ADVERTISEMENT

ಸಂಘಟಿತರಾಗಲು ಪೌರಕಾರ್ಮಿಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 5:49 IST
Last Updated 3 ಸೆಪ್ಟೆಂಬರ್ 2017, 5:49 IST

ಹುಬ್ಬಳ್ಳಿ: ಗುತ್ತಿಗೆದಾರರಿಂದ ಪೌರಕಾರ್ಮಿಕರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಬೇಕಾದರೆ ಹಾಗೂ ಸರ್ಕಾರದ ಸೌಲಭ್ಯಗಳು ನ್ಯಾಯಯುತವಾಗಿ ಸಿಗಬೇಕಾದರೆ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಸಲಹೆ ನೀಡಿದರು. ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಶನಿವಾರ ನಡೆದ ಪೌರಕಾರ್ಮಿಕರ ಸಭೆಯಲ್ಲಿ ಅವರು ಮಾತನಾಡಿದರು.

ಗುತ್ತಿಗೆ ಪೌರಕಾರ್ಮಿಕರನ್ನು ಗುತ್ತಿಗೆದಾರರು ಕಡಿಮೆ ವೇತನ ನೀಡಿ ಶೋಷಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಮನಗಂಡು ರಾಜ್ಯ ಸರ್ಕಾರವು ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಮುಂದಾಗಿದೆ ಎಂದರು.

ಪೌರಾಕಾರ್ಮಿಕರ ಕುಂದು–ಕೊರತೆ ನಿವಾರಣೆ ಕುರಿತು ಚರ್ಚಿಸುವ ಸಂಬಂಧ ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಬೇಡಿಕೆಗಳನ್ನು ಶಾಸಕರು, ಆಯುಕ್ತರ ಗಮನಕ್ಕೆ ತರಬೇಕು.  ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಆದ್ಯತೆ ಮೇರೆಗೆ 320 ಮನೆ ನಿರ್ಮಿಸಿಕೊಡಲಾಗುವುದು. ಈ ಸಂಬಂಧ ಮಂಟೂರು ರಸ್ತೆಯಲ್ಲಿ ಎರಡು ಎಕರೆ ಜಾಗ ಮೀಸಲಿಟ್ಟಿದ್ದು, ಶೀಘ್ರದಲ್ಲೇ ಭೂಮಿ ಪೂಜೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಕ್ರಿಮಿನಲ್‌ ಪ್ರಕರಣ: ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಕೆಲಸ ಕಾಯಂ ಮಾಡುವುದಾಗಿ ಯಾರಾದರೂ ಹಣ ಕೇಳಿದರೆ ಅಂತವರ ಬಗ್ಗೆ ಮಾಹಿತಿ ನೀಡಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೇಡಿಕೆ: ‘ಗೃಹ ಭಾಗ್ಯ’ ಯೋಜನೆಯಡಿ ಪೌರಕಾರ್ಮಿಕರಿಗೆ ನಿವೇಶನ ಮತ್ತು ಮನೆಗಳನ್ನು ನೀಡಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಂಘದಿಂದ ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಒಟ್ಟು 696 ಕಾಯಂ ಪೌರಕಾರ್ಮಿಕರಿದ್ದು, ‘ಗೃಹ ಭಾಗ್ಯ’ ಯೋಜನೆಯಡಿ 440 ಪೌರಕಾರ್ಮಿಕರಿಗೆ ನಿವೇಶನ ನೀಡಲಾಗಿದೆ. ಇನ್ನುಳಿದ 253 ಪೌರಕಾರ್ಮಿಕರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ಪಾಲಿಕೆಯ ನಿವೃತ್ತ ಪೌರಕಾರ್ಮಿಕರಿಗೆ ಆರು ತಿಂಗಳಿಂದ ನಿವೃತ್ತಿ ವೇತನ ಸಿಕ್ಕಿಲ್ಲ. ನಿವೃತ್ತಿ ವೇತನ ತಕ್ಷಣ ನೀಡಬೇಕು. ಪೌರಕಾರ್ಮಿಕರು ಮರಣಹೊಂದಿದರೆ ಅವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ವಿಳಂಬ ಮಾಡದೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಗಂಗಾಧರ ಎಚ್‌.ಟಗರಗುಂಟಿ, ಗೌರವಾಧ್ಯಕ್ಷ ನಿಂಗಪ್ಪ ಮೊರಬದ, ಉಪಾಧ್ಯಕ್ಷ ಹೊನ್ನಪ್ಪ ಬಿ.ದೇವಗಿರಿ, ಬಿ.ಬಿ.ಕೆಂಪಣ್ಣವರ, ಪ್ರಧಾನ ಕಾರ್ಯದರ್ಶಿ ಬಸಪ್ಪ ಎಸ್‌.ಮಾದರ, ಕಾರ್ಯದರ್ಶಿ ರಮೇಶ ರಾಮಯ್ಯನವರ, ಸಹ ಕಾರ್ಯದರ್ಶಿ ಹಾಲಪ್ಪ ಯರಮಸಾಳ.  ಕೋಶಾಧ್ಯಕ್ಷ ವೆಂಕಟೇಶ ಟಗರಗುಂಟಿ, ಸಂಘಟನಾ ಕಾರ್ಯದರ್ಶಿ ದುರಗಪ್ಪ ವೀರಾಪುರ, ಶಿವಾನಂದ ರಾಮಯ್ಯನವರ, ಶಿವಲಿಂಗ ಜಾಲಹಳ್ಳಿ,  ಸದಾನಂದ ಕೊನಾಪುರ, ಪೆದ್ದಣ್ಣ ಗುರಗುಂಟಿ, ಓಬಣ್ಣ ಅಂತರಗಂಗಾ, ಮಂಜುನಾಥ ಬಸಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.