಬೆಳೆಸಿತು. ಈ ರೈಲಿನಲ್ಲಿ ಶೇ 90ರಷ್ಟು ಸಿಬ್ಬಂದಿ ಮಹಿಳೆಯರೇ ಇದ್ದರು, ರೈಲನ್ನು ಚಲಾಯಿಸಿದ್ದು ಮಾತ್ರ ಪುರುಷ ಲೊಕೊ ಪೈಲಟ್‌. 
 
ಇಬ್ಬರು ಸಹಾಯಕ ಲೊಕೊ ಪೈಲಟ್‌ಗಳ ಪೈಕಿ ಒಬ್ಬರಾದ ರೆಹಾನಾ ಬೇಗಂ ಕರ್ತವ್ಯದಲ್ಲಿದ್ದರು. ಇವರೊಂದಿಗೆ ಐದು ಟಿಕೆಟ್‌ ಪರೀಕ್ಷಕರಾದ ಎಂ. ಸರಿತಾ, ಎಂ. ಪುಷ್ಪಲೀಲಾ, ಎಸ್‌. ತುಳಸಿ, ವಿಜಯಲಕ್ಷ್ಮಿ ಹಾಗೂ ವೆಂಕಟಲಕ್ಷ್ಮಿ ಹಾಗೂ ಗಾರ್ಡ್‌ ನಾಗ್ಪುರದ ಸಾರಿಕಾ ಗಾಣೇಗರ ಇದ್ದರು. ಇವರೊಂದಿಗೆ ಆರ್‌ಪಿಎಫ್‌ನ ಇಬ್ಬರು ಕಾನ್‌ಸ್ಟೆಬಲ್‌ಗಳಾದ ಪ್ರಿಯಾಂಕಾ ಗೌತಮ್‌, ಶಾಲು ಶೈನಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
 
ರೆಹಾನಾ ಬೇಗಂ ಕಳೆದ ಮೂರು ವರ್ಷಗಳಿಂದ ಲೊಕೊ ಪೈಲಟ್‌ ಆಗಿ ಕೆಲಸ ಮಾಡುತ್ತಿದ್ದರೆ, ಸಾರಿಕಾ ಕಳೆದ ಏಳು ವರ್ಷಗಳಿಂದ ಗಾರ್ಡ್‌ ಹುದ್ದೆಯಲ್ಲಿದ್ದಾರೆ.
‘ನೈರುತ್ಯ ರೈಲ್ವೆಯಲ್ಲಿ ಹಲವು ಮಹಿಳಾ ಸಿಬ್ಬಂದಿ ಇದ್ದಾರೆ. ಅದರಲ್ಲಿಯೂ, ಟಿಕೆಟ್‌ ಪರೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಆದರೆ, ಬೇರೆ ಬೇರೆ ಪಾಳಿಯಲ್ಲಿ ಅವರು ಕೆಲಸ ಮಾಡುತ್ತಾರೆ. ಇದೇ ಮೊದಲ ಬಾರಿಗೆ ಶೇ 90ರಷ್ಟು ಮಹಿಳಾ ಸಿಬ್ಬಂದಿ ಒಂದೇ ರೈಲಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಹಿಳಾ ದಿನದ ಅಂಗವಾಗಿ ನೈರುತ್ಯ ರೈಲ್ವೆ ಈ ಅವಕಾಶ ಒದಗಿಸಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದರು. ವಿಶೇಷ ದಿನಕ್ಕೆ, ವಿಶೇಷವಾದ ಅವಕಾಶ ನೀಡಿದ್ದಕ್ಕೆ ಮಹಿಳಾ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು. 
 
ಮಹಿಳಾ ದಿನ ಆಚರಣೆ: ಮಹಿಳಾ ದಿನದ  ಅಂಗವಾಗಿ ನೈರುತ್ಯ ರೈಲ್ವೆಯ ವತಿಯಿಂದ ಗದಗ ರಸ್ತೆಯ ರೈಲ್‌ ಸೌಧದಲ್ಲಿ ಬುಧವಾರ ಮಹಿಳಾ ಉದ್ಯೋಗಿಗಳಿಗೆ ಸ್ವಯಂ ರಕ್ಷಣೆ ತಂತ್ರಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಕರಾಟೆ ಬ್ಲ್ಯಾಕ್‌ ಬೆಲ್ಟ್‌ ಪಟು ಮುಸ್ಕಾನ್‌ ಕ್ಯೂ. ಸುಬೇದಾರ್‌ ಪ್ರಾತ್ಯಕ್ಷಿಕೆ ನೀಡಿದರು. 
 
ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ ಮಾತನಾಡಿದರು. ಮುಖ್ಯ ಸಿಬ್ಬಂದಿ ಅಧಿಕಾರಿ ಎಸ್‌.ಕೆ. ಅಲಬೇಲ ಹಾಜರಿದ್ದರು. ರೈಲ್ವೆ ನೌಕರರ ಕುಟುಂಬದವರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. 
 
ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ದೀಪಾಲಿ ಗುಪ್ತಾ ಉದ್ಘಾಟಿಸಿದರು. ಆಟೋಟ ಹಾಗೂ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.