ADVERTISEMENT

ವಾರ್ಡ್‌ಗೆ ಸಿ.ಸಿ. ಟಿವಿ ಕ್ಯಾಮೆರಾ ಕಣ್ಗಾವಲು!

ನಾಗರಿಕರ ಸುರಕ್ಷತೆ ಮತ್ತು ಭದ್ರತೆ ಉದ್ದೇಶ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 6:32 IST
Last Updated 22 ಏಪ್ರಿಲ್ 2017, 6:32 IST
ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 56ನೇ ವಾರ್ಡ್‌ ‘ಸಿ.ಸಿ. ಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುವ ಪ್ರಥಮ ವಾರ್ಡ್‌’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
 
ಮಹಿಳೆಯರ ಹಾಗೂ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಸಿ.ಸಿ.ಕ್ಯಾಮೆರಾ ಅಳವಡಿಸಲಾಗಿದೆ ಎಂದು ಪಾಲಿಕೆ ಸದಸ್ಯ ನಾರಾಯಣ ಜರತಾರಘರ ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 
ವಾರ್ಡ್‌ ವ್ಯಾಪ್ತಿಯಲ್ಲಿರುವ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಲು, ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸುವವರ ಮೇಲೆ ನಿಗಾ ವಹಿಸಲು ಸಿ.ಸಿ.ಟಿವಿ ಕ್ಯಾಮೆರಾ ಸಹಾಯವಾಗಲಿದೆ ಎಂದರು.
 
ವಾರ್ಡ್‌ನಲ್ಲಿ ರಸ್ತೆ ಅಪಘಾತಗಳ ಪ್ರಮಾಣವನ್ನು ನಿಯಂತ್ರಣ ಮಾಡಲು, ಮನೆಗಳ್ಳತನ ಹಾಗೂ ಸರಗಳ್ಳತನದಂತಹ ಪ್ರಕರಣ ನಡೆದರೆ ಸುಲಭವಾಗಿ ಪತ್ತೆಹಚ್ಚಲು ಹಾಗೂ ಇತರೆ ಯಾವುದೇ ರೀತಿಯ ದುಷ್ಕೃತ್ಯಗಳು ಮತ್ತು ಅಹಿತಕರ ಘಟನೆಗಳು ಸಂಭವಿಸಿದರೆ ಕೂಡಲೇ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಲು ಸಹಕಾರಿಯಾಗಲಿದೆ ಎಂಬ ಉದ್ದೇಶದಿಂದ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.
 
ಪ್ರತಿಯೊಂದು ಕ್ಯಾಮೆರಾಗಳು 3 ಮೆಗಾ ಫಿಕ್ಸಲ್‌ ಸಾಮಾರ್ಥ್ಯ ಹೊಂದಿವೆ. ಸಿ.ಸಿ. ಟಿವಿಕ್ಯಾಮೆರಾಗಳ ನಿರ್ವಹಣೆಯನ್ನು ಅನ್ನು ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಘಂಟಿಕೇರಿ ಮತ್ತು ಬೆಂಡಿಗೇರಿ ಪೊಲೀಸ್‌ ಠಾಣೆಗಳಿಗೆ ನೀಡಲಾಗಿದೆ. ಈ ಎಲ್ಲ ಸಿ.ಸಿ. ಟಿವಿಕ್ಯಾಮೆರಾಗಳ ಕಾರ್ಯವನ್ನು ನಿರಂತರವಾಗಿ ವೀಕ್ಷಿಸಲು 55 ಇಂಚಿನ ಮಾನಿಟರ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು. 
 
ಉದ್ಘಾಟನೆ ನಾಳೆ: ಇದೇ 23 ರಂದು ಸಂಜೆ 6.30ಕ್ಕೆ ಘಂಟಿಕೇರಿ ಓಣಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಉದ್ಘಾಟಿಸಲಿದ್ದಾರೆ ಎಂದರು.
 
ಅಭಿವೃದ್ಧಿಗೆ ಆದ್ಯತೆ: ವಾರ್ಡ್‌ನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸೌಂದರ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಮೂರು ಮಹಾದ್ವಾರಗಳ ನಿರ್ಮಾಣ, ಪ್ರಮುಖ ಓಣಿಗಳ ರಸ್ತೆಗಳಿಗೆ ಪಾದಚಾರಿ ಮಾರ್ಗ ನಿರ್ಮಾಣ ಮತ್ತು ರಸ್ತೆ ಪಕ್ಕದಲ್ಲಿ ಗಿಡಗಳನ್ನು ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
 
ಪೌರಕಾರ್ಮಿಕರು ಮುಂದಿನ ತಿಂಗಳಿಂದ ಪ್ರತಿ ಓಣಿಗೆ ತೆರಳಿ ಒಣ ಕಸ ಮತ್ತು ಹಸಿ ಕಸ ಸಂಗ್ರಹ ಮಾಡಲಿದ್ದಾರೆ ಹಾಗೂ ಈ ಕುರಿತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
 
ಸಾರ್ವಜನಿಕರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಸೊಳ್ಳೆಗಳ ನಿರ್ಮೂಲನೆಗಾಗಿ  ಆರು ಹೊಸ ಫಾಗಿಂಗ್‌ ಮಷಿನ್‌ಗಳನ್ನು ಪ್ರತ್ಯೇಕವಾಗಿ ವಾರ್ಡ್‌ ಬಳಕೆಗೆ ಖರೀದಿಸಲಾಗಿದೆ ಮತ್ತು ಯುವಕರಿಗಾಗಿ ಜಿಮ್‌ ಹಾಗೂ ಗ್ರಂಥಾಲಯ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ನಾರಾಯಣ ಜರತಾರಘರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.