ADVERTISEMENT

‘ಸೂಕ್ತ ಪರಿಹಾರಕ್ಕಾಗಿ ಸತತ ಹೋರಾಟ’

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 5:24 IST
Last Updated 2 ಸೆಪ್ಟೆಂಬರ್ 2017, 5:24 IST
ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲು ಗಜೆಟ್‌ನಲ್ಲಿ ಹೊರಡಿಸಲಾದ ಅಧಿಸೂಚನೆಯ ಪ್ರತಿ
ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲು ಗಜೆಟ್‌ನಲ್ಲಿ ಹೊರಡಿಸಲಾದ ಅಧಿಸೂಚನೆಯ ಪ್ರತಿ   

ಹುಬ್ಬಳ್ಳಿ: ಖಾಸಗಿಯವರಿಗೆ ಸೇರಿದ ಆಸ್ತಿಯನ್ನು ಇಲ್ಲಿನ ವಿಮಾನ ನಿಲ್ದಾಣ ವಿಸ್ತರಣೆ ಸಂಬಂಧ ಭೂಸ್ವಾಧೀನ ಮಾಡಿಕೊಂಡ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ನ್ಯಾಯಯುತ ಪರಿಹಾರ ನೀಡದಿರುವುದನ್ನು ವಿರೋಧಿಸಿ ದಶಕದಿಂದ ಹೋರಾಟ ಮಾಡುತ್ತಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಸೇವಾ ಸಮಿತಿ ಇದೀಗ ಅಂತಿಮವಾಗಿ ಹೈಕೋರ್ಟ್‌ ಮೊರೆ ಹೋಗಲು ಚಿಂತನೆ ನಡೆಸಿದೆ.

2007ರಲ್ಲಿ ಕೆಐಎಡಿಬಿ ಕಾಯ್ದೆ 1966ರ ವಿವಿಧ ಅಧಿನಿಯಮಗಳ ಪ್ರಕಾರ ಜಿಲ್ಲಾಡಳಿತ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡು ಪರಿಹಾರ ಘೋಷಿಸಿದೆ. ವಿಮಾನ ನಿಲ್ದಾಣದ ಪಕ್ಕದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದ ಹಾಗೂ ಖಾಲಿ ನಿವೇಶನ ಹೊಂದಿದ್ದ 88 ಕುಟುಂಬಗಳಿಗೆ ಪ್ರತಿ ಚದರ ಮೀಟರ್‌ಗೆ ಕೇವಲ ₹ 600 ಪರಿಹಾರ ನಿಗದಿಪಡಿಸಿ ಅಂದಿನ ಜಿಲ್ಲಾಧಿಕಾರಿ ದರ್ಪಣ ಜೈನ್‌ ಅವರು ಚೆಕ್‌ಗಳನ್ನು ನೀಡಿದ್ದರು.

ಆದರೆ, 2007ರಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ಕಾಯ್ದೆಯನ್ನು ಜಾರಿಗೊಳಿಸಿದ್ದು, ಅದರಲ್ಲಿ ನಿವೇಶನ ಹಾಗೂ ಮನೆ ಕಳೆದುಕೊಳವವರಿಗೆ ಉಚಿತ ನಿವೇಶನ ಕೊಡಬೇಕು. ಮಾರುಕಟ್ಟೆಯ ಮೌಲ್ಯ ಆಧರಿಸಿ ಪರಿಹಾರ ನೀಡಬೇಕು. ಭೂಸ್ವಾಧೀನ ಮಾಡಿಕೊಳ್ಳುವ ಬಗ್ಗೆ ನೋಟಿಸ್ ಹೊರಡಿಸಿದಾಗಿನಿಂದ ಪರಿಹಾರ ನೀಡುವವರೆಗೆ ಪರಿಹಾರದ ಮೊತ್ತಕ್ಕೆ ಶೇ 12ರಷ್ಟು ಬಡ್ಡಿ ಕೊಡಬೇಕು.

ADVERTISEMENT

ಸಂತ್ರಸ್ತರಲ್ಲಿ ಕೆಲವರನ್ನು ಪರಿಹಾರ ನಿಗದಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಇವುಗಳಲ್ಲಿ ಯಾವುದನ್ನೂ ಪರಿಹಾರ ವಿತರಣೆ ಸಂದರ್ಭದಲ್ಲಿ ಪಾಲಿಸಿಲ್ಲ ಎಂದು ‘ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಸೇವಾ ಸಮಿತಿ’ ಕಾರ್ಯದರ್ಶಿ, ನಿವೃತ್ತ ಏರ್‌ ಕಮೊಡರ್‌ ಸಿ.ಎಸ್‌. ಹವಾಲ್ದಾರ್‌ ಟೀಕಿಸಿದರು.

‘ಈ ಸಂಬಂಧ ಹಲವು ಬಾರಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಾಗಿತ್ತು. ನಮ್ಮ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಆಯೋಗ ಪ್ರಕರಣವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾಯಿಸಿತ್ತು. ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಸೂಕ್ತ ಪರಿಹಾರ ನೀಡುವಂತೆ ಆಯೋಗ ಆದೇಶ ನೀಡಿದೆ. ಆದರೂ, ಜಿಲ್ಲಾಧಿಕಾರಿಗಳ ನೇತೃತ್ವದ ಪರಿಹಾರ ನಿರ್ಧರಣಾ ಸಮಿತಿ ಈ ಆದೇಶ ಪಾಲಿಸಲು ಮುಂದಾಗಿಲ್ಲ’ ಎಂದು ಆರೋಪಿಸಿದರು.

ಜಮೀನಿಗೆ ಹೆಚ್ಚು ಪರಿಹಾರ! ‘ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾದ ಜಮೀನಿಗೆ ನಮ್ಮ ಮನೆಗಳಿಗಿಂತ ಹೆಚ್ಚು ಪರಿಹಾರ ನೀಡಲಾಗಿದೆ. ಗೋಕುಲ ರಸ್ತೆಯಲ್ಲಿ ಮಾರ್ಗಸೂಚಿ ದರ ಪ್ರತಿ ಎಕರೆ ಶೇತ್ಕಿ ಭೂಮಿಗೆ ₹ 3.42 ಲಕ್ಷ ಇದೆ. ಆದರೆ, 26 ಲಕ್ಷ ಪರಿಹಾರ ನೀಡುವ ಮೂಲಕ ಮಂಡಳಿಯು ಎಂಟು ಪಟ್ಟು ಹೆಚ್ಚಿನ ಪರಿಹಾರ ನೀಡಿದೆ. ನಮಗೆ ಮಾತ್ರ ನಾಲ್ಕು ಪಟ್ಟು ಪರಿಹಾರ ನೀಡಿದೆ. ಈ ತಾರತಮ್ಯವನ್ನು ನಾವು ಪ್ರಶ್ನಿಸುತ್ತಲೇ ಬಂದಿದ್ದೇವೆ’ ಎಂದು ಹವಾಲ್ದಾರ್‌ ವಿವರಿಸಿದರು.

‘ಬೆಂಗಳೂರಿನಲ್ಲಿ ಮೆಟ್ರೊ ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಾಕಷ್ಟು ಉತ್ತಮ ಪರಿಹಾರ ನೀಡಲಾಗಿದೆ. ಹಲವು ಕಡೆ ಉಚಿತ ನಿವೇಶನಗಳನ್ನೂ ನೀಡಲಾಗಿದೆ. ಆದರೆ, ನಮ್ಮನ್ನು ಒಕ್ಕಲೆಬ್ಬಿಸಿದ ಸರ್ಕಾರ ಕನಿಷ್ಟ ನಮಗೆ ಉಚಿತ ನಿವೇಶನವನ್ನೂ ನೀಡಲಿಲ್ಲ. ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇತರೆ ಸಾಮಾನ್ಯರಂತೆಯೇ ನಾವೂ ನಿವೇಶನಗಳನ್ನು ಖರೀದಿಸಬೇಕಾಯಿತು’ ಎಂದು ವಿವರಿಸಿದರು.

‘ಇದರಿಂದ 88 ಕುಟುಂಬಗಳಿಗೆ ಸಾಕಷ್ಟು ಅನ್ಯಾಯವಾಗಿದ್ದು, ಇನ್ನೊಂದು ಬಾರಿ ಜಿಲ್ಲಾಧಿಕಾರಿಗಳನ್ನು ಮುತ್ತಿಗೆ ಹಾಕಲಿದ್ದೇವೆ. ಅದಕ್ಕೂ ಜಿಲ್ಲಾಡಳಿತ ಎಚ್ಚರಗೊಳ್ಳದಿದ್ದರೆ ಹೈಕೋರ್ಟ್‌ನಲ್ಲಿ ದಾವೆ ಹೂಡುವುದು ನಿಶ್ಚಿತ’ ಎಂದು ಸ್ಪಷ್ಟಪಡಿಸಿದರು.

* * 

ಭಾರತ ಸರ್ಕಾರದ ಪುನರ್ವಸತಿ ಕಾಯ್ದೆಯನ್ವಯ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಕೇಳಿದ್ದೆವು. ಹಾಗೆ ಕೊಡಲು ಬರುವುದಿಲ್ಲ ಎನ್ನುತ್ತಿದ್ದಾರೆ
ಸಿ.ಎಸ್‌. ಹವಾಲ್ದಾರ್‌
ಸಮಿತಿಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.