ADVERTISEMENT

ಸುಟ್ಟು ಬಿಸಾಕುತ್ತಿದ್ದ ಮೇವು ಈಗ ‘ಚಿನ್ನ’

ಚರಂತಯ್ಯಾ ಹಿರೇಮಠ
Published 3 ಜನವರಿ 2017, 10:05 IST
Last Updated 3 ಜನವರಿ 2017, 10:05 IST

ನವಲಗುಂದ: ಒಂದು ಕಾಲಕ್ಕೆ ಸುಟ್ಟು ಗೊಬ್ಬರದ ರೀತಿ ಬಳಸುತ್ತಿದ್ದ ಗೋವಿನಜೋಳದ ಮೇವು ಈಗ ರೈತರ ಆಶಾಕಿರಣವಾಗಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅದರ ಕೊರತೆಯೂ ಎದುರಾಗಿದ್ದು, ಜಾನುವಾರು ಸಾಕುವುದಕ್ಕೂ ರೈತರು ಹರಸಾಹಸ ಪಡುತ್ತಿದ್ದಾರೆ. ಎಲ್ಲಿ ನೋಡಿದರೂ ಬರಿದಾದ ಭೂಮಿ. ಹಸಿರು ಹುಲ್ಲು ಇಲ್ಲದೆ ಜಾನುವಾರು ಸೊರಗುತ್ತಿವೆ. ಅವುಗಳ ಕಷ್ಟ ನೋಡದ ರೈತ ಅಗ್ಗದ ಬೆಲೆಗೇ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿರುವ ದೃಶ್ಯಗಳು ತಾಲ್ಲೂಕಿನಲ್ಲಿ ಕಂಡುಬರುತ್ತಿವೆ.

‘ಸರಾಸರಿ ₹50ರಿಂದ 80  ಸಾವಿರಕ್ಕೆ ಮಾರಾಟವಾಗುವ ಜೋಡೆತ್ತುಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹಾಲು ಕೊಡುವ ಆಕಳು, ಎಮ್ಮೆ ಪರಿಸ್ಥಿತಿಯೂ ಇದೇ ರೀತಿ ಇದೆ’ ಎನ್ನುತ್ತಾರೆ ಗುಡಿಸಾಗರ ಗ್ರಾಮದ ರೈತ ಬಸಯ್ಯ ಮಠಪತಿ.

ಮೇವು ಸುಡುತ್ತಿದ್ದ ರೈತ: ತಾಲ್ಲೂಕಿನಲ್ಲಿ ಸಾಮಾನ್ಯವಾಗಿ ಮುಂಗಾರು ಹಂಗಾಮಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗುತ್ತದೆ. ತೆನೆ ತೆಗೆದ ನಂತರ ಮೇವನ್ನು ಜಮೀನಿನಲ್ಲೇ ಸುಟ್ಟು, ಹಿಂಗಾರು ಹಂಗಾಮಿಗೆ ಭೂಮಿ ಹದಗೊಳಿಸಲಾಗುತ್ತಿತ್ತು. ಆದರೆ, ಈ ಬಾರಿ ಸತತ ಬರಗಾಲದ ಕಾರಣ ಮೇವಿಗೆ ತೀವ್ರ ಕೊರತೆ ಎದುರಾಗಿದೆ. ಹೀಗಾಗಿ ಗೋವಿನಜೋಳದ ಮೇವು ಒಂದು ರೀತಿ ಬಂಗಾರದಂತಾಗಿದೆ ಎನ್ನುತ್ತಾರೆ ರೈತರು.

ಕೆಲ ರೈತರು ಅಲ್ಲಿ– ಇಲ್ಲಿ ಮೇವು ತಂದು ಜಾನುವಾರು ಸಾಕುತ್ತಿದ್ದಾರೆ. ಪಂಪ್‌ಸೆಟ್ ನೀರು ಹಾಯಿಸಿ ಬೆಳೆದ ಗೋವಿನಜೋಳದ ಮೇವಿಗೂ ಎಲ್ಲಿಲ್ಲದ ಬೇಡಿಕೆ ಬಂದಿದೆ. ತೆನೆ ಬಿಡಿಸುವುದಕ್ಕೆ ಈ ಹಿಂದೆ ಕೂಲಿ ಕೊಡಬೇಕಿತ್ತು. ಆದರೆ, ಈಗ ಕೂಲಿ ಬದಲಿಗೆ, ಮೇವು ಕೊಡುತ್ತೇವೆಂದರೂ ತೆನೆ ಬಿಡಿಸಲು ಜನ ಬರುತ್ತಿದ್ದಾರೆ ಎಂದು ರೈತರು ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.